ಅಜೆಕಾರು ಬಳಿ ಬೈಕಿಗೆ ಢಿಕ್ಕಿ ಹೊಡೆದ ಕಾರು : ಬೈಕ್‌ ಸವಾರನಿಗೆ ಗಂಭೀರ ಗಾಯ

ಕಾರ್ಕಳ, ನ.16: ಅಜೆಕಾರಿನ ಕಾಡುಹೊಳೆ ಬಳಿ ಇಂದು ಕಾರು ಮತ್ತು ಬೈಕ್‌ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬೈಕ್‌ ಸವಾರ ವರಂಗದ ಯಶೋಧರ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಶಿವಮೊಗ್ಗ ಕಡೆಗೆ ಹೋಗುತ್ತಿದ್ದ ಕೇರಳ ನೋಂದಣಿಯ ಕಾರಿನ ಅಪರಿಮಿತ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಕಾರಿನಲ್ಲಿ ಇಬ್ಬರು ಯುವಕರು ಮತ್ತು ಓರ್ವ ಯುವತಿ ಇದ್ದಳು. ಕಾಲೇಜು ವಿದ್ಯಾರ್ಥಿಗಳಂತೆ ಕಾಣುವ ಅವರು ಡ್ರಗ್‌ ನಶೆಯಲ್ಲಿದ್ದಂತೆ ಕಂಡು ಬಂದಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಪೊಲೀಸರು ಈ ವಿಚಾರವನ್ನು ದೃಢಪಡಿಸಿಲ್ಲ.

ಕಾಡುಹೊಳೆ ಡೈರಿ ಬಳಿ ಓವರ್‌ ಟೇಕ್‌ ಮಾಡುವ ಭರದಲ್ಲಿ ಕಾರು ಸಂಪೂರ್ಣ ರಾಂಗ್‌ ಸೈಡ್‌ ಗೆ ಹೋಗಿ ಕಾರ್ಕಳದತ್ತ ಬರುತ್ತಿದ್ದ ಬೈಕ್‌ ಗೆ ಢಿಕ್ಕಿ ಹೊಡೆದಿದೆ. ಬೈಕ್‌ ಸವಾರನ ಎರಡೂ ಕಾಲುಗಳಿಗೆ ಗಂಭೀರ ಸ್ವರೂಪದ ಗಾಯವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡೂ ಕಡೆ ಏರು ಇರುವ ಈ ರಸ್ತೆಯಲ್ಲಿ ಎದುರಿನಿಂದ ಬರುವ ವಾಹನ ಕಾಣಿಸುವುದಿಲ್ಲ. ಎದುರಿನಿಂದ ಬೈಕ್‌ ಬಂದದ್ದು ಕಾರು ಚಾಲಕನಿಗೆ ಕಾಣಿಸದೆ ಈ ಅಪಘಾತ ಸಂಭವಿಸಿದೆ.

































































error: Content is protected !!
Scroll to Top