ನಾನಿಂದು ಮಕ್ಕಳ ದಿನ ಆಚರಣೆ ಮಾಡಲಿಲ್ಲ ಏಕೆಂದರೆ…

ಇಂದಿಗೂ ಶಿವಕಾಶಿಯ ಪಟಾಕಿ ಮತ್ತು ಬೆಂಕಿಪೆಟ್ಟಿಗೆಯ ಕಂಪೆನಿಗಳಲ್ಲಿ ದುಡಿದು ತಿನ್ನುವ, ಆಗಾಗ ನಡೆಯುವ ಬೆಂಕಿ ಅವಘಡ ಮತ್ತು ಸ್ಫೋಟಗಳಲ್ಲಿ ಕೈ, ಕಣ್ಣು ಕಳೆದುಕೊಳ್ಳುವ ನತದೃಷ್ಟ ಮಕ್ಕಳು ಇಂದಿಗೂ ನನ್ನ ಕಣ್ಣ ಮುಂದೆ ಇದ್ದಾರೆ!
ಶಾಲೆಗಳಿಂದ ಹೊರಗೆ ಉಳಿದು ಇಂದಿಗೂ ಕೂಲಿ ಕೆಲಸ ಮಾಡಿ, ಹೊಟೇಲುಗಳಲ್ಲಿ ದುಡಿದು, ಗದ್ದೆಗಳಲ್ಲಿ ದುಡಿದು ತಮ್ಮ ತಮ್ಮ ಮನೆಗಳ ಅಪ್ರಾಪ್ತ ಯಜಮಾನರು ನನ್ನ ಕಣ್ಣ ಮುಂದಿದ್ದಾರೆ!
ಟಿವಿಯ ರಿಯಾಲಿಟಿ ಶೋಗಳಲ್ಲಿ ಬಾಲಕಲಾವಿದ ಆಗಿ, ಶಾಲೆಯನ್ನು ಮರೆತು, ಟಿವಿ ವಾಹಿನಿಗಳ TRP ಮತ್ತು ಹೆತ್ತವರ EGO ಖಜಾನೆಯನ್ನು ತುಂಬಿಸುವ ಪುಟಾಣಿ ಪಂಟರು ನನ್ನ ಕಣ್ಣ ಮುಂದೆ ಇದ್ದಾರೆ!
ಶಾಲೆಗಳಲ್ಲಿ ಪರೀಕ್ಷೆ ಎಂಬ ಒತ್ತಡಕ್ಕೆ ಸಿಲುಕಿ ಉಸಿರು ಕಟ್ಟುವ, ತಮ್ಮನಿಜವಾದ ಸಾಮರ್ಥ್ಯವನ್ನು ಮರೆತು, ಅಂಕಗಳ ಹಿಂದೆ ಕಂಬಳದ
ಕೋಣಗಳಾಗಿ ರೇಸಿಗೆ ನಿಂತ ಜೀನಿಯಸ್ ಕಿಡ್ಸ್ ನನ್ನ ಕಣ್ಣ ಮುಂದೆ ಇದ್ದಾರೆ!
ಮಹಾನಗರಗಳ ಬೀದಿಗಳಲ್ಲಿ ಚಿಂದಿ ಆಯುವ, ಭಿಕ್ಷೆ ಬೇಡುವ ಭವಿಷ್ಯದ ಭರವಸೆಯನ್ನು ಕಳೆದುಕೊಂಡ, ಅನಾಥ ಮಕ್ಕಳು ಕಣ್ಣ ಮುಂದಿದ್ದಾರೆ!
ಆನ್ಲೈನ್ ಕ್ಲಾಸ್ ಎಂಬ ಏಕಾಂತದ ಮತ್ತು ಏಕತಾನತೆಯ ತರಗತಿಯಲ್ಲಿ ಕಳೆದು ಹೋಗಿರುವ, ಸಂವಾದಕ್ಕೆ ಅವಕಾಶವೇ ಇಲ್ಲದೆ ಅಂತರ್ಮುಖಿ ಅದ ಪುಟಾಣಿ ಮೌನಿಗಳು ನನ್ನ ಕಣ್ಣು ಮುಂದೆ ಇದ್ದಾರೆ!
ಹೆಣ್ಣು ಎಂಬ ಒಂದೇ ಕಾರಣಕ್ಕೆ ತಾಯಿಯ ಗರ್ಭದಲ್ಲಿ ಕಣ್ಣು ತೆರೆಯುವ ಮೊದಲೇ ಉಸಿರು ಕಟ್ಟಿ ಸಾಯುವ ದೌರ್ಭಾಗ್ಯ ದೇವತೆಯರು ನನ್ನ ಕಣ್ಣ ಮುಂದೆ ಇದ್ದಾರೆ!
ಹೆತ್ತವರು ನಗು ಎಂದರೆ ನಗುವ, ಅಳು ಎಂದರೆ ಅಳುವ, ಕೀ ಕೊಟ್ಟ ಗೊಂಬೆಗಳೆ ಆಗಿರುವ ಅಡಾಪ್ಟೆಡ್ ಮಕ್ಕಳು ನನ್ನ ಮುಂದೆ ಇದ್ದಾರೆ.
ತಮ್ಮ ಅಗಾಧವಾದ ಪ್ರತಿಭೆಗಳನ್ನು ಮೂಟೆ ಕಟ್ಟಿ ಬದಿಗೆ ಇರಿಸಿ, ಮೊಬೈಲ್ ಎಂಬ ಮಾಯಾಜಾಲದಲ್ಲಿ ಕಳೆದು ಹೋಗಿರುವ ಅಸಂಖ್ಯ ಸೋಶಿಯಲ್ ನೆಟ್ ವರ್ಕ್ ಎಕ್ಸ್ಪರ್ಟ್ ಮಕ್ಕಳು ನನ್ನ ಮುಂದೆ ಇದ್ದಾರೆ!
ಜಗತ್ತಿನ ಪರಿಜ್ಞಾನವೇ ಇಲ್ಲದ ಪ್ರಾಯದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ, ಮಾನಸಿಕ ವೇದನೆಯನ್ನು ಯಾರೊಂದಿಗೂ ಹೇಳಲಾಗದೆ ಚಡಪಡಿಸುವ ಅಸಂಖ್ಯಾತ ಮಕ್ಕಳು ನನ್ನ ಕಣ್ಣ ಮುಂದೆ ಇದ್ದಾರೆ!
ಹೆಣ್ಣಾಗಿ ಹುಟ್ಟಿದ್ದೇ ತಪ್ಪು ಎಂಬ ಭಾವನೆಗೆ ತಳ್ಳಲ್ಪಡುವ, ತನ್ನ ಹೆಣ್ತನವನ್ನು ಶಪಿಸುವ, ತಿಂಗಳ ಮೂರು ದಿನ ಹೊರಗೆ ಕುಳಿತುಕೊಳ್ಳಲು ಮಾನಸಿಕವಾಗಿ ಸಿದ್ದ ಆಗುತ್ತಿರುವ ಸಾವಿರ ಸಾವಿರ ಹೆಣ್ಮಕ್ಕಳು ನನ್ನ ಕಣ್ಣ ಮುಂದೆ ಇದ್ದಾರೆ!
ಜಾಹೀರಾತುಗಳಲ್ಲಿ, ನೃತ್ಯ ಮತ್ತು ಸಂಗೀತದ ಶೋಗಳಲ್ಲಿ, ತನಗೆ ಇಷ್ಟ ಇಲ್ಲದಿದ್ದರೂ ಅರೆ ಬಟ್ಟೆ ಧರಿಸಿ ಕುಣಿಯುವ, ಮೈಕ್ ಹಿಡಿದು ಯಾರೋ ಬರೆದು ಕೊಟ್ಟ ಸ್ಕ್ರಿಪ್ಟನ್ನು ಉಲಿಯುವ, ಸೂಪರ್ ಸ್ಟಾರ್ ಕಿಡ್ಸ್ ನನ್ನ ಮುಂದೆ ಇದ್ದಾರೆ!
ತಲೆ ಮಾತ್ರ ದೊಡ್ಡದಾಗಿ ಬೆಳೆದಿರುವ, ಹೃದಯ ಶೂನ್ಯ ಆದ ಭಾವೀ ಜನಾಂಗ ನನ್ನ ಕಣ್ಣ ಮುಂದೆ ಇದೆ!
……..ಈ ಮೊದಲಾದ ಕಾರಣಗಳಿಗೆ ನಾನು ಇಂದು ಮಕ್ಕಳ ದಿನ ಆಚರಣೆ ಮಾಡಿಲ್ಲ! ಸಾರಿ ಮಕ್ಕಳೇ….
ರಾಜೇಂದ್ರ ಭಟ್ ಕೆ.









































































































error: Content is protected !!
Scroll to Top