Friday, September 24, 2021
spot_img
Homeಅಂಕಣನಮ್ಮೂರ ಶಾಲೆ- ನಮ್ಮ ಹೆಮ್ಮೆ : ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ

ನಮ್ಮೂರ ಶಾಲೆ- ನಮ್ಮ ಹೆಮ್ಮೆ : ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ

( ಭಾಗ 2)
ನಮ್ಮೂರ ಹೆಮ್ಮೆಯ ಶಾಲೆಗಳಲ್ಲಿ ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆಯು ಖಂಡಿತವಾಗಿಯೂ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಸರಕಾರಿ ಶಾಲೆಗಳು ಎಂದರೆ ಮೂಗು ಮುರಿಯುವ ಇಂದಿನ ದಿನಗಳಲ್ಲಿ ಈ ಶಾಲೆ ತನ್ನ ಸಾಧನೆಗಳಿಂದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಮೀರಿ ನಿಂತದ್ದು ಒಂದು ಅದ್ಭುತವಾದ ಸಾಧನೆ! ಈ ಶಾಲೆಯು ನಾಡಿನ ಎಲ್ಲಾ ಶಾಲೆಗಳಿಗೆ ಮಾದರಿ ಎನ್ನುವುದು ಸಾರ್ವತ್ರಿಕ ಅಭಿಪ್ರಾಯ.
ಕಾರ್ಕಳದ ಕೇಂದ್ರಭಾಗದಲ್ಲಿ ಕೋರ್ಟ್ ಎದುರು ಇರುವ ಹಸಿರು ಮರಗಳ ನಡುವೆ ಈ ಶಾಲೆ ಇದೆ. ಜನರು ಇದನ್ನು ಕರೆಯುವುದು “ಪೆರ್ವಾಜೆ ಶಾಲೆ” ಎಂದು.1996-97ರ ವರ್ಷದಲ್ಲಿ ಅಂದಿನ ಶಿಕ್ಷಣ ಮಂತ್ರಿಯಾದ ಗೋವಿಂದೇಗೌಡ ಅವರಿಂದ ಉದ್ಘಾಟನೆ ಆದ ಶಾಲೆ ಇದು. ದಾನಿಗಳಾದ ಅರುಣ ಪುರಾಣಿಕ ಅವರ ಕೊಡುಗೆಯಿಂದ ಅವರ ತೀರ್ಥರೂಪ ಸುಂದರ ಪುರಾಣಿಕರ ಹೆಸರನ್ನು ಪಡೆಯಿತು. ಆರಂಭದ ದಶಕದಲ್ಲಿ ಮುಖ್ಯಶಿಕ್ಷಕರಾಗಿ ಬೋರೆಗೌಡ ಎಂಬ ಮಹಾ ವಿಷನರಿ ಶಾಲೆಗೆ ಬೇಕಾದ ಬಲಿಷ್ಟ ಅಡಿಗಲ್ಲು ಹಾಕಿ ಕೊಟ್ಟರು. ಅವರ ಸೇವಾವಧಿಯಲ್ಲಿ ವಿದ್ಯಾರ್ಥಿಗಳ ವಿಕಸನಕ್ಕೆ ಪೂರಕವಾದ ನೂರಾರು ಚಟುವಟಿಕೆಗಳು ನಡೆದವು. ಮುಂದೆ ಕೆ.ಹರ್ಷಿಣಿ ಅವರು ಮುಖ್ಯಶಿಕ್ಷಕರಾಗಿ ಶಾಲೆಯ ಬಹು ಆಯಾಮದ ಬೆಳವಣಿಗೆಗಳಿಗೆ ಕಾರಣರಾದರು. ಅವರ ಪತಿ, SDMC ಅಧ್ಯಕ್ಷರಾದ ನ್ಯಾಯವಾದಿ ವಿಜಯರಾಜ್ ಶೆಟ್ಟಿ ಅವರು ಶಾಲೆಯ ಅಭಿವೃದ್ಧಿಗೆ ಗರಿಷ್ಟ ಕೊಡುಗೆಗಳನ್ನು ಒದಗಿಸಿ ಕೊಟ್ಟಿದ್ದಾರೆ. ಸರಕಾರ ಮತ್ತು ದಾನಿಗಳ ಕೊಡುಗೆಗಳಿಂದ ಈ ಶಾಲೆಯು ಇಷ್ಟೊಂದು ಕೀರ್ತಿಯನ್ನು ಪಡೆಯಲು ಅವರಿಬ್ಬರ ಕೊಡುಗೆಯು ನಿರ್ಣಾಯಕ ಎಂದೇ ಹೇಳಬಹುದು.
ಏನುಂಟು ಏನಿಲ್ಲ ಪೆರ್ವಾಜೆ ಪ್ರೌಢಶಾಲೆಯಲ್ಲಿ!

1)ಆರಂಭದಲ್ಲಿ ಕೇವಲ ನಾಲ್ಕು ಕೊಠಡಿಗಳು ಇದ್ದ ಈ ಶಾಲೆಯಲ್ಲಿ ಈಗ ಏಳು ಕೊಠಡಿಗಳು ಇವೆ. ಜೊತೆಗೆ ಸುಸಜ್ಜಿತವಾದ ಕಂಪ್ಯೂಟರ್ ಕೊಠಡಿ, ಪ್ರಯೋಗಾಲಯ, ವಾಚನಾಲಯ, ಸುಸಜ್ಜಿತವಾದ ಸಭಾಭವನ, ಅಕ್ಷರ ದಾಸೋಹದ ಕೊಠಡಿ, ಆಟದ ಮೈದಾನ, ಭೋಜನ ಶಾಲೆ ಎಲ್ಲವೂ ಆಗಿದೆ. ಬಹುಲಕ್ಷ ರೂಪಾಯಿಗಳ ಅನುದಾನದಲ್ಲಿ ನವೀಕೃತ ಶೌಚಾಲಯವೂ ನಿರ್ಮಾಣವಾಗಿದೆ. ಸ್ವಾಗತ ಗೋಪುರವು ಆಕರ್ಷಣೀಯ ಆಗಿದೆ. ಸರಕಾರದ ಅನುದಾನಗಳ ಜೊತೆಗೆ ಊರ, ಪರವೂರಿನ ದಾನಿಗಳ ನೆರವು ಶಾಲೆಗೆ ದೊಡ್ಡ ಮಟ್ಟದಲ್ಲಿ ಹರಿದು ಬಂದಿದೆ.
2) ಶಾಲೆಯಲ್ಲಿ ಈಗ 375ಕ್ಕಿಂತ ಅಧಿಕ ಮಕ್ಕಳಿದ್ದಾರೆ. ಕನ್ನಡ ಮತ್ತು ಆಂಗ್ಲ ಮಾಧ್ಯಮ ವಿಭಾಗಗಳಲ್ಲಿ ಶ್ರೇಷ್ಟವಾದ ಗುಣಮಟ್ಟದ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಅಡ್ಮಿಷನ್ ಹೊತ್ತಿನಲ್ಲಿ ಪ್ರಭಾವೀ ವ್ಯಕ್ತಿಗಳ ಶಿಫಾರಸು ಪತ್ರ ಹಿಡಿದುಕೊಂಡು ಶಾಲೆಯ ಪ್ರವೇಶಕ್ಕೆ ಬರುವಷ್ಟು ಮಟ್ಟಕ್ಕೆ ಶಾಲೆಯ ಪ್ರಭಾವಳಿ ಬೆಳೆದಿದೆ!
3) ಶಾಲೆಯಲ್ಲಿ ಸಮರ್ಪಣಾ ಮನೋಭಾವದ ಮತ್ತು ಮಕ್ಕಳನ್ನು ತುಂಬಾ ಪ್ರೀತಿಸುವ 11 ಅಧ್ಯಾಪಕರು ಇದ್ದಾರೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಉನ್ನತಿಗೆ ಪರಿಹಾರ ಬೋಧನೆ, ಕೌನ್ಸೆಲಿಂಗ್ ತರಗತಿಗಳು ನಿರಂತರವಾಗಿ ನಡೆಯುತ್ತಿವೆ.
4) ಶಾಲೆಯ ಮುಖ್ಯಶಿಕ್ಷಕಿ ಕೆ. ಹರ್ಷಿಣಿ ಅವರು ಎಲ್ಲಾ ರೀತಿಯಿಂದಲೂ ಮಾದರಿ ಮುಖ್ಯೋಪಾಧ್ಯಾಯಿನಿ ಆಗಿದ್ದಾರೆ. ಬೆಳಿಗ್ಗೆ 8 ಘಂಟೆಯ ಮೊದಲೇ ಶಾಲೆಗೆ ಬರುವ ಅವರು ಸಂಜೆ ಸೂರ್ಯ ಮುಳುಗುವವರೆಗೂ ಶಾಲೆಯಲ್ಲಿಯೇ ಇರುತ್ತಾರೆ. ಶಾಲೆಯ ಪ್ರತಿ ಚಟುವಟಿಕೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ಇತರ ಶಿಕ್ಷಕರಿಗೂ ಸ್ಫೂರ್ತಿ ತುಂಬುತ್ತಾರೆ.
5) ಪ್ರವೇಶ ಬಯಸಿ ಬರುವ ಬಡ ವಿದ್ಯಾರ್ಥಿಗಳ, ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಇದೆ. ಹಿಂದಿನ ಪರೀಕ್ಷೆಗಳ ಅಂಕಗಳನ್ನು ಪರಿಗಣಿಸದೆ ವಿದ್ಯಾರ್ಥಿಗಳ ಸೇರ್ಪಡೆ ಆಗುತ್ತದೆ. ಆದರೆ ಎಸೆಸೆಲ್ಸಿ ಫಲಿತಾಂಶವನ್ನು ಗಮನಿಸಿದಾಗ ಯಾವ ವರ್ಷವೂ 97-98%ಕ್ಕಿಂತ ಕೆಳಗಿನ ಫಲಿತಾಂಶ ಬಂದಿಲ್ಲ!
625 ಅಂಕಗಳಲ್ಲಿ 620/619/618 ಈ ರೀತಿಯ ಅಂಕಗಳನ್ನು ವಿದ್ಯಾರ್ಥಿಗಳು ಪ್ರತಿ ವರ್ಷ ಎಂಬಂತೆ ಪಡೆಯುತ್ತಿದ್ದಾರೆ!
6)ಶಾಲೆಯ ತರಕಾರಿ ಮತ್ತು ಹಸಿರು ತೋಟವು ಆಕರ್ಷಣೀಯ ಆಗಿದೆ. ಹಸಿರು ತೋಟ ಮಕ್ಕಳ ಶ್ರಮದಿಂದ ಸುಂದರವಾಗಿ ಕಂಗೊಳಿಸುತ್ತಿದೆ.

7) ತರಗತಿಗೆ ಒಂದರಂತೆ ಪ್ರತ್ಯೇಕ ಗ್ರಂಥಾಲಯಗಳು ಇವೆ. ಶಾಲೆಯ ಮುಖ್ಯ ಗ್ರಂಥಾಲಯದಲ್ಲಿ 8000ಕ್ಕಿಂತ ಅಧಿಕ ಮಕ್ಕಳು ಓದುವ ಪುಸ್ತಕಗಳು ಇವೆ. ಗೋಮತಿ ಮಾಸಪತ್ರಿಕೆ ಮತ್ತು ಜ್ಞಾನ ದೀವಿಗೆ ವಾರ್ಷಿಕ ವಿಶೇಷಾಂಕಗಳು ನಿರಂತರವಾಗಿ ಹರಿದು ಬಂದಿವೆ. ಶಾಲೆಯ ಭಿತ್ತಿ ಪತ್ರಿಕೆಗಳು ಮಕ್ಕಳಲ್ಲಿ ಓದುವ ಮತ್ತು ಬರೆಯುವ ಸಾಮರ್ಥ್ಯವನ್ನು ಹೆಚ್ಚಿಸುತ್ತಿವೆ. ಪ್ರತಿ ತಿಂಗಳೂ ಪ್ರತಿ ತರಗತಿಯ ಮಟ್ಟದಲ್ಲಿ ವಿದ್ಯಾರ್ಥಿಗಳ ಕೈ ಬರಹದ ಪತ್ರಿಕೆಗಳು ತಪ್ಪದೆ ಹೊರಬರುತ್ತಿವೆ.
8) ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ ದೊರೆಯುತ್ತಿದೆ. ಪ್ರತಿ ತರಗತಿಯಲ್ಲಿ ಒಂದೊಂದು ಕಂಪ್ಯೂಟರ್ ಇದೆ. ಮಣಿಪಾಲದ ಮಹಾಮಾಯ ಫೌಂಡೇಶನ್ ಮೂಲಕ 9 ಮತ್ತು 10ನೆಯ ತರಗತಿಯ ವಿದ್ಯಾರ್ಥಿಗಳಿಗೆ ವರ್ಚುವಲ್ ತರಗತಿಗಳು ನಿರಂತರವಾಗಿ ನಡೆಯುತ್ತಿವೆ. ಶಿಕ್ಷಕರು ಸ್ಮಾರ್ಟ್ ಕ್ಲಾಸ್ ಮೂಲಕ ಪಾಠಗಳನ್ನು ಮಾಡುವ ಕಾರಣ ವಿದ್ಯಾರ್ಥಿಗಳು ಕಲಿಕೆಯಲ್ಲಿ ಸ್ಮಾರ್ಟ್ ಆಗುತ್ತಿದ್ದಾರೆ.
9) ನಾಡಿನ ಶ್ರೇಷ್ಟ ವ್ಯಕ್ತಿಗಳನ್ನು, ಸಾಹಿತಿಗಳನ್ನು, ಭಾಷಣಕಾರರನ್ನು, ವಿಕಸನ ತರಬೇತುದಾರರನ್ನು ಶಾಲೆಗೆ ಕರೆಸಿ ಅವರ ಮೂಲಕ ಮಕ್ಕಳಿಗೆ ಮಾರ್ಗದರ್ಶನ ನೀಡಲಾಗುತ್ತದೆ. ಈ ಎಲ್ಲಾ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳೇ ನಿರೂಪಣೆ ಮಾಡುತ್ತಾರೆ.
10)ಜೀವನ ಶಿಕ್ಷಣದ ಪ್ರಾಮುಖ್ಯತೆಯನ್ನು ಮನಗಂಡು ಇಲ್ಲಿ ಶಾಲೆಯ ಕೆಲಸಗಳನ್ನು ವಿದ್ಯಾರ್ಥಿಗಳೇ ಉತ್ಸಾಹದಿಂದ ಮಾಡುವಂತೆ ತರಬೇತು ನೀಡಲಾಗಿದೆ. ದೇವರಿಗೆ ಹೂವು ಇಡುವುದು, ಶಾಲೆಯ ಸ್ವಚ್ಛತೆ, ತೋಟಕ್ಕೆ ಗೊಬ್ಬರ ಹಾಕುವುದು, ಗಿಡಗಳಿಗೆ ನೀರು ಉಣಿಸುವುದು, ಅಕ್ವೇರಿಯಂ ಮೀನುಗಳಿಗೆ ಆಹಾರ ಹಾಕುವುದು, ತೆಂಗಿನಕಾಯಿ ಸಿಪ್ಪೆ ಸುಲಿಯುವುದು, ಕುಡಿಯುವ ನೀರು ಪೂರೈಕೆ ಮಾಡುವುದು, ಅಡಿಗೆ ಕೆಲಸದಲ್ಲಿ ಸಣ್ಣ ಪುಟ್ಟ ಹೊಣೆಯನ್ನು ಹೊರುವುದು….ಮೊದಲಾದ ಕೆಲಸಗಳನ್ನು ಮಕ್ಕಳೇ ಮಾಡುವುದನ್ನು ನೋಡುವುದೇ ಒಂದು ಅದ್ಭುತ ಅನುಭವ! ಅದನ್ನು ಮಾಡು, ಇದನ್ನು ಮಾಡು ಎಂದು ಶಿಕ್ಷಕರು ಹೇಳದೆ ಎಲ್ಲಾ ಕೆಲಸಗಳನ್ನೂ ವಿದ್ಯಾರ್ಥಿಗಳೇ ಹೊಣೆ ಹೊತ್ತು ಮಾಡುವಂತೆ ತರಬೇತಿಯನ್ನು ನೀಡಲಾಗಿದೆ.
11)ಶಾಲೆಯ ಸ್ವಚ್ಛತೆಗೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಕುಡಿಯುವ ನೀರಿನ ಬಾವಿ ಇದೆ. ಭಾರತ ಸರಕಾರದ ಮಾನವ ಸಂಪನ್ಮೂಲ ಇಲಾಖೆ ನೀಡುವ “ಸ್ವಚ್ಛ ವಿದ್ಯಾಲಯಮ್” ಪುರಸ್ಕಾರಕ್ಕೆ 2017ರಲ್ಲಿ ಈ ಶಾಲೆಯು ಭಾಜನವಾಗಿದೆ! ಈ ಪ್ರಶಸ್ತಿಯ ಜೊತೆಗೆ 50,000 ರೂಪಾಯಿ ನಗದು, ಪ್ರಶಸ್ತಿ ಪತ್ರ ಮತ್ತು ಫಲಕ ಈ ಶಾಲೆಗೆ ದೊರೆತಿದೆ.
12) ಒತ್ತಡ ಇಲ್ಲದ ಕಲಿಕೆ ಇಲ್ಲಿ ಪ್ರಾಮುಖ್ಯತೆ ಪಡೆದಿದೆ. ಅಧ್ಯಾಪಕರು ಶಿಕ್ಷೆ, ಬೈಗುಳ ಬಳಸದೆ ಅನುನಯ ಮತ್ತು ಪ್ರೀತಿಯಿಂದ ಪಾಠ ಮಾಡುತ್ತಾರೆ. ಸ್ವಕಲಿಕೆಗೆ ಇಲ್ಲಿ ಹೆಚ್ಚು ಆದ್ಯತೆ ದೊರೆತಿದೆ.
12) ಶಾಲೆಯ ಭೌತಿಕ ಪರಿಸರ, ಕಲಿಕಾ ವಿಧಾನಗಳು, ನಾಯಕತ್ವ, ಸಮುದಾಯಗಳ ಭಾಗವಹಿಸುವಿಕೆ, ಉತ್ತಮ ನಾವೀನ್ಯತೆ ಒಳಗೊಂಡ SKQVAC ಮೌಲ್ಯಾಂಕನದಲ್ಲಿ ಈ ಶಾಲೆಯು ಶಿಕ್ಷಣ ಇಲಾಖೆಯಿಂದ ಅಗ್ರಸ್ಥಾನ ಶ್ರೇಯಾಂಕಿತ ಆಗಿದೆ.
12) ಶಿಕ್ಷಣ ಇಲಾಖೆ ನಿರ್ದೇಶಿಸುವ ಎಲ್ಲಾ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಈ ಶಾಲೆಯು ಮುಂಚೂಣಿಯ ಸ್ಥಾನವನ್ನು ಪಡೆಯುತ್ತಿದೆ. ತಾಲೂಕು, ಜಿಲ್ಲಾ, ರಾಜ್ಯ ಮಟ್ಟದ ಕ್ರೀಡಾಕೂಟ, ಆಟೋಟ, ಪ್ರತಿಭಾ ಕಾರಂಜಿ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪೆರ್ವಾಜೆ ಶಾಲೆಯು ನಿರಂತರ ಬಹುಮಾನಗಳನ್ನು ಗೆಲ್ಲುತ್ತಿದೆ.
14) ಬಿಡುವಿನ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ತಜ್ಞರಿಂದ ಉಚಿತವಾದ ಯೋಗ, ಪ್ರಾಣಾಯಾಮ ತರಬೇತಿ, ಯಕ್ಷಗಾನ ತರಬೇತಿ, ನಾಟಕ ತರಬೇತು, ಕರಾಟೆ, ಸ್ಪೋಕನ್ ಇಂಗ್ಲಿಷ್ ತರಬೇತಿಗಳು ದೊರೆಯುತ್ತಿವೆ. ಶಾಲೆಯ ವಾರ್ಷಿಕೋತ್ಸವ ಸಮಾರಂಭವು ಪ್ರತಿ ವರ್ಷ ನಡೆಯುತ್ತಿದ್ದು ವಿದ್ಯಾರ್ಥಿಗಳ ನಾಟಕ, ಯಕ್ಷಗಾನ, ನೃತ್ಯ ಕಾರ್ಯಕ್ರಮಗಳು ಸಾವಿರ ಸಾವಿರ ಜನರ ಮನವನ್ನು ಮುಟ್ಟುತ್ತವೆ.

15) ಕರಾವಳಿಯಲ್ಲಿ ಅತ್ಯಂತ ಅಪರೂಪವಾದ ಕೇರಳ ಮಾದರಿಯ ಚೆಂಡೆ ಮೇಳವನ್ನು ಇಲ್ಲಿ ರಚಿಸಲಾಗಿದೆ. ಸಾಂಪ್ರದಾಯಿಕ ಸಮವಸ್ತ್ರ ಧರಿಸಿದ ಮಕ್ಕಳು ಹೆಗಲಿಗೆ ಚೆಂಡೆ ಏರಿಸಿಕೊಂಡು ಲಯಬದ್ಧವಾಗಿ ಬಾರಿಸುವಾಗ ರೋಮಾಂಚನ ಆಗುತ್ತದೆ. ಶ್ರವಣ ಬೆಳಗೊಳದ ಮಹಾ ಮಸ್ತಕಾಭಿಷೇಕದ ಸಂದರ್ಭದಲ್ಲಿ 10 ದಿನ ಕೂಡ ಗೊಮ್ಮಟೇಶ್ವರ ಮೂರ್ತಿಯ ಸಮೀಪದಲ್ಲಿ ಚೆಂಡೆಯ ಪ್ರದರ್ಶನ ನೀಡಿದವರು ಇದೇ ಶಾಲೆಯ ಮಕ್ಕಳು.
16) ಕೇಂದ್ರ ಸರಕಾರದ ಆಟಲ್ ಟಿಂಕರಿಂಗ್ ಲ್ಯಾಬ್ ಸೌಲಭ್ಯ ಈ ಶಾಲೆಗೆ ದೊರೆತಿದೆ.
17) ಪೋಲಿಸ್ ಕ್ಯಾಡೆಟ್ ತರಬೇತಿಯ ಸೌಲಭ್ಯ ಈ ಶಾಲೆಯ ಮಕ್ಕಳಿಗೆ ಸಿಕ್ಕಿದೆ.
18) ತರಂಗದಂತಹ ರಾಜ್ಯ ಮಟ್ಟದ ಪತ್ರಿಕೆಯು ಈ ಶಾಲೆಯ ಬಗ್ಗೆ ಮುಖಪುಟ ಲೇಖನ ಮಾಡಿದೆ. ನಾಡಿನ ಎಲ್ಲಾ ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳು ಈ ಶಾಲೆಯ ಚಟುವಟಿಕೆಗಳಿಗೆ ಕನ್ನಡಿ ಹಿಡಿದಿವೆ.
19) ಶಾಲೆಯಲ್ಲಿ ತುಂಬಾ ಕ್ರಿಯಾಶೀಲ ಆಗಿರುವ ನೇತಾಜಿ ಸ್ಕೌಟ್ ದಳ, ಸೇವಾ ದಳ, ಇಕೋ ಕ್ಲಬ್, ಸಾಹಿತ್ಯ ಸಂಘ, ಇಂಟರಾಕ್ಟ್, ಶ್ರೀನಿವಾಸ ಗಣಿತ ಸಂಘ, ವಿಜ್ಞಾನ ಸಂಘ, ಯೋಗ ಸಂಘ, ವಿದ್ಯಾರ್ಥಿ ಸಂಸತ್ತು ಮೊದಲಾದ ಸಂಘಗಳು ಇವೆ. ಪ್ರತೀ ಸಂಘವೂ ವರ್ಷದಲ್ಲಿ ಕನಿಷ್ಠ ಹತ್ತು ಕಾರ್ಯಕ್ರಮಗಳನ್ನು ಸಂಘಟನೆ ಮಾಡುತ್ತದೆ.
ಪೆರ್ವಾಜೆ ಸರಕಾರಿ ಶಾಲೆಯ ಬಗ್ಗೆ ಬರೆಯುತ್ತ ಹೋದಂತೆ ಅದು ಮುಗಿದು ಹೋಗುವುದೇ ಇಲ್ಲ. ಶಾಲೆಗೆ ನೂರಕ್ಕೆ ನೂರರಷ್ಟು ಬದ್ದತೆ ಇರುವ ಶಿಕ್ಷಕರು, ಶಾಲಾ SDMC, ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿಶೇಷ ಮುತುವರ್ಜಿ, ಸ್ಥಳೀಯ ಜನ ಪ್ರತಿನಿಧಿಗಳ ಪ್ರೋತ್ಸಾಹದಿಂದ ಮಾತ್ರ ಇಂತಹ ಶಾಲೆಯನ್ನು ಪಡೆಯಲು ಸಾಧ್ಯ! ಆ ದೃಷ್ಟಿಯಿಂದ ಪೆರ್ವಾಜೆ ಶಾಲೆಯು ಸ್ವರ್ಣ ಕಾರ್ಕಳದ ಕಿರೀಟದ ಚಿನ್ನದ ಗರಿ ಎಂದು ಖಂಡಿತವಾಗಿಯೂ ಹೇಳಬಹುದು.
ರಾಜೇಂದ್ರ ಭಟ್ ಕೆ.

ರಾಜೇಂದ್ರ ಭಟ್‌ ಕೆ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!