ಶಬರಿಮಲೆ, ನ.6 : ಈ ವರ್ಷ ಶಬರಿಮಲೆ ಯಾತ್ರೆಗೆ ಅವಕಾಶ ಸಿಗುವುದು ದುರ್ಲಭ. ವರ್ಚುವಲ್ ಬುಕ್ಕಿಂಗ್ ಮೂಲಕ ಮಾತ್ರ ಈ ಸಲ ಅಯ್ಯಪ್ಪನ ದರ್ಶನಕ್ಕೆ ಅವಕಾಶ ಮಾಡಿಕೊಡಲು ತೀರ್ಮಾನಿಸಲಾಗಿತ್ತು. ಆದರೆ ಬುಕ್ಕಿಂಗ್ ಎರಡೇ ದಿನಗಳಲ್ಲಿ ಭರ್ತಿಯಾಗಿರುವುದರಿಂದ ಇನ್ನು ಯಾರಿಗೂ ಯಾತ್ರೆಯ ಅವಕಾಶ ಸಿಗಲಿಕ್ಕಿಲ್ಲ. ಒಂದು ವೇಳೆ ಯಾತ್ರಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿದರೆ ಇನ್ನು ಕೆಲವರಿಗೆ ಅವಕಾಶ ಸಿಗಬಹುದು.
ಹಾಗೆಂದು ಭಕ್ತರು ನಿರಾಶರಾಗಬೇಕಾದ ಅಗತ್ಯವಿಲ್ಲ. ಅಯ್ಯಪ್ಪನ ಪ್ರಸಾದವನ್ನು ಮನೆಗೆ ತಲುಪಿಸಲು ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಧರಿಸಿದೆ. ಶುಕ್ರವಾರದಿಂದಲೇ ಪ್ರಸಾದ ಬುಕ್ಕಿಂಗ್ ಪ್ರಾರಂಭವಾಗಿದೆ.
ಸ್ವಾಮಿ ಪ್ರಸಾದಂ ಎಂದು ಕರೆಯಲಾಗುವ ಪ್ರಸಾದದ ಕಿಟ್ ಬೆಲೆ 450 ರೂ. ಅರವನ ಪಾಯಸಂ,ಪವಿತ್ ಭಸ್ಮ, ಗಂಧ ಪ್ರಸಾದ, ಅರಸಿನ ಮತ್ತು ಹೂ ಕಿಟ್‌ನಲ್ಲಿರುತ್ತದೆ. ಮಂಡಲ ಪೂಜೆಗೆ ದೇಗುಲದ ಬಾಗಿಲನ್ನು ನ.16ರಂದು ತೆರೆಯಲಾಗುವುದು. ಅಂದಿನಿಂದಲೇ ಅಂಚೆ ಮೂಲಕ ಪ್ರಸಾದ ರವಾನೆಯೂ ಶುರುವಾಗಲಿದೆ. ಅಂಚೆ ಕಚೇರಿಯಲ್ಲಿ ಇ-ಪೇಮೆಂಟ್ ಮೂಲಕ ಹಣ ಪಾವತಿಸಿದರೆ ಮೂರು ದಿನದಲ್ಲಿ ಪ್ರಸಾದ ಮನೆಗೆ ತಲುಪುತ್ತದೆ.
ಈ ಸಲ ಶಬರಿಮಲೆ ಯಾತ್ರೆ ಸೀಮಿತ ಸಂಖ್ಯೆಯ ಭಕ್ತರಿಗೆ ಮಾತ್ರ ಲಭ್ಯವಾಗುವುದರಿಂದ ತಿರುವಾಂಕೂರು ದೇವಸ್ವಂ ಮಂಡಳಿಗೆ ಭಾರಿ ನಷ್ಟವಾಗಲಿದೆ. ಪ್ರಸಾದ ಮಾರಾಟದಿಂದ ನಷ್ಟದ ಪ್ರಮಾಣ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಪ್ರಸಾದ ರವಾನಗೆ ಅಂಚೆ ಇಲಾಖೆ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಂಚೆ ಇಲಾಖೆ ಸ್ಪೀಡ್ ಪೋಸ್ಟ್ ಮೂಲಕ ಪ್ರಸಾದ ರವಾನಿಸಲಿದೆ.
