Homeಸಂವಾದಟ್ರಾಫಿಕ್ ಪೊಲೀಸರನ್ನು ಬೈಯುವ ಮುನ್ನ…

Related Posts

ಟ್ರಾಫಿಕ್ ಪೊಲೀಸರನ್ನು ಬೈಯುವ ಮುನ್ನ…

       ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ಹಾಕಲಾಗುತ್ತದೆ ಮತ್ತು ತಪ್ಪಿತಸ್ಥ ಆ ದಂಡವನ್ನು ಕಟ್ಟಬೇಕು ಎನ್ನುವ ವಿಚಾರ ಕಾನೂನುಬದ್ಧ ಮತ್ತದು ನಮಗೆಲ್ಲರಿಗೂ ತಿಳಿದಿರುವ ಸಂಗತಿ. ಇತ್ತೀಚಿಗೆ ಜಾಲತಾಣಗಳಲ್ಲಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರಿಂದ ದಂಡ ಹಾಕಿಸಿಕೊಂಡ ಬಳಿಕ,  ‘ನಿಮಗೆ ಮಾನವೀಯತೆ ಇಲ್ಲ, ನೀವು ದುಬಾರಿ ದಂಡ ಹಾಕುತ್ತೀರಿ. ಸಣ್ಣ ಸಣ್ಣ ತಪ್ಪಿಗೆ ಜಾಸ್ತಿ ಹಣವನ್ನು ಕಟ್ಟಬೇಕು. ನೋಡ್ರೀ ಈ ರಸ್ತೆಯ ದುರವಸ್ಥೆ. ಎಷ್ಟೊಂದು ಕೆಟ್ಟುಹೋಗಿದೆ. ಈ ರಸ್ತೆ ಮಾಡಿದವರಿಗೆ ದಂಡ ಹಾಕಲು ತಾಕತ್ತಿದೆಯಾ ನಿಮಗೆ? ನೀವು ದಂಡ ವಸೂಲಿ ಮಾಡಿ ಸರಕಾರದ ಹೊಟ್ಟೆ ತುಂಬಿಸುತ್ತೀರಿ. ಯಾವ ಸರಕಾರ ಬಂದ್ರೂ ಅಷ್ಟೆ. ನಮ್ಮ ಗೋಳನ್ನು ಕೇಳುವವರು ಯಾರು ಇಲ್ಲ…..’ ಎಂದೆಲ್ಲಾ ಪೋಲಿಸರನ್ನು, ಸರಕಾರವನ್ನು ಬೈದುಕೊಳ್ಳುತ್ತಾ ಅದನ್ನು ಚಿತ್ರೀಕರಣ ಮಾಡಿ ಜಾಲತಾಣಗಳಲ್ಲಿ ಹರಿಯಬಿಡುವುದನ್ನು ನಾವು ಗಮನಿಸಿದ್ದೇವೆ. 

      ಹೌದು, ಅವುಗಳನ್ನು ನೋಡಿದಾಗೆಲ್ಲ ನಮಗೂ ಆ ವಾಹನ ಚಾಲಕರು ಹೇಳಿದ್ದೆಲ್ಲಾ ಸರಿಯಲ್ಲವೇ ಎಂದೆನ್ನಿಸಿಬಿಡುವುದೂ ಉಂಟು. ಹಾಗಾದರೆ  ಚಾಲಕರ ತಪ್ಪಿಲ್ಲದೆ ದಂಡ ಹಾಕಲು ಸಾಧ್ಯವೆ? ಹಾಗೆ ನೋಡಿದರೆ ಟ್ರಾಫಿಕ್ ನಿಯಮ ಉಲ್ಲಂಘನೆ ಮತ್ತು ತಪಾಸಣೆಯ ಹೆಸರಿನಲ್ಲಿ  ಕಂಡ ಕಂಡ ಕಡೆಯಲ್ಲಿ ವಾಹನಗಳನ್ನು ಅಡ್ಡ ಹಾಕಿ ಹಲವಷ್ಟು ಪೊಲೀಸರು ಕೂಡ ಅಡ್ಜಸ್ಟ್‌ಮೆಂಟ್ ಹೆಸರಿನಲ್ಲಿ ಹಣ ಜೇಬಿಗಿಳಿಸುವುದು ಮತ್ತು ಹಿರಿಯ ಅಧಿಕಾರಿಗಳಿಗೂ ಕೂಡ ಇದರಲ್ಲಿ ಪಾಲಿದೆ ಎನ್ನುವುದು, ಕೆಲವೊಮ್ಮೆ ಟಾರ್ಗೆಟ್ ಹೆಸರಿನಲ್ಲಿ ಜನರನ್ನು ಅನವಶ್ಯಕ ತೊಂದರೆಗೆ ಈಡುಮಾಡುವುದೆಲ್ಲಾ ದಿನಂಪ್ರತಿ ಎನ್ನುವಂತೆ ಅಲ್ಲಲ್ಲಿ ನಡೆಯುತ್ತಿರುತ್ತದೆ ಎನ್ನುವಂತಹ ವಿಚಾರಗಳು ತಳ್ಳಿಹಾಕಲಾಗದ್ದು. 

       ಅದೇನೇ ಇರಲಿ. ಒಂದು ವಿಚಾರವನ್ನು ಮೊದಲು ನಾವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕಿದೆ. ಒಂದು ದೇಶದ ಸಾಮಾನ್ಯ ನಾಗರಿಕರಾಗಿದ್ದುಕೊಂಡು ನಮಗೆ ನಿರ್ವಹಿಸಲು ಒಂದಷ್ಟು ಜವಾಬ್ದಾರಿಗಳು ಇರುತ್ತವೆ. ಸರಕಾರದ ನೀತಿ ನಿಯಮಗಳನ್ನು ಪಾಲಿಸಬೇಕಾದದ್ದು ನಮ್ಮ ಕರ್ತವ್ಯವಾಗಿದೆ. ವಾಹನಗಳಲ್ಲಿ ಪಯಣಿಸುವಾಗ ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ ಪತ್ರ, ಹೆಲ್ಮೆಟ್, ಹೊಗೆ ತಪಾಸಣಾ ದಾಖಲೆ, ಇನ್ಶೂರೆನ್ಸ್ ಇತ್ಯಾದಿ ಅವಶ್ಯಕ ದಾಖಲೆಗಳನ್ನು ನಮ್ಮೊಂದಿಗೆ ಇಟ್ಟುಕೊಂಡಿರಬೇಕಾಗುತ್ತದೆ. ಅದು ಪ್ರಾಥಮಿಕವಾಗಿ ವಾಹನ ಸವಾರ/ಚಾಲಕನೊಬ್ಬನ  ಜವಾಬ್ದಾರಿಯಾಗಿರುತ್ತದೆ. ಕೊರೊನದ ಈ ದಿನಗಳಲ್ಲಿ ಮಾಸ್ಕ್ ಧರಿಸುವುದು  ಮತ್ತು ಸಾಮಾಜಿಕ ಅಂತರವನ್ನು ಪಾಲಿಸುವುದು ಕೂಡ ಅವಶ್ಯ ಎನ್ನುವುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು.

     ನಾವು ನಿಯಮಗಳನ್ನು ಉಲ್ಲಂಘಿಸಿದಾಗ ಮಾತ್ರ ನಮಗೆ ಪೊಲೀಸರು ದಂಡ ಹಾಕಲು ಸಾಧ್ಯವಿರುತ್ತದೆ ಎನ್ನುವುದನ್ನು ಬಿಟ್ಟರೆ ನಮ್ಮ ಅಷ್ಟೂ ದಾಖಲೆಗಳು ಸರಿ ಇರುವಾಗ ಮತ್ತು ನಾವು ನಿಯಮಗಳನ್ನು ಸರಿಯಾಗಿ ಪಾಲಿಸಿದಾಗ ಯಾವುದೇ ಕಾರಣಕ್ಕೂ ಪೊಲೀಸರು ದಂಡ ಹಾಕಲು ಸಾಧ್ಯವಾಗುವುದಿಲ್ಲ. ನಾವು ಸರಿಯಾಗಿ ಟ್ರಾಫಿಕ್ ಮತ್ತು ರಸ್ತೆಯ ನೀತಿ-ನಿಯಮಗಳನ್ನು ಪಾಲಿಸಿದಾಗ  ಯಾರನ್ನು ಕೂಡ ಬೈದು ಕೊಳ್ಳಬೇಕಾದ ಅವಶ್ಯಕತೆ ಇರುವುದಿಲ್ಲ ಅಲ್ಲವೆ? ನಾವೇ ತಪ್ಪು ಮಾಡಿರುವಾಗ ಬೇರೆ ಬೇರೆ ವಿಚಾರಗಳನ್ನು ತೆಗೆದುಕೊಂಡು ಕೂಗಾಟ ನಡೆಸುವುದರಲ್ಲಿ ಅದ್ಯಾವ ರೀತಿಯ ನೈತಿಕತೆ ಇದೆ ಹೇಳಿ. 

      ನಮಗೆ ದಂಡ ಬಿದ್ದಾಗ ಮಾತ್ರ ನಾವು ರಸ್ತೆಯ ಬಗ್ಗೆ ಮಾತನಾಡುವುದಲ್ಲ. ಸರಕಾರವನ್ನು ದೂರುವುದಲ್ಲ.  ಉಳಿದ ಸಮಯದಲ್ಲಿಯೂ ಕೂಡ ನಾವು ನಮ್ಮ ನಾಗರಿಕ ಪ್ರಜ್ಞೆಯನ್ನು ತೋರಿಸಬೇಕಾಗಿದೆ. ದಂಡ ಬೀಳುವ ಮೊದಲೂ ರಸ್ತೆ ಸರಿಯಿರಲಿಲ್ಲ! ರಸ್ತೆಯನ್ನು ಸರಿ ಮಾಡುವ ನಿಟ್ಟಿನಲ್ಲಿ ಉಳಿದ ದಿನಗಳಲ್ಲಿ ನಾವೆಷ್ಟು ಗಮನಹರಿಸಿದ್ದೇವೆ? ಸಂಬಂಧಪಟ್ಟ ಆಡಳಿತಗಾರರ ತಪ್ಪನ್ನು ಎಷ್ಟು ಸಲ ಎತ್ತಿ ತೋರಿಸಿದ್ದೇವೆ? ಎಷ್ಟು ಮನವಿಗಳನ್ನು ಸಲ್ಲಿಸಿದ್ದೇವೆ? ಎಷ್ಟು ಬಗೆಯ ಹೋರಾಟಗಳನ್ನು ಹಮ್ಮಿಕೊಂಡಿದ್ದೇವೆ? ಎನ್ನುವುದು ಕೂಡ ಮುಖ್ಯವಾಗುತ್ತದೆ. ಯಾವುದೋ ರಾಜ್ಯಗಳಲ್ಲಿ. ಯಾವುದೋ ದೇಶಗಳಲ್ಲಿ  ನಡೆದಂತಹ ಪ್ರಕರಣಗಳ ಬಗ್ಗೆ ಮೂಲ ವಿಚಾರವೇ ಗೊತ್ತಿಲ್ಲದಿದ್ದರೂ ಇಲ್ಲಿ ಹತ್ತಾರು ಜನ ಸೇರಿ ಪ್ರತಿಭಟಿಸುವಂತಹ ನಗೆಪಾಟಲಿನ ಸಂಗತಿಗಳು ನಮ್ಮಲ್ಲಿ ನಡೆಯುವುದರ ಬದಲು ಇದೇ ಒಗ್ಗಟ್ಟನ್ನು  ಸಾಮಾಜಿಕ ಕಾಳಜಿಯ ವಿಚಾರಗಳ ಬಗ್ಗೆ ತೋರಿದಲ್ಲಿ ನಿಜಕ್ಕೂ ಸಂಬಂಧಪಟ್ಟ ವ್ಯಕ್ತಿಗಳು ಮತ್ತು ರಾಜಕೀಯದವರಿಗೆ ಬಿಸಿ ಮುಟ್ಟಿ ರಸ್ತೆಗಳು ಮತ್ತು ನೀತಿ ನಿಯಮಗಳು ಸ್ವಲ್ಪವಾದರೂ ಸುಧಾರಣೆಗೊಳ್ಳುವುದರಲ್ಲಿ ಸಂಶಯವಿಲ್ಲ.

   ಪೋಲಿಸರು ಕೂಡ ಈ ನಿಟ್ಟಿನಲ್ಲಿ ಕಟ್ಟುನಿಟ್ಟಾಗಿ ಕಾನೂನು ಪಾಲನೆ ಮಾಡಬೇಕಿದೆ. ರಾಜಕಾರಣಿಗಳಿಗೊಂದು, ಶ್ರೀಮಂತರಿಗೊಂದು, ಪರಿಚಯದವರಿಗೊಂದು, ಬಡವರಿಗೊಂದು ಅಂತೆಲ್ಲಾ ಕಾನೂನನ್ನು ಅಗತ್ಯಕ್ಕನುಸಾರ ಬಳಕೆ ಮಾಡುವ ವಿಧಾನ ನಿಲ್ಲಬೇಕಿದೆ. ಕೆಲವೊಮ್ಮೆ ತುರ್ತು ಸಂದರ್ಭಗಳ ಅಗತ್ಯವನ್ನು ಕೂಡ ಮಾನವೀಯ ದೃಷ್ಟಿಯಲ್ಲಿ ನೋಡಬೇಕಾದ ಅವಶ್ಯಕತೆ ಇದೆ. ದಂಡದ ಬದಲು ಹೆಲ್ಮೆಟ್ ಕೊಡಿಸಿ, ಮಾಸ್ಕ್ ಕೊಡಿಸಿ ಎನ್ನುವಂತಹ ಜನಾಭಿಪ್ರಾಯವನ್ನು ಜಾರಿಗೆ ತರುವುದರ ಕುರಿತು ಯೋಚಿಸಬೇಕಾಗಿದೆ.   ಜನ ಮತ್ತು ಪೋಲಿಸ್ ಇಬ್ಬರೂ ಕಾನೂನನ್ನು ಸೂಕ್ತವಾಗಿ ಗೌರವಿಸಿ ಪಾಲಿಸಿದರೆ ಇಂತಹ ಬೈದಾಡಿಕೊಳ್ಳುವ ಸಂದರ್ಭಗಳು ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ.

ನರೇಂದ್ರ ಎಸ್. ಗಂಗೊಳ್ಳಿ

LEAVE A REPLY

Please enter your comment!
Please enter your name here

Latest Posts

error: Content is protected !!