ಭಾಷೆ ಒಂದು ಸಂವಹನ ಮಾಧ್ಯಮ. ಎಲ್ಲ ಭಾಷೆಗಳ ಉದ್ದೇಶವು ವಿಚಾರವಿನಿಮಯ ಮಾಡುವುದೇ ಆಗಿದೆ. ಆದರೂ ಕನ್ನಡ ನಾಡಿನಲ್ಲಿ ಜನಿಸಿದ ನಮಗೆ ಕನ್ನಡವೇ ಉಸಿರಾಗಿರಬೇಕು. ಅದರ ಬಗ್ಗೆ ವಿಶೇಷ ಒಲವಿರಬೇಕು. “ಸಾವಿರ ಸೌದೆ ಒಲೆಯಲ್ಲಿ ಉರಿದರೂ ದೀವಿಗೆಯಂತ ಬೆಳಕುಂಟೇ” ಎಂದು ಜನಪದರು ಹಡೆದವ್ವನ ಬಗ್ಗೆ ನುಡಿದ ಮಾತು ಅಕ್ಷರಶಃ ತಾಯ್ನುಡಿಗೂ ಅನ್ವಯಿಸುತ್ತದೆ. ನಮ್ಮ ತುಟಿಯಿಂದ ಹೊರಬಿದ್ದ ಮೊದಲ ಮಾತು ಅರ್ಥಾತ್ ಮಾತೃಭಾಷೆಯನ್ನು ಮೀರಿದ ಭಾಷೆ ಬೇರೊಂದಿಲ್ಲ ಎಂಬುದನ್ನು ನಾವೆಲ್ಲರೂ ಗಮನಿಸಬೇಕು.
ಕನ್ನಡವನ್ನು ಉಳಿಸಬೇಕು, ಬೆಳೆಸಬೇಕು ಎಂದು ಬೊಬ್ಬಿರಿದರೆ ಸಾಲದು. ಅದನ್ನು ಎಲ್ಲಾ ಕ್ಷೇತ್ರಗಳಲ್ಲೂ ಬಳಸಬೇಕು. ಆಗ ತಾನೇ ಆ ಭಾಷೆ ಜೀವಂತವಾಗಿರಲು ಸಾಧ್ಯ? ಕನ್ನಡ ಎಂಬುದು ಕೇವಲ ಬಾಯಲ್ಲಿ ಉಲಿಯುವ ಮಾತಲ್ಲ. ಅದು ನಮಗೆ ಉಸಿರನ್ನು ನೀಡಿ ಅನ್ನವನ್ನು ಕೊಟ್ಟ ಭಾಷೆ ಎಂಬ ಅರಿವಿನಲ್ಲಿ ಕಾರ್ಯ ನಿರ್ವಹಿಸಬೇಕು.
ನವೆಂಬರ್ ತಿಂಗಳು ಬಂದಾಗ ಮಾತ್ರ ಕನ್ನಡದ ನೆನಪಾಗುವಂತಿರಬಾರದು. ಅದು ದಿನನಿತ್ಯದ ಭಾಗವಾಗಬೇಕು. ಸಂಪೂರ್ಣ ವ್ಯವಹಾರ ಕನ್ನಡದಲ್ಲೇ ಮಾಡಬೇಕು. ಅದರರ್ಥ ಇತರ ಭಾಷೆಯನ್ನು ದ್ವೇಷಿಸಬೇಕೆಂದಲ್ಲ. ನಮ್ಮ ಭಾಷೆಯನ್ನು ಪ್ರೀತಿಸಿ ಗೌರವಿಸಬೇಕು ಅಷ್ಟೇ. ‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂದು ನಂಬಿ ನಡೆಯುವವರಾಗಬೇಕು ನಾವು. ಉದ್ಯೋಗಕ್ಕಾಗಿ ಪರಭಾಷೆ ವ್ಯಾಮೋಹ ತಪ್ಪಲ್ಲ. ಆದರೆ ಬೇರೆ ಭಾಷೆಯ ನೆರಳಲ್ಲಿ ಕನ್ನಡ ಕಮರಿ ಹೋಗಬಾರದು ಅಷ್ಟೇ.
‘ಕನ್ನಡವೆಂದರೆ ಬರೀ ನುಡಿಯಲ್ಲ, ಹಿರಿದಿದೆ ಅದರರ್ಥ’ ಇದನ್ನು ನಾವೆಲ್ಲರೂ ಅರಿತು ಕನ್ನಡ ನಾಡು ನುಡಿಯ ಕುರಿತು ಬಾಂಧವ್ಯ ಬೆಳೆಸಿಕೊಳ್ಳಬೇಕು. ಕನ್ನಡ ನಾಡಿನ ಸಿರಿವಂತಿಕೆಯನ್ನು, ಕವಿ ಕಾವ್ಯದ ಸಂಪತ್ತನ್ನು ಮೈ ಮನಗಳಲ್ಲಿ ತುಂಬಿಕೊಳ್ಳಬೇಕು. ಹೊರಗೊಂದು ಒಳಗೊಂದು ಎಂಬಂತಿರದೆ ನಡೆ – ನುಡಿ ಎರಡರಲ್ಲೂ ಕನ್ನಡ ಅನುರಣಿಸಬೇಕು. ಕನ್ನಡವನ್ನು ಕೇಳಲು ಕಿವಿ ನಿಮಿರಬೇಕು.. ಕನ್ನಡವನ್ನು ಆಡಲು ನಾಲಗೆ ತುಡಿಯುತಿರಬೇಕು.
ಕನ್ನಡ ಕೇವಲ ಭಾಷೆಯಲ್ಲ… ಅದು ನಮ್ಮ ಬದುಕು. ನಡೆನುಡಿ, ಆಚಾರವಿಚಾರ, ಸಂಸ್ಕೃತಿಯಲ್ಲಿ ಕನ್ನಡವೇ ಮೊಳಗುತಿರಲಿ. ಆ ಮೂಲಕ ನಮ್ಮ ಉಸಿರಾದ ಕನ್ನಡ ಸದಾ ಹಸಿರಾಗಿರಲಿ.
ರಮೇಶ್ ಕುಲಾಲ್, ನಾಲ್ತೂರು








































































