ಮಂಗಳೂರು, ನ.4 : ಸುಮಾರು ಎರಡು ದಶಕಗಳ ಬಳಿಕ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಮತ್ತು ಕೋರ್ ಕಮಿಟಿ ಸಭೆ ಮಂಗಳೂರಿನಲ್ಲಿ ಗುರುವಾರ ನಡೆಯಲಿದೆ. ಹಾಲಿ ಬಿಜೆಪಿ ರಾಜ್ಯಾಧ್ಯಕ್ಷರ ತವರು ನಗರದಲ್ಲೇ ಕಾರ್ಯಕಾರಿಣಿ ನಡೆಯಲಿರುವುದರಿಂದ ಬಿಜೆಪಿ ಕಾರ್ಯಕರ್ತರ ಉತ್ಸಾಹ ಇಮ್ಮಡಿಯಾಗಿದೆ. ಇಡೀ ಮಂಗಳೂರು ನಗರ ಕಾರ್ಯಕಾರಿಣಿಗೆ ನವವಧುವಿನಂತೆ ಸಿಂಗಾರಗೊಂಡಿದೆ.
ನ.5ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಾರ್ಯಕಾರಿಣಿಯನ್ನು ಉದ್ಘಾಟಿಸಲಿದ್ದಾರೆ. ಅವರು ನ.4ರಂದೇ ನಗರಕ್ಕಾಗಮಿಸಲಿದ್ದಾರೆ. ಉದ್ಘಾಟನೆ ಮುಗಿದ ಬಳಿಕ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಅದರಲ್ಲಿ ಮುಖ್ಯಮಂತ್ರಿ ಭಾಗವಹಿಸುತ್ತಾರೆ. ನಗರದ ಟಿ.ವಿ. ರಮಣ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಸಭೆ ನಡೆಯಲಿದೆ.
ಕೊರೊನಾ ಸಂಕಷ್ಟ ಕಾಲದಲ್ಲಿ ನಡೆಯುತ್ತಿರುವ ಕಾರ್ಯಕಾರಣಿಯಲ್ಲಿ ಸುಮಾರು 150 ಮಂದಿ ಪ್ರಮುಖರು ಭಾಗವಹಿಸಲಿದ್ದಾರೆ. ಬಿ. ಎಲ್ . ಸಂತೋಷ್ ದಿಕ್ಸೂಚಿ ಭಾಷಣ ಮಾಡುತ್ತಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.
