ಕಾರ್ಕಳ : ಕಾರ್ಕಳದ ಪ್ರಸಿದ್ಧ, ಪುರಾತನ, ಪುಣ್ಯ ಕ್ಷೇತ್ರ ಬಸದಿಗಳ ಆವರಣ ಇದೀಗ ಫೋಟೋ ಶೂಟ್ ಮತ್ತು ಪ್ರೇಮಿಗಳ ಚೆಲ್ಲಾಟ ತಾಣವಾಗಿ ಮಾರ್ಪಾಡಾಗುತ್ತಿವೆಯೇ ಎಂಬ ಮಾತುಗಳು ವ್ಯಾಪಕವಾಗಿ ಕೇಳಿ ಬರುತ್ತಿದೆ. ವಿಶ್ವ ವಿಖ್ಯಾತ ಕಾರ್ಕಳದ ಗೊಮಟೇಶ್ವರ ಬೆಟ್ಟ ಸುತ್ತಮುತ್ತ, ಚತುರ್ಮುಖ ಬಸದಿ ಆವರಣ, ಆನೆಕೆರೆ ಬಸದಿ, ಹೆಬ್ರಿ ತಾಲೂಕಿನ ವರಂಗ ಬಸದಿ ವಠಾರದಲ್ಲಿ ಫೋಟೋ ಶೂಟ್, ಪ್ರಿ ವೆಡ್ಡಿಂಗ್ ಫೊಟೊಶೂಟ್ , ಪ್ರೇಮಿಗಳ ಚೆಲ್ಲಾಟ ವಿಪರೀತವಾಗಿದ್ದು, ಬಸದಿಗೆ ಬರುವ ಭಕ್ತರಿಗೆ ತೀವ್ರ ಮುಜುಗರನ್ನುಂಟು ಮಾಡುತ್ತಿದೆ. ಈ ಕುರಿತು ಇದೀಗ ಸಾಮಾಜಿಕ ತಾಣಗಳಲ್ಲಿ ಭಾರಿ ಅಸಮಾಧಾನ, ಟೀಕೆ ವ್ಯಕ್ತವಾಗುತ್ತಿದೆ. ಕಾರ್ಕಳದಲ್ಲಿನ ಬಹುತೇಕ ಬಸದಿಗಳು ಪುರಾತತ್ವ ಇಲಾಖೆ ಸುಪರ್ದಿಯಲ್ಲಿರುವುದರಿಂದ ಅವುಗಳ ರಕ್ಷಣೆ ಹೊಣೆ ಪುರಾತತ್ವ ಇಲಾಖೆ ಮೇಲಿದೆ.
1432 ರ ಸಂದರ್ಭ ಭೈರವರಸ ವೀರಪಾಂಡ್ಯನ ಕಾಲದಲ್ಲಿ ಶ್ರೀ ಭಗವಾನ್ ಬಾಹುಬಲಿ ವಿಗ್ರಹ (42 ಅಡಿ ಎತ್ತರ) ಕಾರ್ಕಳ ಸಮೀಪದ ಶಿಲಾಬೆಟ್ಟದಲ್ಲಿ ಸ್ಥಾಪನೆಯಾಗಿದ್ದು, ಈ ಜಿನಬಿಂಬದ ದರ್ಶನಕ್ಕೆ ದೇಶ, ವಿದೇಶದ ನಾನಾ ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಪವಿತ್ರ, ಪ್ರಶಾಂತ ತಾಣವಾಗಿರುವ ಈ ಬೆಟ್ಟಕ್ಕೆ ಸೂಕ್ತ ಭದ್ರತೆಯಿಲ್ಲದಿರುವುದರಿಂದ ಪ್ರೇಮಿಗಳು ಇಲ್ಲಿ ಸ್ವಚ್ಚಂದವಾಗಿ ತಿರುಗಾಡುತ್ತಿದ್ದಾರೆ. ತಮಗಿಷ್ಟವಾದ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇದು ಕುಟುಂಬದೊಂದಿಗೆ ಬರುವ ಭಕ್ತರಿಗೆ ಇರಿಸುಮುರಿಸು ಉಂಟು ಮಾಡುತ್ತಿದೆ.
ಭಂಗಿ ದರ್ಶನ
ಹೆಬ್ರಿ ತಾಲೂಕಿನ ವರಂಗ ಬಸದಿ ವೀಕ್ಷಣೆಗೂ ಪ್ರತಿದಿನ ನೂರಾರು ಮಂದಿ ಆಗಮಿಸುತ್ತಿದ್ದಾರೆ. ೧೦ ಎಕರೆ ವಿಸ್ತಾರವಾಗಿರುವ ಕೆರೆಯ ಮಧ್ಯದಲ್ಲಿ ಬಸದಿ ನಿರ್ಮಾಣವಾಗಿರುವುದು ನೋಡುಗರ ಕಣ್ಮನ ಸೆಳೆಯುತ್ತಿದೆ. ಬಸದಿ ಸಂಪರ್ಕಿಸಲು ದೋಣಿಯ ವ್ಯವಸ್ಥೆಯೂ ಇದೆ. ಈ ದೋಣಿಯಲ್ಲಿ ಮತ್ತು ಬಸದಿ ಮೆಟ್ಟಿಲುಗಳಲ್ಲಿ ಪ್ರಿ ವೆಡ್ಡಿಂಗ್ ಶೂಟ್ ಮಾಡಲಾಗುತ್ತಿದ್ದು, ಇಲ್ಲಿಗಾಗಮಿಸಿದವರಿಗೆ ದೇವರ ದರ್ಶನ ಬದಲು ಭಾವಿ ಪತಿ ಪತ್ನಿಯರ ವಿವಿಧ ರೀತಿಯ ಭಂಗಿ ದರ್ಶನವಾಗುತ್ತಿದೆ. ಈ ಬಸದಿ ಹೊಂಬುಜ ಮಠದ ಆಡಳಿತಕೊಳಪಟ್ಟಿದ್ದು, ಇಂತಹ ದೃಶ್ಯಾವಳಿಗೆ ಆಡಳಿತ ಸಮಿತಿ ಕಡಿವಾಣ ಹಾಕಬೇಕೆನ್ನುವ ಆಗ್ರಹ ಭಕ್ತರದ್ದು. ಜೈನ ಧಾರ್ಮಿಕ ಕೇಂದ್ರಗಳಿಗೆ ಸೂಕ್ತ ಭದ್ರತೆ ಇಲ್ಲದಿರುವುದರಿಂದ ಇಂತಹ ದೃಶ್ಯಾವಳಿಗಳು ಜೈನ ಧಾರ್ಮಿಕ ಕೇಂದ್ರಗಳಲ್ಲೇ ಹೆಚ್ಚಾಗಿ ಕಂಡುಬರುತ್ತಿದೆ.

ಕಡಿವಾಣ ಅಗತ್ಯ
ಧಾರ್ಮಿಕ ಕೇಂದ್ರಗಳಲ್ಲಿ ಅಸಭ್ಯ ರೀತಿಯಲ್ಲಿ ಫೋಟೋ ಶೂಟ್ ಮಾಡುವ ಮೂಲಕ ಧಾರ್ಮಿಕ ಕೇಂದ್ರಗಳ ಪಾವಿತ್ರ್ಯ ಮತ್ತು ಮೌಲ್ಯವನ್ನು ಕೆಡಿಸುವ ಕಾರ್ಯವಾಗುತ್ತಿದೆ. ಪ್ರತಿ ಧಾರ್ಮಿಕ ಕೇಂದ್ರಕ್ಕೂ ಭದ್ರತಾ ಸಿಬ್ಬಂದಿ ನೇಮಕಗೊಳಿಸುವ ಮೂಲಕ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ. ಆಯಾಯ ಧಾರ್ಮಿಕ ಕೇಂದ್ರಗಳ ಆಡಳಿತ ಸಮಿತಿ, ಸಂಬಂಧಪಟ್ಟ ಇಲಾಖಾಧಿಕಾರಿಗಳು ಮೌನವಹಿಸದೇ ಸೂಕ್ತ ನಿರ್ಧಾರ ತಳೆಯಬೇಕೆನ್ನುವುದು ಭಕ್ತ ಜನರ ಒತ್ತಾಯ.









































