Homeಸಂಪಾದಕೀಯಸಂಪಾದಕೀಯ -ಎಚ್ಚರ! ಎರಡನೇ ಅಲೆ ಅಪ್ಪಳಿಸುತ್ತಿದೆ

Related Posts

ಸಂಪಾದಕೀಯ -ಎಚ್ಚರ! ಎರಡನೇ ಅಲೆ ಅಪ್ಪಳಿಸುತ್ತಿದೆ

ಇಡೀ ಜಗತ್ತನ್ನು ಸಂಕಷ್ಟಕ್ಕೆ ದೂಡಿರುವ ಕೊರೊನಾ ವೈರಸ್‌ ಹಾವಳಿ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಭಾರತದಲ್ಲಿ ಕಳೆದ ಕೆಲವು ವಾರಗಳಿಂದ ವೈರಸ್‌ ಹರಡುವ ವೇಗ ಕಡಿಮೆಯಾಗಿದೆ ಎನ್ನುವುದು ನಿಜ. ಹಾಗೆಂದು ನಾವು ಅಪಾಯದಿಂದ ಪಾರಾಗಿಲ್ಲ. ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂದು ಭಾವಿಸಿ ನಿರಾಳವಾಗಿರುವ ಹೊತ್ತು ಇದಲ್ಲ. ಹಾಗೇನಾದರೂ ಮಾಡಿದರೆ ಪರಿಣಾಮ ಏನಾಗಬಹುದು ಎನ್ನುವುದಕ್ಕೆ ನಮ್ಮ ಕಣ್ಣೆದುರೇ ಐರೋಪ್ಯ ದೇಶಗಳ ಉದಾಹರಣೆಯಿದೆ. ಯುರೋಪ್‌ ಖಂಡದ ಹೆಚ್ಚಿನ ದೇಶಗಳು ಕೊರೊನಾದ ಎರಡನೆ ಅಲೆಯ ಹೊಡೆತಕ್ಕೆ ಸಿಲುಕಿ ತತ್ತರಿಸುತ್ತಿವೆ.
ಕೊರೊನಾ ಕಡಿಮೆಯಾಯಿತು, ಇನ್ನು ತೊಂದರೆಯಿಲ್ಲ ಎಂದು ಭಾವಿಸಿ ನಿರ್ಲಕ್ಷ್ಯ ತೋರಿದ್ದಕ್ಕೆ ಆ ದೇಶಗಳು ಈಗ ಬೆಲೆ ತೆರುತ್ತಿವೆ. ಜರ್ಮನಿ, ಫ್ರಾನ್ಸ್‌, ಇಂಗ್ಲಂಡ್‌ ಮತ್ತಿತರ ದೇಶಗಳಲ್ಲಿ ಮತ್ತೊಮ್ಮೆ ಲಾಕ್‌ ಡೌನ್‌ ಹೇರಲಾಗಿದೆ. ಮಾರ್ಚ್‌, ಎಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಯುರೋಪ್‌ನಲ್ಲಿ ನಿತ್ಯ 35 ರಿಂದ 40 ಸಾವಿರ ಕೊರೊನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಇದು ಯುರೋಪಿನಲ್ಲಿ ಕೊರೊನಾ ಉತ್ತುಂಗದಲ್ಲಿದ್ದ ಸಮಯ. ಅನಂತರ ಯುರೋಪಿನಲ್ಲಿ ಪಾಸಿಟಿವ್‌ ಪ್ರಮಾಣ ಕಡಿಮೆಯಾಗತೊಡಗಿತು. ಅನಂತರ ಕೊರೊನಾ ಕಾಡಿದ್ದು ಅಮೆರಿಕ ಹಾಗೂ ಭಾರತವನ್ನು.
ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಿಂದೀಚೆಗೆ ಯುರೋಪ್‌ ನಲ್ಲಿ ನಿತ್ಯ ಸರಾಸರಿಯಾಗಿ 50 ರಿಂದ 60 ಸಾವಿರ ಪ್ರಕರಣಗಳು ವರದಿಯಾಗುತ್ತಿವೆ. ಅಂದರೆ ಮೊದಲ ಸುತ್ತಿಗಿಂತ ಎರಡನೇ ಸುತ್ತಿನಲ್ಲಿ ಪಾಸಿಟಿವ್‌ ಪ್ರಕರಣಗಳು ಗಣನೀಯವಾಗಿ ಏರಿಕೆ ಕಂಡಿವೆ. ಕಳೆದ ಗುರುವಾರ ಒಂದೇ ದಿನ ಯುರೋಪಿನಿಂದ 2.5 ಲಕ್ಷ ಪ್ರಕರಣಗಳು ವರದಿಯಾಗಿವೆ. ಇಷ್ಟು ಮಾತ್ರವಲ್ಲ ಎರಡನೇ ಅಲೆಯ ಹೊಡೆತ ಮೊದಲ ಅಲೆಗಿಂತ ಹೆಚ್ಚು ತೀವ್ರವಾಗಿದೆ. ಆರಂಭದಲ್ಲಿ ಮಾಡುತ್ತಿದ್ದ ಚಿಕಿತ್ಸಾ ವಿಧಾನ ಎರಡನೆ ಅಲೆಗೆ ಪರಿಣಾಮ ಬೀರುತ್ತಿಲ್ಲ ಎನ್ನುತ್ತಿದ್ದಾರೆ ತಜ್ಞರು.
ಹೀಗೆ ಕೊರೊನಾ ಇನ್ನೊಂದು ಸುತ್ತಿನ ಹಾವಳಿಯಿಡಲು ಹವಾಮಾನದಲ್ಲಾಗಿರುವ ಬದಲಾವಣೆಯೂ ಸೇರಿ ಹಲವು ಕಾರಣಗಳಿರಬಹುದು. ಆದರೆ ಮುಖ್ಯವಾದ ಕಾರಣ ಜನರು ವೈರಸ್‌ ಮುಂಜಾರೂಕತಾ ಕ್ರಮಗಳನ್ನು ಪಾಲಿಸುವಲ್ಲಿ ಅಸಡ್ಡೆ ತೋರಿಸುತ್ತಿರುವುದು ಮತ್ತು ಏನೂ ಆಗಿಲ್ಲ ಎಂಬಂತೆ ಬಿಂದಾಸ್‌ ಆಗಿ ತಿರುಗಾಡುತ್ತಿರುವುದು.
ಲಾಕ್‌ ಡೌನ್‌ ಅನ್ನು ಹಂತ ಹಂತವಾಗಿ ತೆರವುಗೊಳಿಸಿದ ಬಳಿಕ ಜನಜೀವನ ಸಹಜತೆಯತ್ತ ಹಿಂದಿರುಗುತ್ತಿದೆ. ಬಹುತೇಕ ಎಲ್ಲ ವ್ಯಾಪಾರ ವಹಿವಾಟುಗಳು ಪ್ರಾರಂಭವಾಗಿವೆ. ಕೆಲವು ರಾಜ್ಯಗಳಲ್ಲಿ ಶಾಲಾ ಕಾಲೇಜುಗಳನ್ನು ಕೂಡ ತೆರೆಯಲಾಗಿದೆ.ಸಭೆ ಸಮಾರಂಭಗಳಲ್ಲೂ ಕೆಲವು ಜನರು ಏನೂ ಆಗಿಲ್ಲ ಎಂಬಂತೆ ಯಾವುದೇ ಸುರಕ್ಷಾ ಕ್ರಮಗಳನ್ನು ಪಾಲಿಸದೆ ಭಾಗವಹಿಸುತ್ತಿದ್ದಾರೆ. 500-600 ಜನರು ಸೇರುವ ಸಮಾರಂಭಗಳು ನಡೆಯುತ್ತಿವೆ.
ಇವೆಲ್ಲ ಆಗಬೇಕಾದದ್ದೇ. ಬಹಳ ಸಮಯ ಎಲ್ಲವನ್ನೂ ಮುಚ್ಚಿ ಮನೆಯಲ್ಲಿ ಕುಳಿತುಕೊಳ್ಳುವುದಂತೂ ಸಾಧ್ಯವಾಗದ ಮಾತು. ಆದರೆ ಇಂಥ ಸಮಯದಲ್ಲಿ ತೀವ್ರವಾದ ಮುಂಜಾಗರೂಕತಾ ಕ್ರಮಗಳನ್ನು ಪಾಲಿಸುವುದು ಬಹಳ ಅಗತ್ಯ. ಲಾಕ್‌ ಡೌನ್‌ ಇಲ್ಲ ಎಂದು ಹೇಳಿ ವಿನಾಕಾರಣ ತಿರುಗಾಡಲು ಹೋಗುವುದು ಇತ್ಯಾದಿಗಳನ್ನು ಮಾಡಿದರೆ ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ.
ಕೊರೊನಾ ವಿಜ್ಞಾನಿಗಳ ಮತ್ತು ವೈದ್ಯರ ಕಲ್ಪನೆಗೂ ನಿಲುಕದ ವೈರಸ್.‌ ಅದು ಪದೇ ಪದೆ ತನ್ನ ಸ್ವಭಾವ, ಗುಣಲಕ್ಷಣ, ಸ್ವರೂಪಗಳನ್ನು ಬದಲಾಯಿಸುತ್ತಾ ಎಲ್ಲರನ್ನೂ ಯಾಮಾರಿಸುತ್ತಿದೆ. ಅದಕ್ಕಿನ್ನೂ ಲಸಿಕೆಯ ಸಂಶೋಧನೆಯಾಗಿಲ್ಲ. ಏನೇ ತಿಪ್ಪರಲಾಗ ಹಾಕಿದರೂ ಪಕ್ಕಾ ಲಸಿಕೆ ಸಿಗಲು ಇನ್ನೂ ಐದಾರು ತಿಂಗಳು ಬೇಕಾಗಬಹುದು. ಯುರೋಪಿಗೆ ಅಪ್ಪಳಿಸಿದ ಎರಡನೇ ಅಲೆ ಭಾರತಕ್ಕೆ ಅಪ್ಪಳಿಸುವುದಿಲ್ಲ ಎನ್ನುವುದಕ್ಕೆ ಯಾವುದೇ ಖಾತರಿಯಿಲ್ಲ.ದಿಲ್ಲಿ ಮತ್ತು ಕೇರಳಕ್ಕೆ ಈಗಾಗಲೇ ಎರಡನೇ ಅಪ್ಪಳಿಸಿಯಾಗಿದೆ. ಹೀಗಾಗಿ ಸರಕಾರವೇ ಎಲ್ಲವನ್ನೂ ಮಾಡಲಿ ಎಂದು ಅಸಡ್ಡೆ ವಹಿಸುವ ಬದಲು ನಮ್ಮ ರಕ್ಷಣೆಯನ್ನು ನಾವು ಮಾಡಿಕೊಳ್ಳುವುದು ಒಳ್ಳೆಯದು. ಚಳಿಗಾಲದಲ್ಲಿ ಭಾರತದಲ್ಲಿ ಕೊರೊನಾ ಹಾವಳಿ ಹೆಚ್ಚಾಗಬಹುದೇ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ಸಾಲು ಸಾಲು ಹಬ್ಬಗಳು ಬರುತ್ತಿರುವ ಸಂದರ್ಭದಲ್ಲಿ ಜನರು ಗರಿಷ್ಠ ಎಚ್ಚರಿಕೆ ವಹಿಸಿಕೊಳ್ಳಬೇಕು.

LEAVE A REPLY

Please enter your comment!
Please enter your name here

Latest Posts

error: Content is protected !!