ಕನ್ನಡಿಗರ ಅನಾಥ ಪ್ರಜ್ಞೆ ಮತ್ತು ಕೆಲವು ಹಕ್ಕೊತ್ತಾಯಗಳು

0

ಯಥಾ ಪ್ರಕಾರ ನವೆಂಬರ್ ಒಂದು ಬರುತ್ತಿದೆ. ಇದ್ದಕ್ಕಿದ್ದಂತೆ ಕನ್ನಡ ಜ್ವರ ಏರುತ್ತಿದೆ. ನವೆಂಬರ್ ತಿಂಗಳು ಮುಗಿಯುತ್ತಲೇ ಪುನಃ ಎಲ್ಲಾ ತಣ್ಣಗಾಗಿ ಕನ್ನಡ ಮತ್ತೊಂದು ವರ್ಷದ ತನಕವೂ ನಮ್ಮ ವಿಸ್ಮರಣೆಗೆ ಒಳಗಾಗುತ್ತದೆ. ನಿದ್ರೆ ಬಂದಂತೆ ನಟಿಸುವ ಕನ್ನಡಿಗರ ಬಗ್ಗೆ ಮರುಕವೂ ಉಂಟಾಗುತ್ತದೆ. ನನ್ನನ್ನು ಪದೇ ಪದೆ ಕಾಡುವ ಕವಿತೆ ಶ್ರೀ ಅವರ ‘ಕನ್ನಡ ತಾಯಿಯ ಹರಕೆ’- ಕನ್ನಡದ ದುಃಸ್ಥಿತಿ ಅವತ್ತಿಗೂ ಇವತ್ತಿಗೂ ಹೆಚ್ಚು ಕಡಿಮೆ ಹಾಗೆ ಉಳಿದುಕೊಂಡಿದೆ, ಮತ್ತಷ್ಟು ಹೆಚ್ಚೂ ಆಗುತ್ತಿದೆ. ಕರ್ನಾಟಕದಲ್ಲಿಯೇ ಕನ್ನಡಿಗ ಒಂದು ರೀತಿಯಲ್ಲಿ ಅನಾಥ ಪ್ರಜ್ಞೆಗೆ ಗುರಿಯಾಗುತ್ತಿದ್ದಾನೆ. ತನ್ನದೇ ನೆಲದಲ್ಲಿ ದುಡಿಯುವ ಅವಕಾಶಗಳಿಂದ ವಂಚಿತನಾಗುತ್ತಿದ್ದಾನೆ. ಇದಕ್ಕೆ ಸ್ವತಃ ಕನ್ನಡಿಗನೂ ಹೊಣೆಯನ್ನು ಹೊತ್ತುಕೊಳ್ಳಬೇಕಿದೆ. ದುರಾದೃಷ್ಟವಶಾತ್ ನಾವು ವೈಯಕ್ತಿಕ ಹೊಣೆಗಾರಿಕೆಯನ್ನು ಮರೆತು ದೊಷವನ್ನು ಸದಾ ವ್ಯವಸ್ಥೆಯಲ್ಲಿಯೇ ಹುಡುಕುತ್ತಿದ್ದೇವೆ. ಇವತ್ತು ನಮ್ಮ ಜನ ವೃತ್ತಿ ಕೌಶಲವನ್ನು ಕಳೆದುಕೊಳ್ಳುತ್ತಿದ್ದಾರೋ ಅಥವಾ ಅಂತಹ ಕೆಲಸ ಮಾಡುವುದು ತಮ್ಮ ಮಟ್ಟಕ್ಕೆ ಸರಿಯಾದುದಲ್ಲ ಅಂತ ಭಾವಿಸುತ್ತಿದ್ದಾರೆಯೋ ತಿಳಿಯದು.

 • ಮೂಡುಬಿದಿರೆ, ಕಾರ್ಕಳದಂತಹ ಊರಿನಲ್ಲೂ ನಮಗೆ ಕ್ಷೌರ ಮಾಡಲು ಬಿಹಾರಿಗಳು ಸಿಗುತ್ತಾರೆಯೇ ಹೊರತಾಗಿ ಸ್ಥಳೀಯರು ಸಿಗುತ್ತಿಲ್ಲ. ನಾವು ಅವರಿಂದ ಹಿಂದಿ ಕಲಿಯುತ್ತೇವೆಯೇ ಹೊರತಾಗಿ ಅವರಿಗೆ ಕನ್ನಡ, ತುಳು ಕಲಿಸೋದಿಲ್ಲ.
 • ಕಟ್ಟಡದ ನಿರ್ಮಾಣದ ಕೆಲಸಗಳಿಗೂ ಇವತ್ತು ತಮಿಳರು, ತೆಲುಗರು, ಹಿಂದಿವಾಲಾಗಳು ತುಂಬುತ್ತಿದ್ದಾರೆ. ಆದರೆ ಸ್ಥಳೀಯರಿಗೆ ಅದರಲ್ಲಿ ಆಸಕ್ತಿ ಇಲ್ಲ.
 • ನಮ್ಮ ರೈತಾಪಿವರ್ಗದವರು ತಮ್ಮ ಕೃಷಿ ಭೂಮಿಗಳನ್ನು ಮಲೆಯಾಳಿಗಳಿಗೆ ಮಾರುತ್ತಿದ್ದಾರೆ, ಸ್ವತಃ ಕೃಷಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ.
 • ವ್ಯಾಪಾರ ವ್ಯವಹಾರಗಳಲ್ಲಿ ಹೊರಗಿನಿಂದ ಬರುವ ಜನಗಳು ಗಟ್ಟಿ ಆಗುತ್ತಿದ್ದಾರೆ. ಸ್ಥಳೀಯರು ಈ ವಿಚಾರದಲ್ಲೂ ಅಸಕ್ತಿ ಕಳೆದುಕೊಳ್ಳುತ್ತಿದ್ದಾರೆ.
  ಹೇಳುತ್ತಾ ಹೋದರೆ ಈ ಪಟ್ಟಿ ಹನುಮನ ಬಾಲದಂತೆ ಬೆಳೆಯುತ್ತದೆ. ತನ್ಮೂಲಕವಾಗಿ ನಾವುಗಳು ನಮ್ಮ ದೋಷಗಳನ್ನು ಆತ್ಮವಿಶ್ಲೇಷಣೆ ಮಾಡಿಕೊಳ್ಳದೇ “ಹೊರಗಿನಿಂದ ಬಂದವರು ನಮ್ಮ ಅವಕಾಶಗಳನ್ನು ಕಿತ್ತುಕೊಳ್ಳುತ್ತಿದ್ದಾರೆ” ಅಂತ ರಾಜಕೀಯ ಶೈಲಿಯಲ್ಲಿ ಬೊಬ್ಬೆ ಹೊಡೆಯುತ್ತಿದ್ದೇವೆ. ನೆನಪಿಡಿ, ನಮ್ಮ ರಾಷ್ಟ್ರದ ಕಾನೂನು, ಸಂವಿಧಾನ ಪ್ರಜೆಗಳಿಗೆ ನೀಡಿರುವ ಹಕ್ಕು, ಯಾರೊಬ್ಬರು ಬೇಕಿದ್ದರೂ ತಮ್ಮ ಬದುಕನ್ನು ಎಲ್ಲಿಯೂ ಕಟ್ಡಿಕೊಳ್ಳಬಹುದು, ವ್ಯಾಪಾರ ವ್ಯವಹಾರ ಮಾಡಬಹುದು ಎಂದಿದೆ. ಅಷ್ಟೇ ಏಕೆ, ಜಗತ್ತಿನ ಮೂಲೆ ಮೂಲೆಗಳಲ್ಲಿ ಹುಟ್ಟಿದ ಊರು, ಜಿಲ್ಲೆ ಬಿಟ್ಟು ಎಲ್ಲೆಲ್ಲಿಯೋ ಬದುಕು ಕಟ್ಟಿಕೊಂಡಿರುವ ಲಕ್ಷಾಂತರ ಕನ್ನಡಿಗರು ಇದ್ದಾರೆ. ದಕ್ಷಿಣ ಕನ್ನಡ ಜನಗಳು ತಮ್ಮ ಬದುಕು ಕಟ್ಟಿಕೊಳ್ಳಲು ಮುಂಬಯಿ, ದೆಹಲಿ, ಬೆಂಗಳೂರು ಅರೇಬಿಯನ್ ರಾಷ್ಟ್ರಗಳಲ್ಲಿ ವ್ಯಾಪಾರ ವಹಿವಾಟು ನಡೆಸಿಕೊಂಡು ಬರುತ್ತಿದ್ದಾರೆ. ಈಗ ಉಡುಪಿಯಲ್ಲಿ ಕೆಲವು ಸ್ಥಾಪಿತ ಹಿತಾಸಕ್ತಿಯವರು ” ಮಾರ್ವಾಡಿ ಹಠಾವೋ” ಅಂತ ಗಲಾಟೆ ಎಬ್ಬಿಸಿದ್ದಾರೆ. ಒಂದು ವೇಳೆ ಮುಂಬಯಿಗರು ‘ಕನ್ನಡಿಗರ ಹಠಾವೋ’ ಚಳವಳಿ ಮಾಡಿದರೆ ಅದನ್ನು ತಡೆದುಕೊಳ್ಳುವ ತಾಕತ್ತು ನಮಗೆ ಇದೆಯೇ? ಅಥವಾ ಎಣ್ಣೆ ರಾಷ್ಟ್ರಗಳು “ಭಾರತಿಯರ ಹಠಾವೋ” ಕೂಗು ಎಬ್ಬಿಸಿದರೆ ಏನಾಗಬಹುದು.? ಇದು ವಿವೇಕಿಗಳು ಆಲೊಚಿಸಬೆಕಾದ ವಿಚಾರ.
 • ಕನ್ನಡದ ಸಮಸ್ಯೆಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೂ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ. ಸರಿಯಾದ ಕಾನೂನಿನ ಮೂಲಕ ಸ್ಥಳೀಯರಿಗೆ ಇರುವ ಉದ್ಯೋಗದ ಅವಕಾಶಗಳು ಇರುವಂತೆ ನೋಡಿಕೊಳ್ಳಬೇಕಿದೆ.
  -ಕೇಂದ್ರ ಸರ್ಕಾರವು ನಡೆಸುವ ಎಲ್ಲಾ ವಿಧವಾದ ಪರಿಕ್ಷೆಗಳೂ ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿಯೂ ನಡೆಸುವಂತೆ ಆಗಬೇಕಿದೆ. ಈಗಿರುವಂತೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಪ್ರಭುತ್ವ ಇಲ್ಲದ ಕನ್ನಡಿಗನಿಗೆ ಕೇಂದ್ರ ಸರ್ಕಾರದ ನೌಕರಿ ದೊರೆಯುವುದು ಅಸಾಧ್ಯ ಎನ್ನುವ ಸ್ಥಿತಿ ಇದೆ. ಇದು ಬದಲಾಗಬೇಕು.
 • ಕೇಂದ್ರ ಸರ್ಕಾರದ ಎಲ್ಲಾ ಸೇವೆಗಳೂ ಕನ್ನಡದಲ್ಲಿಯೂ ದೊರೆಯಬೇಕು. ಬರೀ ಹಿಂದಿ ದಿವಸ್ ಆಚರಣೆ ಅಲ್ಲ. ಪ್ರಾದೇಶಿಕವಾದ ಎಲ್ಲಾ ಭಾಷೆಗಳಿಗೂ ಸಮಾನ ಗೌರವ ದೊರೆಯುವಂತೆ ನೋಡಿಕೊಳ್ಳಬೇಕು. ಭಾಷೆಯ ವಿಚಾರದಲ್ಲಿ ಕೇಂದ್ರ ಸರ್ಕಾರ ಡಬ್ಬಲ್ ಗೇಮ್ ಆಡೋದನ್ನು ನಿಲ್ಲಿಸಬೇಕು.
 • ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನ ಅನ್ನುವುದು ಬರೀ ಮುದಗೊಳಿಸುವ ಘೋಷಣೆ ಅಗಿದೆಯೇ ಹೊರತಾಗಿ ಅದನ್ನು ಅನುಷ್ಠಾನಗೊಳಿಸುವುದಕ್ಕೆ ಬೇಕಾದ ಹಣಕಾಸಿನ ನೆರವು ಇನ್ನೂ ದೊರೆತಿಲ್ಲ. ಮೊದಲಿಗೆ ಈ ಕಣ್ಣೊರೆಸುವ ನಾಟಕ ನಿಂತು ನಿಜವಾದ ಅರ್ಥದಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಲ್ಲಬೇಕು.
 • ಪ್ರಾಕೃತಿಕ ವಿಕೋಪಗಳು ಸಂಭವಿಸಿದ ಸಂದರ್ಭದಲ್ಲಿ ಕೇಂದ್ರವು ಯಾವತ್ತಿಗೂ ಕರ್ನಾಟಕಕ್ಕೆ ನಿಜವಾದ ನ್ಯಾಯ ದೊರಕಿಸಿಕೊಟ್ಟಿಲ್ಲ. ಇದು ಎಲ್ಲಾ ಕಾಲದಲ್ಲೂ ನಡೆದುಕೊಂಡು ಬರುತ್ತಿರುವ ಅನ್ಯಾಯವಾಗಿದೆ.
 • ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ರೈಲ್ವೇ ಮುಂತಾದ ವಿಷಯಗಳಲ್ಲಿ ಕರ್ನಾಟಕದ ಜನಗಳಿಗೆ ಮೂಗಿಗೆ ತುಪ್ಪ ಸವರುವುದನ್ನು ನಿಲ್ಲಿಸಿ ನ್ಯಾಯೋಚಿತ ಪಾಲು ದೊರೆಯುವಂತೆ ಆಗಬೇಕು‌.
 • ರಾಜ್ಯ ಸರ್ಕಾರವೂ ಕನ್ನಡ ಭಾಷಾ ಅಭಿಮಾನವನ್ನು ಬರಿಯ ಘೋಷಣೆಗಳ ಮಟ್ಟದಲ್ಲಿ ನಿಲ್ಲಿಸದೇ ನಿಜವಾದ ಕನ್ನಡಪರ ನಿಲುವನ್ನು ಹೊಂದಬೇಕು.
 • ಸ್ಥಳೀಯರಿಗೆ ಉದ್ಯೋಗ ನೀಡದ, ರಾಜ್ಯ ಭಾಷೆ ಮತ್ತು ಸಂಸ್ಕೃತಿಗೆ ಅನಾದರ ತೋರುವ ಜನಗಳಿಗೆ ಅವರ ಸ್ಥಾನದ ಅರಿವು ಮೂಡಿಸಬೇಕು.
 • ಕರ್ನಾಟಕದಲ್ಲಿ ಕನ್ನಡಿಗರಿಗೆ ಜೀವನದ ಎಲ್ಲಾ ಹಂತಗಳಲ್ಲಿಯೂ ಪ್ರಾಶಸ್ತ್ಯ ನೀಡಬೇಕು. ಕನ್ನಡದ ನೆಲ, ಜಲ, ಸಂಸ್ಕೃತಿಗೆ ತೊಂದರೆ ಉಂಟಾಗುವ ಸಮಯದಲ್ಲಿ ಪ್ರಾಂಜಲ ಮನಸ್ಸಿನಿಂದ ಕನ್ನಡದಲ್ಲಿ ಪರವಾದ ನಿಲುವಿಗೆ ಅಂಟಿಕೊಳ್ಳಬೇಕು.
 • ಹೊಸ ಹೊಸ ಉದ್ಧಿಮೆಗಳನ್ನು ಸ್ಥಾಪಿಸಲು ಸ್ಥಳೀಯರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು. ಉದ್ಯೋಗದ ವಿಚಾರದಲ್ಲಿ ಸ್ಥಳೀಯರನ್ನು ಕಡೆಗಣಿಸುವ ಯಾವುದೇ ಸಂಸ್ಥೆಗಳಿಗೆ ಅವಕಾಶ ನೀಡಬಾರದು.
 • ಬ್ಯಾಂಕುಗಳು, ಅಂಚೆ ಕಚೇರಿ ಸೇರಿದಂತೆ ಸಾರ್ವಜನಿಕರ ಸಂಪರ್ಕಕ್ಕೆ ಬರುವ ಎಲ್ಲಾ ರಾಜ್ಯ ಮತ್ತು ಕೇಂದ್ರದ ಕಚೇರಿಗಳಲ್ಲಿ ಕನ್ನಡ ಬರುವ ಅಧಿಕಾರಿಗಳು ಮಾತ್ರ ಇರುವಂತೆ ನೋಡಿಕೊಳ್ಳಬೇಕು.
 • ಕರ್ನಾಟಕಕ್ಕೆ ಬರುವ ಮತ್ತು ಹೋಗುವ ಎಲ್ಲಾ ವಿಮಾನಗಳಲ್ಲಿ, ಮತ್ತು ವಿಮಾನ ನಿಲ್ದಾಣಗಳಲ್ಲಿ ಪ್ರಕಟಣೆಗಳು ಪ್ರಧಾನವಾಗಿ ಕನ್ನಡದಲ್ಲಿ ಇರುವಂತೆ ನೋಡಿಕೊಳ್ಳಬೇಕು.
 • ಕನ್ನಡ ಶಾಲೆಗಳನ್ನು ಯಾವ ಕಾರಣಕ್ಕೂ ಮುಚ್ಚಬಾರದು. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್ ಭಾಷೆಯನ್ನು ಪರಿಣಾಮಕಾರಿಯಾಗಿ ಬೋಧಿಸುವ ವ್ಯವಸ್ಥೆ ಆಗಬೇಕು.
 • ಕನ್ನಡ ಭಾಷೆ ಮತ್ತು ಸಂಸ್ಕೃತಿ ಕುರಿತಾದ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ನೀಡದೆ ಶಾಶ್ವತವಾದ ಪರಿಹಾರ ನೀಡುವಂತೆ ಕಾರ್ಯಕ್ರಮ ರೂಪಿಸಬೇಕು.
 • ಪ್ರವಾಸೋದ್ಯಮ, ತನ್ಮೂಲಕ ಉದ್ಯೋಗ ಸೃಷ್ಟಿ ಇವುಗಳ ಬಗ್ಗೆ ಗಮನ ನೀಡಬೇಕು.
 • ಕನ್ನಡ ಕಲಿಯದ / ಕಲಿಯಲು ಮನಸ್ಸಿಲ್ಲದ ಯಾರಿಗೂ ಕರ್ನಾಟಕದಲ್ಲಿ ಸರ್ಕಾರ ಯಾವ ಸೌಲಭ್ಯವನ್ನೂ ಉಚಿತವಾಗಿ ಕೊಡುವ ಪದ್ಧತಿ ನಿಲ್ಲಬೇಕು. ಸರ್ಕಾರದ ಎಲ್ಲಾ ವಿಧವಾದ ವ್ಯವಹಾರಗಳು ಕನ್ನಡದಲ್ಲಿ ಮಾತ್ರ ಬರುವಂತೆ ನೋಡಿಕೊಂಡರೆ ಸಾಕು.
  ಈ ಪಟ್ಟಿಯನ್ನು ಎಷ್ಟು ಬೇಕಿದ್ದರೂ ಬೆಳೆಸಬಹುದು‌. ಏಕೆಂದರೆ ಕನ್ನಡ ಮತ್ತು ಕರ್ನಾಟಕದ ಸಮಸ್ಯೆಗಳು ಅಷ್ಟೇ ಆಗಾಧ ಪ್ರಮಾಣದಲ್ಲಿ ಇದೆ.
  “ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು”.
  ಪ್ರೊ. ಅಜಿತ ಪ್ರಸಾದ್
  ನಿವೃತ್ತ ಕನ್ನಡ ಪ್ರಾಧ್ಯಾಪಕರು
Previous articleಲಾಕ್‌ ಡೌನ್ ಘೋಷಣೆ ಕೇಳಿ ಪೇರಿಕಿತ್ತ ಜನರಿಂದ ಉಂಟಾಯಿತು 700 ಕಿ. ಮೀ. ಟ್ರಾಫಿಕ್‌ ಜಾಮ್‌
Next articleಮಂಗಳೂರು ವಿಮಾನ ನಿಲ್ದಾಣ ನಿರ್ವಹಣೆ ಆದಾನಿ ಗ್ರೂಪ್‌ಗೆ

LEAVE A REPLY

Please enter your comment!
Please enter your name here