
ಶ್ರೀನಗರ,ಅ.30 : ಜಮ್ಮು-ಕಾಶ್ಮೀರದ ಕುಲ್ಗಾಂವ್ ಜಿಲ್ಲೆಯಲ್ಲಿ ಭಯೋತ್ಪಾದಕರು ಮೂವರು ಬಿಜೆಪಿ ಕಾರ್ಯಕರ್ತರನ್ನು ಗುಂಡಿಕ್ಕಿ ಸಾಯಿಸಿದ್ದಾರೆ. ಇದು ಲಷ್ಕರ್ ಎ ತೊಯ್ಬಾ ಸಂಘಟನೆಗೆ ಸೇರಿದ ದ ರೆಸಿಸ್ಟೆಂಟ್ ಫ್ರಂಟ್(ಟಿಆರ್ ಎಫ್) ಎಂಬ ಸಂಘಟನೆಯ ಕೃತ್ಯ ಎನ್ನಲಾಗಿದೆ. ಸ್ವತಃ ಟಿಆರ್ಎಫ್ ತಾನೇ ಈ ಕೃತ್ಯ ಎಸಗಿರುವುದಾಗಿ ಹೇಳಿಕೊಂಡಿದೆ.
ನಿನ್ನೆ ಸಾಯಂಕಾಲ ವೈಕೆ ಪೊರಾ ಪ್ರದೇಶದಲ್ಲಿ ಉಗ್ರರು ಫಿದಾ ಹುಸೇನ್, ಉಮರ್ ಹಜಮ್ ಮತ್ತು ಉಮರ್ ರಶೀದ್ ಬೈಗ್ ಎಂಬ ಬಿಜೆಪಿ ಕಾರ್ಯಕರ್ತರನ್ನು ಗುಂಡಿಕ್ಕಿ ಸಾಯಿಸಿದ್ದಾರೆ.
ಈ ಘಟನೆಯ ಬಳಿಕ ಟಿಆರ್ ಎಫ್ ಸೋಷಿಯಲ್ ಮೀಡಿಯಾದಲ್ಲಿ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಪೋಸ್ಟ್ ಮಾಡಿದ್ದು, ಸ್ಮಶಾನಗಳು ಹೆಚ್ಚು ಬುಕ್ಕಿಂಗ್ ಆಗಿವೆ ಎಂದು ಬರೆದುಕೊಂಡಿದೆ.
ಕಳೆದ ಜೂನ್ ತಿಂಗಳಿನಿಂದ ಉಗ್ರರು ಕಣಿವೆ ಪ್ರದೇಶದಲ್ಲಿ ಕಾರ್ಯಕರ್ತರು ಮತ್ತು ನಾಯಕರ ಮೇಲೆ ಗುರಿಯಾಗಿಟ್ಟುಕೊಂಡು ದಾಳಿ ಮಾಡುತ್ತಲೇ ಬಂದಿದ್ದಾರೆ. ಇದುವರೆಗೆ 8 ಮಂದಿ ಮೃತಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ , ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಸೇರಿ ಹಲವು ನಾಯಕರು ಈ ಹತ್ಯೆಯನ್ನು ಖಂಡಿಸಿದ್ದಾರೆ.