ಕಾರ್ಕಳ, ಅ. 28: ಅ.31ರಂದು ಗಗನ ಅಪರೂಪದ ವಿದ್ಯಮಾನವೊಂದಕ್ಕೆ ಸಾಕ್ಷಿಯಾಗಲಿದೆ. ಎರಡು ವರ್ಷದ ಬಳಿಕ ಆಕಾಶಲ್ಲಿ “ಬ್ಲೂ ಮೂನ್” ದರ್ಶನವಾಗಲಿದೆ. 2018ರಲ್ಲಿ ಜ.31 ಮತ್ತು ಮಾ.31 ರಂದು ಬ್ಲೂ ಮೂನ್ ಕಾಣಿಸಿತ್ತು. ಆ ಬಳಿಕ ಕಾಣಿಸುತ್ತಿರುವುದು ಇದೇ ಮೊದಲು.
ಇಂಗ್ಲೀಷಿನಲ್ಲಿ ಬಹಳ ಅಪರೂಪಕ್ಕೆ ಸಂಭವಿಸುವುದಕ್ಕೆ once in a blue moon ಎಂಬ ನುಡಿಗಟ್ಟನ್ನು ಬಳಸುತ್ತಾರೆ. ಯಾವ ವರ್ಷ ಬ್ಲೂ ಮೂನ್ ಇರುತ್ತದೋ ಆ ವರ್ಷ 13 ಹುಣ್ಣಿಮೆ ಇರುವುದು ವಾಡಿಕೆ. ಸಾಮಾನ್ಯವಾಗಿ ತಿಂಗಳಿಗೊಂದೇ ಹುಣ್ಣಿಮೆ ಇರುತ್ತದೆ. ಆದರೆ ಬ್ಲೂ ಮೂನ್ ಇರುವ ವರ್ಷ ಒಂದು ಹುಣ್ಣಿಮೆ ಹೆಚ್ಚುವರಿಯಾಗಿ ಬರುತ್ತದೆ.
ಈ ವರ್ಷ ಬ್ಲೂ ಮೂನ್ ಕಾಣಿಸಿಕೊಳ್ಳುವ ದಿನಕ್ಕೂ ಕೆಲವು ವಿಶೇಷತೆಗಳಿವೆ. ವಿದೇಶಗಳ ಹಾಲೊವಿನ್ ಹಬ್ಬ ಅ.31ರಂದು ಬರುತ್ತದೆ. ಅದೇ ದಿನ ಭಾರತೀಯರ ಖೋಜಾಗಿರಿ ಹುಣ್ಣಿಮೆಯೂ ಹೌದು. ಇದನ್ನು ಶರದ್ ಪೂರ್ಣಿಮಾ ಅಂತಲೂ ಕರೆಯುತ್ತಾರೆ. ಮಳೆಗಾಲ ಮುಗಿದು ಚಳಿಗಾಲ ಶುರುವಾಗುವುದಕ್ಕಿಂತ ಮೊದಲು ಬರುವ ಹುಣ್ಣಿಮೆಯನ್ನು ಖೋಜಾಗಿರಿ ಹುಣ್ಣಿಮೆ ಎಂದು ಆಚರಿಸುವುದು ವಾಡಿಕೆ.
ಬ್ಲೂಮೂನ್ ಹೇಗೆ ಉಂಟಾಗುತ್ತದೆ?
ಒಂದು ವರ್ಷದಲ್ಲಿ 12.3681 ತಿಂಗಳು ಇರುತ್ತದೆ. ಅಂದರೆ ಸಾಮಾನ್ಯವಾಗಿ ಒಂದು ವರ್ಷಕ್ಕೆ 12 ಹುಣ್ಣಿಮೆ ಬರುತ್ತದೆ. ವರ್ಷದ ಹೆಚ್ಚುವರಿಯಾದ 0.3681 ತಿಂಗಳು ಎಂದರೆ 10 ದಿನ 20.9ತಾಸು ಉಳಿಯುತ್ತದೆ. ಈ ಹೆಚ್ಚುವರಿ ದಿನಗಳು ಒಟ್ಟುಗೂಡಿ 30 ತಿಂಗಳು ಕಳೆದ ಬಳಿಕ ಒಂದು ಹೆಚ್ಚುವರಿ ಹುಣ್ಣಿಮೆ ಬರುತ್ತದೆ. ಈ ತಿಂಗಳಲ್ಲಿ ಬರುವ ಹೆಚ್ಚುವರಿ ಹುಣ್ಣಿಮೆಯನ್ನು ಬ್ಲೂಮೂನ್ ಎಂದು ಕರೆಯುತ್ತಾರೆ.
ಈ ತಿಂಗಳಲ್ಲಿ ಅ.2ರಂದು ಹುಣ್ಣಿಮೆ ಬಂದಿತು. ಇದೀಗ a.31ರಂದು ಮತ್ತೊಂದು ಹುಣ್ಣಿಮೆ ಬರಲಿದೆ. ಈ ಎರಡನೇ ಹುಣ್ಣಿಮೆಯನ್ನು ನೀಲ ಚಂದಿರ ಎನ್ನುತ್ತಾರೆ. ಮುಂದಿನ ಬ್ಲೂ ಮೂನ್ ಕಾಣಿಸುವುದು 2023, ಆ.31ರಂದು.
ಅ.31ರಂದು ಬ್ಲೂಮೂನ್ ಚಮತ್ಕಾರ










































































