ಹೆಬ್ರಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಭೆ- ಬಿಜೆಪಿ ಬಡವರ ಪಕ್ಷ ಅಲ್ಲ : ಪಿ.ವಿ.ಮೋಹನ್

ಹೆಬ್ರಿ,ಅ.22 : ಬಿಜೆಪಿ ಬಡವರ ಪಕ್ಷ ಅಲ್ಲ,  ಬಿಜೆಪಿ ಬಡವರಿಗಾಗಿ ಏನೂ ಮಾಡಿಲ್ಲ, ಇನ್ನೂ ಏನೂ ಮಾಡುವುದು ಕೂಡ ಇಲ್ಲ. ಅದು ಸ್ಥಿತಿವಂತರ, ಮೇಲ್ವರ್ಗದವರ ಪಕ್ಷ. ಬಡವರನ್ನು ಕೆರಳಿಸಿ ಕೆಲಸ ಮಾಡಿಸಿಕೊಂಡು ಅರ್ಧದಲ್ಲಿ ಕೈಬಿಡುತ್ತದೆ ಎಂದು ಎಐಸಿಸಿ ಸದಸ್ಯ, ಕಾಂಗ್ರೆಸ್‌ ತರಬೇತಿ ಅಕಾಡೆಮಿಯ ಸಂಚಾಲಕ ಪಿ.ವಿ.ಮೋಹನ್‌ ಹೇಳಿದರು.

ಅವರು ಬುಧವಾರ ಹೆಬ್ರಿ ಬ್ರಹ್ಮಶ್ರೀ ನಾರಾಯಣಗುರು ಸಮಾಜಸೇವಾ ಸಂಘದ ಸಭಾಂಗಣದಲ್ಲಿ ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ನಡೆದ ಕಾಂಗ್ರೆಸ್‌ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಯಕರ್ತರು ಮತ್ತು ನಾಯಕರು ಒಂದಾಗಿ ಕಾಂಗ್ರೆಸ್‌ ಪಕ್ಷವನ್ನು ಮತ್ತೆ  ಹಳ್ಳಿಯಿಂದಲೇ ಸಂಘಟಿಸಿ ಬಲಪಡಿಸಬೇಕು. ನಿಮ್ಮ ಕಾಂಗ್ರೆಸ್‌ಗಾಗಿ ನೀವೆ ಬದಲಾವಣೆಯ ಪಾಲುದಾರರಾಗಿ ಕಾರ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ವೈಭವವನ್ನು ಮತ್ತೆ ಸ್ಥಾಪಿಸಿ ಎಂದು ಪಿ.ವಿ.ಮೋಹನ್‌ ಕರೆ ನೀಡಿದರು.

ಕಾಂಗ್ರೆಸ್‌ ಜನರ ಬದುಕಿನ ಒಂದು ಅಂಗ, ಅಂದಿನಿಂದ ಇಂದಿನ ತನಕ ಕಾಂಗ್ರೆಸ್‌ ಜನರಿಗೆ ಬದುಕು ನೀಡಿದೆ. ಅಂತಹ ಕಾಂಗ್ರೆಸ್‌ ಪಕ್ಷಕ್ಕೆ ಸಾಮೂಹಿಕ ನಾಯಕತ್ವದಿಂದ ಈಗ ಬಲ ತುಂಬಬೇಕಿದೆ. ಡಿಕೆಶಿ ಸಾರಥ್ಯದಿಂದ ಪಕ್ಷಕ್ಕೆ ಹೊಸ ಚೈತನ್ಯ ಬಂದಿದೆ. ನಮ್ಮೆಲ್ಲರ ಶಕ್ತಿಯನ್ನು ಪಕ್ಷಕ್ಕಾಗಿ ತ್ಯಾಗ ಮಾಡಬೇಕಿದೆ. ಆಗ ಮಾತ್ರ ಪಕ್ಷ  ಉನ್ನತಮಟ್ಟದಲ್ಲಿ ಬೆಳೆಯಲಿದೆ. ಮುಂದೆ ಕಾಂಗ್ರೆಸ್‌ನಿಂದ ಕ್ರಾಂತಿ ನಡೆಯಲಿದೆ ಎಂದು ಪಿ.ವಿ.ಮೋಹನ್‌ ಕಾರ್ಯಕರ್ತರಿಗೆ ಭರವಸೆ ನೀಡಿದರು.

ಕೆಪಿಸಿಸಿ ವೀಕ್ಷಕ  ಖಾದರ್‌ ಮೊಯಿದ್ದಿನ್ ಶಾಹೀಕ್ ಮಾತನಾಡಿ ಕಾರ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷ ಪ್ರಬಲವಾಗಿ ಶ್ರೇಷ್ಠರಾದ ಉತ್ಸಾಹಿ ಕಾರ್ಯಕರ್ತರ ಮೂಲಕ  ಇನ್ನಷ್ಟು ಗಟ್ಟಿಯಾಗಿ ಹಿಂದಿನ ವೈಭವ ಮತ್ತೇ ಮರುಕಳಿಸಲಿದೆ ಎಂದು ಹೇಳಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ ಕುಮಾರ್‌ ಕೊಡವೂರು ಮಾತನಾಡಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್‌ ಕಟ್ಟೋಣ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಪಕ್ಷ ಸಂಘಟನೆಗೆ ಎಲ್ಲರೂ ಒಮ್ಮತದ ಮೂಲಕ ಕೈಜೋಡಿಸಿ ಎಂದು ಮನವಿ ಮಾಡಿದರು.  ಬಿಜೆಪಿಗೆ ಜನರ ಕಾಳಜಿ ಇಲ್ಲ, ಕೊರೊನಾ ಸಂಕಷ್ಟದಲ್ಲೂ ಜನರ ಪರವಾಗಿ ನಿಂತಿಲ್ಲ, ಅವರಿಗೆ ಹಣ ಲೂಟಿ ಮಾಡುವುದು ಒಂದೇ ಕೆಲಸ, ಜನತೆಗೆ ಕನಿಷ್ಠ 5 ರೂಪಾಯಿಯ ಮಾಸ್ಕ್‌ ನೀಡುವ ಯೋಗ್ಯತೆ ಕೂಡ ಇಲ್ಲ ಎಂದರು.

ಕೆಪಿಸಿಸಿಯ ವೀಕ್ಷಕ  ಗದಗದ ಮಹಾಬಲೇಶ್ವರ್‌, ಭಟ್ಕಳದ ಉಸ್ನಾ ಜಾವೇದ್‌, ಬೆಂಗಳೂರಿನ ಚಂದ್ರಶೇಖರ್‌, ಶಾಹಿಕ್‌ ಖಾದರ್‌ ಅವರನ್ನು ಗೌರವಿಸಲಾಯಿತು.

ಉಡುಪಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವೈ.ಸುಕುಮಾರ್‌, ರಾಘವ ದೇವಾಡಿಗ, ಯುವ ನಾಯಕ ಎಚ್.ಪ್ರದೀಪ್‌ ಭಂಡಾರಿ, ಕಬ್ಬಿನಾಲೆ ಚಂದ್ರಶೇಖರ ಬಾಯರಿ, ವಿವಿಧ ಘಟಕಗಳ ಪ್ರಮುಖರು, ಪದಾಧಿಕಾರಿಗಳು ಭಾಗವಹಿಸಿದ್ದರು. ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಎಚ್.ಜನಾರ್ಧನ್‌ ಸ್ವಾಗತಿಸಿ ಚೈತ್ರ ಕಬ್ಬಿನಾಲೆ ನಿರೂಪಿಸಿ ವಂದಿಸಿದರು.









































































































error: Content is protected !!
Scroll to Top