ಬೆಂಗಳೂರು,ಅ.16 : ಡ್ರಗ್ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ಬಾಲಿವುಡ್ ನಟ ವಿವೇಕ್ ಓಬೇರಾಯ್ ಮನೆಗೆ ದಾಳಿ ಮಾಡಿ ಶೋಧಿಸಿದ್ದ ಸಿಸಿಬಿ ಪೊಲೀಸರು ಇಂದು ವಿವೇಕ್ ಓಬೇರಾಯ್ ಪತ್ನಿ ಪ್ರಿಯಾಂಕಾ ಓಬೇರಾಯ್ ಗೆ ನೊಟೀಸ್ ನೀಡಿದ್ದಾರೆ. ಪ್ರಿಯಾಂಕ ಓಬೇರಾಯ್ ತಲೆಮರೆಸಿಕೊಂಡಿರುವ ಆರೋಪಿ ಆದಿತ್ಯ ಆಳ್ವ ಅವರ ಸಹೋದರಿ. .
ಡ್ರಗ್ ಕೇಸಿನ ವಿಚಾರಣೆ ಆರಂಭವಾದಾಗಿನಿಂದ ಮಾಜಿ ಸಚಿವ ಜೀವರಾಜ್ ಆಳ್ವ ಪುತ್ರ ಆದಿತ್ಯ ಆಳ್ವ ಹೆಸರು ಕೇಳಿಬರುತ್ತಿದ್ದು, ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ. ಆದಿತ್ಯ ಆಳ್ವ ವಿರುದ್ಧ ಈಗಾಗಲೇ ಲುಕ್ ಔಟ್ ನೊಟೀಸ್ ಜಾರಿ ಮಾಡಲಾಗಿದ್ದು ಪೊಲೀಸರು ಆತನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.ಮುಂಬಯಿಯಲ್ಲಿರುವ ವಿವೇಕ್ ಒಬೇರಾಯ್ ಮನೆಯಲ್ಲಿ ಅವರು ಅಡಗಿರಬಹುದು ಎಂಬ ಶಂಕೆಯಲ್ಲಿ ನಿನ್ನೆ ದಾಳಿ ನಡೆಸಲಾಗಿತ್ತು.
ಕಳೆದ ತಿಂಗಳು ನಗರದ ಹೆಬ್ಬಾಳ ಬಳಿ ಇರುವ ಆದಿತ್ಯ ಆಳ್ವಗೆ ಸೇರಿದ ರೆಸಾರ್ಟ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಹಲವು ಮಹತ್ವದ ಅಂಶಗಳನ್ನು, ದಾಖಲೆಗಳನ್ನು ಕಲೆ ಹಾಕಿದ್ದರು.

ಇದೀಗ ಸೋದರ ಆದಿತ್ಯ ಆಳ್ವಗೆ ರಕ್ಷಣೆ ನೀಡಿರುವ ಶಂಕೆ ಮೇಲೆ ಪ್ರಿಯಾಂಕಾಗೆ ನೊಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.






































































