ದಿಲ್ಲಿ, ಸೆ. 25: ಬಿಹಾರ ವಿಧಾನಸಭೆಗೆ ಅಕ್ಬೋಬರ್ 28, ನವೆಂಬರ್ 3 ಮತ್ತು 7ರಂದು ಹೀಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನ.10ರಂದು ಫಲಿತಾಂಸ ಪ್ರಕಟವಾಗಲಿದೆ.
ಕೇಂದ್ರ ಚುನಾವಣಾ ಆಯೋಗದ ಅಧ್ಯಕ್ಷ ಸುನಿಲ್ ಅರೋರಾ ಸುದ್ದಿಗೋಷ್ಠಿಯಲ್ಲಿ ಬಿಹಾರ ಚುನಾವಣೆಯ ದಿನಾಂಕ ಘೋಷಿಸಿದರು. ಬಿಹಾರ ವಿಧಾನಸಭೆ ಚುನಾವಣೆ ಒಟ್ಟು ಮೂರು ಹಂತಗಳಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಅಕ್ಟೋಬರ್ 28ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು, 71 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಅಂತೆಯೇ ನವೆಂಬರ್ 3ರಂದು 2ನೇ ಹಂತದ ಚುನಾವಣೆ ನಡೆಯಲಿದ್ದು, 94 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಸಲಾಗುತ್ತದೆ. ಅಂತಿಮ ಮತ್ತು 3ನೇ ಹಂತದ ಚುನಾವಣೆ ನವೆಂಬರ್ 7ರಂದು ನಡೆಯಲಿದ್ದು, ಒಟ್ಟು 78 ವಿಧಾನಸಭಾ ಕ್ಷೇತ್ರಗಳಲ್ಲಿ ಅಂದು ಮತದಾನ ನಡೆಯಲಿದೆ.
ನವೆಂಬರ್ 10ರಂದು ಮತಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಅಂದೇ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ ಎಂದು ಸುನಿಲ್ ಅರೋರಾ ಅವರು ಹೇಳಿದರು.

ಕೊರೊನಾ ಸಾಂಕ್ರಾಮಿಕ ಹಿನ್ನಲೆಯಲ್ಲಿ ಈ ಬಾರಿಯ ಮತದಾನದ ಅವಧಿಯನ್ನು ಒಂದು ಗಂಟೆ ಹೆಚ್ಚಳ ಮಾಡಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಮತದಾನ ನಡೆಯಲಿದೆ. ಈ ಹಿಂದೆ 5 ಗಂಟೆಯವರೆಗೂ ಮಾತ್ರ ಮತದಾನ ನಡೆಯುತ್ತಿತ್ತು. ಈ ನಿಯಮ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅನ್ವಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.






































































