ಕಾರ್ಕಳ, ಸೆ. 19 : ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗುವುದು ಬಹುತೇಕ ಖಚಿತವಾಗಿದ್ದು ಸಚಿವರಾಗುವ ಸಂಭಾವ್ಯರ ಪಟ್ಟಿಯಲ್ಲಿ ಕಾರ್ಕಳದ ಶಾಸಕ ವಿ. ಸುನಿಲ್ ಕುಮಾರ್ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಸುನೀಲ್ ಕುಮಾರ್ ಸಹಿತ ಐವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಅಕ್ಟೋಬರ್ ಮೊದಲ ವಾರದಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ಕಾರ್ಕಳ ಶಾಸಕ ಸುನಿಲ್ ಕುಮಾರ್, ಎಂ.ಟಿ. ನಾಗರಾಜ್, ಆರ್. ಶಂಕರ್, ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಹಾಗೂ ಅರವಿಂದ ಲಿಂಬಾವಳಿ ಸಚಿವ ಸಂಪುಟ ಸೇರಲಿದ್ದಾರೆ ಎನ್ನಲಾಗುತ್ತಿದೆ.
ಈ ಪೈಕಿ ಶಾಸಕ ಸುನಿಲ್ ಕುಮಾರ್ ಅವರಿಗೆ ಸಚಿವ ಸ್ಥಾನ ಸಿಗಬೇಕೆಂಬುದು ಕಾರ್ಕಳ ಕ್ಷೇತ್ರದ ಜನತೆಯ ಬೇಡಿಕೆಯೂ ಹೌದು.

ಕಾರ್ಕಳ ಕ್ಷೇತ್ರಕ್ಕೆ ರಾಜ್ಯ ಸಚಿವ ಸಂಪುಟದಲ್ಲಿ ಯಾವುದೇ ಪ್ರಾತಿನಿಧ್ಯ ಸಿಗದೆ ಬಹಳ ವರ್ಷವಾಯಿತು. ವೀರಪ್ಪ ಮೊಯ್ಲಿಯವರ ಬಳಿಕ ಯಾರೂ ಕಾರ್ಕಳದಿಂದ ಸಚಿವರಾಗಿಲ್ಲ. ಇದರಿಂದ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೂ ಹಿನ್ನಡೆಯಾಗಿದೆ ಎನ್ನುವುದು ಜನರ ಅಭಿಪ್ರಾಯ.
ಸುನಿಲ್ ಕುಮಾರ್ ಮೂರನೇ ಬಾರಿಗೆ ಕಾರ್ಕಳದಿಂದ ಶಾಸಕರಾಗಿದ್ದು, ಸಚಿವರಾಗಲು ಎಲ್ಲ ಅರ್ಹತೆಯನ್ನು ಹೊಂದಿದ್ದಾರೆ. ಅವರಿಗೆ ಈ ಸಲ ಸಚಿವ ಪದವಿ ಸಿಗಲೇಬೇಕು ಎನ್ನುವುದು ಈ ಭಾಗದ ಬಿಜೆಪಿ ಕಾರ್ಯಕರ್ತರ ಹಕ್ಕೊತ್ತಾಯವೂ ಹೌದು.
ಕರಾವಳಿಯ ಎರಡು ಜಿಲ್ಲೆಗಳಲ್ಲಿ ಒಂದು ವಿಧಾನಸಭೆ ಕ್ಷೇತ್ರವನ್ನು ಹೊರತುಪಡಿಸಿದರೆ ಉಳಿದ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರೇ ಇದ್ದಾರೆ. ಹೀಗಿರುವಾಗ ಕರಾವಳಿಗೆ ಬರೀ ಒಂದು ಸಚಿವ ಸ್ಥಾನ ಸಿಕ್ಕಿರುವುದರಿಂದ ಪಕ್ಷದ ಕಾರ್ಯಕರ್ತರಿಗೆ ಬಹಳ ಬೇಸರವಾಗಿದೆ. ಹಿಂದು ನಾಯಕನಾಗಿ ಪಕ್ಷ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಸುನಿಲ್ ಕುಮಾರ್ ಅವರಿಗೆ ಈ ಸಲ ಸಚಿವ ಸ್ಥಾನ ಸಿಗಬೇಕೆಂದು ಆಶಿಸುತ್ತೇವೆ.
ಮಹಾವೀರ ಹೆಗ್ಡೆ
ಬಿಜೆಪಿ ಕ್ಷೇತ್ರಾಧ್ಯಕ್ಷರು, ಕಾರ್ಕಳ
*
ನಮ್ಮ ಅನಿಸಿಕೆ
ಮೂರನೇ ಬಾರಿಗೆ ಶಾಸಕರು, 42,000ಕ್ಕಿಂತ ಅಧಿಕ ಅಂತರದಲ್ಲಿ ಗೆಲುವು, ಭಾರೀ ವರ್ಚಸ್ಸು ಇರುವ ನಾಯಕ, ಪ್ರಭಾವಶಾಲಿ ಭಾಷಣಕಾರ, ಕಾರ್ಕಳಕ್ಕೆ ದಾಖಲೆ ಸಂಖ್ಯೆಯ ಅನುದಾನಗಳನ್ನು ತರಿಸಿದ ದಾಖಲೆ…ಇನ್ನೇನು ಬೇಕು ಮಂತ್ರಿಗಿರಿ ಪಡೆಯಲು? ಆದರೆ ಸುನಿಲ್ ಕುಮಾರ್ ಸಚಿವ ಸ್ಥಾನದ ವಿಷಯದಲ್ಲಿ ಕಾರ್ಕಳದ ಜನತೆಗೆ ನಿರಾಸೆಯೇ ನಿರಾಸೆ. ಒಂದೆಡೆ ಅತೃಪ್ತ ಶಾಸಕರನ್ನು ಖುಷಿ ಪಡಿಸಬೇಕಾದ ಅನಿವಾರ್ಯತೆ, ಇನ್ನೊಂದೆಡೆ ಬೇರೆ ಪಕ್ಷದಿಂದ ಬಂದವರಿಗೆ ಕೊಟ್ಟ ಭರವಸೆ…ಇದೆಲ್ಲದರ ನಡುವೆ ಮುಖ್ಯಮಂತ್ರಿಗಳು ಕಾರ್ಕಳಕ್ಕೆ ಗಮನ ಹರಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನಕ್ಕೆ ಅತ್ಯಂತ ಅರ್ಹರಾಗಿ ಇರುವ ಸುನಿಲ್ ಕುಮಾರ್ ಅವರಿಗೆ ಈ ಬಾರಿ ಮಂತ್ರಿ ಪದವಿ ದೊರೆಯಲಿ ಎನ್ನುವುದು ಕಾರ್ಕಳದ ಬಿಜೆಪಿ ಕಾರ್ಯಕರ್ತರ ಬಹು ಕಾಲದ ಆಸೆ. ಉಡುಪಿಯಲ್ಲಿ ಐದಕ್ಕೆ ಐದು ಸ್ಥಾನವನ್ನು ಬಿಜೆಪಿಗೆ ಗೆಲ್ಲಿಸಿ ಕೊಟ್ಟ ಜನತೆಗೆ ಹಾವೇರಿಯಿಂದ ಬಸವರಾಜ ಬೊಮ್ಮಾಯಿ ಅವರನ್ನು ಉಸ್ತುವಾರಿ ಮಂತ್ರಿ ಮಾಡಿ ಅಪಮಾನ ಮಾಡಲಾಗುತ್ತಿದೆ ಎನ್ನುವುದು ಜಿಲ್ಲೆಯ ಜನತೆಯ ಅಳಲು. ಈ ಬಾರಿ ಅಲ್ಲದಿದ್ದರೆ ಇನ್ಯಾವಾಗ ಅಂತ ಜನ ಅಧಿಕಾರ ವಾಣಿಯಿಂದ ಕೇಳುತ್ತಿದ್ದಾರೆ. RSS ಹಿನ್ನೆಲೆ, ಭಜರಂಗದಳದ ರಾಜ್ಯಮಟ್ಟದ ನಾಯಕತ್ವ ಎಲ್ಲವನ್ನೂ ಹೊಂದಿರುವ ಸುನಿಲ್ ಕುಮಾರ್ ಈ ಬಾರಿಯಾದರೂ ಮಂತ್ರಿ ಆಗಲಿ ಎನ್ನುವುದು ಕಾರ್ಕಳದ ಜನತೆಯ ಹಕ್ಕೊತ್ತಾಯ. ಅದರಲ್ಲಿ ನ್ಯಾಯ ಇದೆ.







































