ಎಚ್ಚರಿಕೆ! ವೀಡಿಯೊ ಕಾಲ್‌ ಮಾಡಿ ಫೋಟೊ ತೆಗೆದು ಬೆದರಿಸಿ ಹಣ ಕೀಳುತ್ತಾರೆ

ಕಾರ್ಕಳ, ಸೆ. 19 :  ವಾಟ್ಸಪ್‌ ವೀಡಿಯೊ ಕಾಲ್‌ ಮಾಡಿ, ಫೋಟೊ ತೆಗೆದು ಬಳಿಕ ಅದನ್ನು ಬಳಸಿ  ಅಶ್ಲೀಲ ವೀಡಿಯೊ ತಯಾರಿಸಿ ಅದನ್ನು ಯೂಟ್ಯೂಬ್‌ಗೆ ಹಾಕುತ್ತೇವೆ, ಫೇಸ್ ಬುಕ್‌ಗೆ  ಹಾಕುತ್ತೇವೆ ಎಂದು ಬೆದರಿಸಿ ಹಣಕ್ಕಾಗಿ ಪೀಡಿಸುವ ಜಾಲವೊಂದು ಸಕ್ರಿಯವಾಗಿದ್ದು, ಇಂಥ ಒಂದು ಅನುಭವ ಸಾಣೂರಿನ ಓರ್ವ ಯುವಕನಿಗೆ ಆಗಿದೆ.

ಸಾಣೂರಿನ ಯುವಕರೊಬ್ಬರಿಗೆ  ಶುಕ್ರವಾರ ರಾತ್ರಿ ಸುಮಾರು 9 ಗಂಟೆಗೆ 98648 33514 ಮತ್ತು 97564 74319 ನಂಬರ್‌ಗಳಿಂದ ಇದೇ ಮಾದರಿಯ ಕರೆಯೊಂದು ಬಂದಿದೆ. ಕರೆ ಬಂದ ಅರಂಭದ 5 ಸೆಕೆಂಡಿನಷ್ಟು ಹೊತ್ತು ಯಾರೂ ಮಾತನಾಡುವುದಿಲ್ಲ. ಸುಮಾರು 10 ಸೆಕೆಂಡಿನ ಬಳಿಕ ಹೆಣ್ಣಿನ ಬೆತ್ತಲೆ ಚಿತ್ರವೊಂದು ಸ್ಕ್ರೀನ್‌ ಮೇಲೆ ಕಾಣಿಸಿಕೊಳ್ಳುತ್ತದೆ. ಬಳಿಕ ಬೆಳಕಿರುವಲ್ಲಿಗೆ ಬರಲು ಮೆಸೇಜ್‌ ಮಾಡಿ ಸೂಚಿಸುತ್ತಾರೆ. ಬೆಳಕಿನ ಬಳಿ ಬಂದಾಗ ನಿಮ್ಮ   ಫೋಟೊ ತೆಗೆಯುತ್ತಾರೆ. ಅನಂತರ ನಿಮ್ಮ ಇನ್‌ಸ್ಟಾಗ್ರಾಂ, ಫೇಸ್ಬುಕ್‌,  ಟ್ವಿಟ್ಟರ್‌ ಮತ್ತಿತರ ಸಾಮಾಜಿಕ ಮಾಧ್ಯಗಳಲ್ಲಿರುವ ಫೋಟೊಗಳನ್ನು ಡೌನ್‌ ಲೋಡ್‌ ಮಾಡಿಕೊಂಡು  ಅಸಭ್ಯವಾದ ವೀಡಿಯೊ ತಯಾರಿಸುತ್ತಾರೆ.  

ಅನಂತರ ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕುತ್ತೇವೆ ಎಂದು ಹಣಕ್ಕಾಗಿ ಬೆದರಿಸಲು ತೊಡಗುತ್ತಾರೆ.  ಅನಂತರ ಪದೇ ಪದೇ ಮೆಸೇಜ್‌ ಮಾಡಿ  ಈಗ ಶೇ. 25  ಅಪ್‌ ಲೋಡ್‌ ಆಯಿತು, ಈಗ ಶೇ.  70  ಅಪ್‌ ಲೋಡ್‌ ಆಯಿತು ಎಂದು ಮಾನಸಿಕ ಒತ್ತಡ ಹಾಕಲಾರಂಭಿಸುತ್ತಾರೆ.

ಸಾಣೂರಿನ ಯುವಕನಿಗೆ ಬಂದ ಮೆಸೇಜ್‌ನ ಸ್ಕ್ರೀನ್‌ ಶಾಟ್‌

 ಸಾಣೂರಿನ ಯುವಕನ ಬಳಿ ಮೊದಲು 5,000 ರೂ . ಕೇಳಿದರು. ಅಷ್ಟು ಹಣ ನನ್ನ ಬಳಿ ಇಲ್ಲ ಎಂದಾಗ 2,000 ರೂ. ಕೊಡಿ ಎಂದರು. ಹಣ ರವಾನಿಸಲು ಅವರ ಗೂಗಲ್‌ ಪೇ , ಫೋನ್‌‌ಪೇ ಮತ್ತು ಪೇಟಿಎಂ ನಂಬರ್‌ ಕೊಡುತ್ತಾರೆ.ಸಾಣೂರಿನ ಯುವಕ ಅವರ ಕಿರುಕುಳ ತಾಳಲಾರದೆ ಕೊನೆಗೆ 200 ರೂ. ಕೊಟ್ಟು ಈ ರಗಳೆಯಿಂದ ಪಾರಾದರು. ಅವರಿಗೆ 97564 74319  ಈ ನಂಬರ್‌ ಗೆ ಫೋನ್‌ ಪೇಟಿಎಂ ಮಾಡಲು ಸೂಚಿಸಿದ್ದರು. ಈ ಕುರಿತು ಫೋನ್‌ ಮೂಲಕ ಕಾರ್ಕಳ ನಗರ ಪೊಲೀಸರಿಗೆ ಮಾಹಿತಿ ನೀಡಿದಾಗ ಅವರು ವೀಡಿಯೊ ಕಾಲ್‌ ಬಂದ ನಂಬರ್‌ ಕೊಡಿ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಈ ಮಾದರಿಯಾಗಿ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ವಂಚಿಸುವ ಪ್ರಕರಣಗಳು ಈಗೀಗ ಹೆಚ್ಚಾಗುತ್ತಿದೆ.









































































































error: Content is protected !!
Scroll to Top