ಐಪಿಎಲ್‌ಗೆ ಶುರುವಾಗಿದೆ ಕ್ಷಣಗಣನೆ

ಅಬುಧಾಬಿ, ಸೆ. 19 :ಕ್ರಿಕೆಟ್‌ ಪ್ರೇಮಿಗಳು ಬಹುಕಾಲದಿಂದ ಕಾತರದಿಂದ ಕಾಯುತ್ತಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಕೂಟ ಇನ್ನು ಕೆಲವೇ ತಾಸುಗಳಲ್ಲಿ ಪ್ರಾರಂಭವಾಗಲಿದೆ.

ಕೊರೊನಾ ಸಾಂಕ್ರಾಮಿಕ ರೋಗದ ಕಾಟದ ಕಾರಣ ಭಾರತದಿಂದ ಅಬುಧಾಬಿಗೆ ಸ್ಥಳಾಂತರವಾಗಿರುವ ಐಪಿಎಲ್‌ ಕೂಟ ಮೂರು ಸ್ಟೇಡಿಯಂಗಳಲ್ಲಿ ನಡೆಯಲಿದೆ.

ಮತ್ತೊಮ್ಮೆ ಮಹೇಂದ್ರ ಸಿಂಗ ಧೋನಿ,  ವಿರಾಟ್ ಕೊಹ್ಲಿಯ ಆಕ್ರಮಣಶೀಲತೆ ಮತ್ತು  ರೋಹಿತ್‌ ಶರ್ಮ ನಾಯಕತ್ವ ಎಲ್ಲವೂ ಕೊರೊನಾ ಕಾಲದಲ್ಲಿ ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ಹುರುಪನ್ನು ತುಂಬಲಿದೆ. ಹಾಲಿ ಚಾಂಪಿಯನ್ ರೋಹಿತ್ ಅವರ ಮುಂಬೈ ಇಂಡಿಯನ್ಸ್ ಮೊದಲ ಪಂದ್ಯದಲ್ಲಿ ಧೋನಿಯ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.ಸರಿಯಾಗಿ 7.30ಕ್ಕೆ ಅನಾವರಣಗೊಳ್ಳಲಿದೆ ಈ ಪಂದ್ಯ.  

ಸಾಮಾಜಿಕ ಅಂತರ  ಮತ್ತು ಆರೋಗ್ಯ ಶಿಷ್ಟಾಚಾರಗಳು ದಿನಚರಿಯ ಭಾಗವಾಗಿರುವ ಪರಿಸ್ಥಿತಿಯಲ್ಲಿ ಮುಂದಿನ 53 ದಿನಗಳ ಐಪಿಎಲ್ ತಂಡಗಳು ಧೋನಿಯ ಚೆನ್ನೈ ಸೂಪರ್ ಕಿಂಗ್ಸ್, ಕೊಹ್ಲಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು, ರೋಹಿತ್ ಅವರ ಮುಂಬೈ ಇಂಡಿಯನ್ಸ್, ಕೆ.ಎಲ್.‌ ರಾಹುಲ್‌ ಅವರ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಶ್ರೇಯಸ್ ಅಯ್ಯರ್ ಅವರ ದೆಹಲಿ ಕ್ಯಾಪಿಟಲ್ ತಂಡಗಳು ಜನರಿಗೆ ರಸದೌತಣ ನೀಡಲಿವೆ.

ಐಪಿಎಲ್ ಅನ್ನು ಈ ಮೊದಲೂ ವಿದೇಶದಲ್ಲಿ ಆಯೋಜಿಸಲಾಗಿದೆ, ಆದರೆ ಈ ಬಾರಿ  ಕೊರೊನಾ ಭೀತಿಯಿಂದ ಸಂಪೂರ್ಣ ಸುರಕ್ಷಿತ ವಾತಾವರಣದಲ್ಲಿ ಪ್ರೇಕ್ಷಕರು ಇಲ್ಲದ ಖಾಲಿ ಗ್ಯಾಲರಿಯಲ್ಲಿ ನಡೆಯಲಿದೆ ಐಪಿಎಲ್‌ ಪಂದ್ಯಗಳು.

 ಕ್ರಿಸ್ ಗೇಲ್ ಮತ್ತು ಡೇವಿಡ್ ವಾರ್ನರ್ ಅವರ ಸಿಕ್ಸರ್‌ ಗಳಿಗೆ ಯಾವುದೇ ಚಪ್ಪಾಳೆ ಇರುವುದಿಲ್ಲ ಅಥವಾ ಸೂಪರ್ ಓವರ್‌ ನಲ್ಲಿ ಅಭಿಮಾನಿಗಳ ಕಾತರದ ಉದ್ಗಾರಗಳಿರುವುದಿಲ್ಲ.  ಚಿಯರ್‌ ಲೀಡರ್ಸ್‌ಗಳ ಮಾದಕ ನೃತ್ಯಗಳು ಇಲ್ಲದೆ ಇರುವುದು ರಸಿಕರಿಗೆ ಒಂದು ಕೊರತೆಯಾಗಿ ಕಾಡಬಹುದು.

ಆದರೆ ಕೊರೊನಾ ಹಾವಳಿಯ ನಡುವೆಯೇ ನಡೆಯುತ್ತಿರುವ ಐಪಿಎಲ್‌ ಕೂಟ ಕ್ರಿಕೆಟ್‌ ಮಾತ್ರವಲ್ಲದೆ ಇಡೀ ಕ್ರೀಡಾ ವಲಯದಲ್ಲೇ ಹೊಸದೊಂದು ಮನ್ವಂತರಕ್ಕೆ ನಾಂದಿ ಹಾಡುವ ಸಾಧ್ಯತೆಯಿದೆ. ಬೃಹತ್‌ ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ಈ ರೀತಿಯೂ ಆಯೋಜಿಸಬಹುದು ಎನ್ನುವುದನ್ನು ಈ ಕೂಟ ತೋರಿಸಿಕೊಡಲಿದೆ.















































































error: Content is protected !!
Scroll to Top