ಮುಂಬಯಿ, ಸೆ.17 : ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮೆನೇಜರ್ ದಿಶಾ ಸಾಲ್ಯಾನ್ ನಿಗೂಢ ಸಾವಿಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ನಿತೇಶ್ ರಾಣೆ ಮತ್ತೊಮ್ಮೆ ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ್ದಾರೆ.
ದಿಶಾ ಗೆಳೆಯ ರೋಹನ್ ರಾಯ್‌ಗೆ ಸಾವಿನ ಕಾರಣ ಗೊತ್ತು. ಆದರೆ ಯಾರೋ ಬಲಿಷ್ಠರು ಅವರ ಬಾಯಿ ಮುಚ್ಚಿಸಿದ್ದಾರೆ. ಚಿಕ್ಕ ಮಟ್ಟದ ನಟರಾಗಿದ್ದ ರೋಹನ್ ರಾಯ್ ಈಗ ಹೆದರಿ ಮುಂಬಯಿ ಬಿಟ್ಟು ಹೋಗಿದ್ದಾರೆ ಎಂದು ನಿತೇಶ್ ರಾಣೆ ಹೇಳಿದ್ದಾರೆ.
ರೋಹನ್ ಗೆ ಪ್ರಾಣ ಭಯವಿದೆ. ಜೂ.8ರಂದು ರಾತ್ರಿ ನಡೆದ ಪಾರ್ಟಿಯಲ್ಲಿ ಏನೆಲ್ಲ ನಡೆದಿದೆ ಎಂದು ರೋಹನ್ ಬಂದು ಸಿಬಿಐಗೆ ಹೇಳದಿದ್ದರೆ ನಾನೇ ಹೇಳುತ್ತೇನೆ. ದಿಶಾ ಸಾವಿನ ಕಾರಣ ರೋಹನ್ ಗೆ ತಿಳಿದಿದೆ ಎಂದು ನಿತೇಶ್ ಹೇಳಿದ್ದಾರೆ.

ಜೂ.8ರಂದು ನಡೆದ ಪಾರ್ಟಿಯಲ್ಲಿ ತನಗಾದ ಕೆಟ್ಟ ಅನುಭವದ ಬಗ್ಗೆ ಸುಶಾಂತ್ ಬಳಿ ದಿಶಾ ಹೇಳಿಕೊಂಡಿದ್ದರು. ಇದನ್ನು ಕೇಳಿ ಸುಶಾಂತ್‌ಗೆ ಆಘಾತವಾಗಿತ್ತು. ದಿಶಾ ಮತ್ತು ಸುಶಾಂತ್ ಸಾವಿಗೆ ಪರಸ್ಪರ ಸಂಬಂಧವಿದೆ. ಆದರೆ ಇಷ್ಟರ ತನಕ ತನಿಖೆ ಒಂದು ದಿಕ್ಕಿನಲ್ಲಿ ಮಾತ್ರ ಸಾಗುತ್ತಿದೆ ಎಂದು ನಿತೇಶ್ ಹೇಳಿದ್ದಾರೆ.
ದಿಶಾ ಜೂ.8ರಂದು ರಾತ್ರಿ ಮುಂಬಯಿಯ ಮಲಾಡ್ ನಲ್ಲಿರುವ ಕಟ್ಟಡದ 14ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ.
ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅವರನ್ನು ಸಾಯಿಸಲಾಗಿದೆ ಎಂದು ನಿತೇಶ್ ರಾಣೆ ಮೊದಲಿನಿಂದಲೂ ಹೇಳುತ್ತಿದ್ದಾರೆ. ರೋಹನ್‌ಗೂ ಇದೇ ಗತಿಯಾಗಬಹುದು. ಹೀಗಾಗಿ ಅವರಿಗೆ ರಕ್ಷಣೆ ನೀಡಬೇಕೆಂದು ನಿತೇಶ್ ರಾಣೆ ಒತ್ತಾಯಿಸಿದ್ದಾರೆ.
ಜೂ.8ರಂದು ನಡೆದ ಪಾರ್ಟಿಯಲ್ಲಿ ಮಹಾರಾಷ್ಟ್ರದ ಆಡಳಿತರೂಢ ಪಕ್ಷದ ಓರ್ವ ಪ್ರಭಾವಿ ರಾಜಕೀಯ ನಾಯಕ ಭಾಗವಹಿಸಿದ್ದಾರೆ. ಈ ಕಾರಣಕ್ಕೆ ಮಹಾರಾಷ್ಟ್ರ ಪೊಲೀಸರು ಈ ಪ್ರಕರಣದ ದಿಕ್ಕು ತಪ್ಪಿಸಿದ್ದಾರೆ ಎಂದು ನಿತೇಶ್ ರಾಣೆ ಆರೋಪಿಸಿದ್ದಾರೆ.






































































