ಡಾ.ಕಫೀಲ್‌ ಖಾನ್‌ ಮಧ್ಯರಾತ್ರಿ ಜೈಲಿನಿಂದ ಬಿಡುಗಡೆ

ಲಕ್ನೊ, ಸೆ.2:  ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಸಂದರ್ಭದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ  ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದ ಉತ್ತರಪ್ರದೇಶದ ವೈದ್ಯ ಡಾ.ಕಫೀಲ್ ಖಾನ್ ಅವರನ್ನು ಮಂಗಳವಾರ ಮಧ್ಯರಾತ್ರಿ ದಾಟಿದ  ಮಥುರಾ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ಅಲಹಾಬಾದ್ ಹೈಕೋರ್ಟ್, ಕಫೀಲ್ ಖಾನ್ ಬಂಧನ ಅಕ್ರಮ ಎಂದು ಮಂಗಳವಾರ ತೀರ್ಪು ನೀಡಿ ಅವರನ್ನು  ಕೂಡಲೇ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ತಾಕೀತು ಮಾಡಿತ್ತು. 

ಕಫೀಲ್ ಭಾಷಣದಲ್ಲಿ ದ್ವೇಷ ಅಥವಾ ಹಿಂಸೆಯನ್ನು ಪ್ರಚೋದಿಸುವ ಯಾವುದೇ ಅಂಶ ಕಂಡು ಬಂದಿಲ್ಲ ಎಂದು ಸ್ಪಷ್ಟಪಡಿಸಿತ್ತು. 

ನ್ಯಾಯಾಲಯದ ಆದೇಶ ಹಿನ್ನೆಲೆಯಲ್ಲಿ ಕಫೀಲ್ ಅವರನ್ನು ತಡರಾತ್ರಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕಫೀಲ್ ಅವರು, ಸಿಎಎ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. 

ಈ ಹಿನ್ನೆಲೆಯಲ್ಲಿ ಅವರನ್ನು ಜನವರಿ 29ರಂದು ಬಂಧನಕ್ಕೊಳಪಡಿಸಲಾಗಿತ್ತು. ಸಮುದಾಯಗಳ ಮಧ್ಯೆ ಧರ್ಮದ ಆಧಾರದಲ್ಲಿ ದ್ವೇಷ ಬಿತ್ತುವ ಪ್ರಯತ್ನ ಮಾಡಿರುವ ಆರೋಪದಡಿ ಅವರನ್ನು ಬಂಧನಕ್ಕೊಳಪಡಿಸಲಾಗಿತ್ತು. ಇದಾದ ಎರಡು ದಿನಗಳ ನಂತರ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. 

ಮಣಿಪಾಲದಲ್ಲಿ ವೈದ್ಯಕೀಯ ಕಲಿತಿರುವ ಕಫೀಲ್‌ ಖಾನ್‌ ಕಾನೂನು ಜೊತೆಗೆ ತಿಕ್ಕಾಟ ನಡೆಸುತ್ತಿರುವುದು ಇದೇ ಮೊದಲಲ್ಲ. ಗೋರಖಪುರದ ಆಸ್ಪತ್ರೆಯಲ್ಲಿ ಮಕ್ಕಳ ಸಾವು ಸಂಭವಿಸಿದ ಸಂದರ್ಭದಲ್ಲಿ ಈ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಡಾ. ಖಾನ್‌ ಅವರನ್ನು ಕರ್ತವ್ಯ ನಿರ್ಲಕ್ಷ್ಯದ ಆರೋಪದಲ್ಲಿ ವಜಾಗೊಳಿಸಿ  ಬಳಿಕ ಬಂಧಿಸಲಾಗಿತ್ತು.









































































































error: Content is protected !!
Scroll to Top