
ಮುಂಬಯಿ, ಆ. 19: ಐಪಿಎಲ್ ಫ್ರಾಂಚೈಸಿ ವಿವಾದ ಸದ್ಯಕ್ಕೆ ಬಗೆ ಹರಿಯುವಂತೆ ಕಾಣಿಸುವುದಿಲ್ಲ. ಲಡಾಖ್ ಗಡಿಯಲ್ಲಿ ಚೀನ ಅತಿಕ್ರಮಣ ಮಾಡಿದ ಹಿನ್ನೆಲೆಯಲ್ಲಿ ಚೀನ ಮೂಲದ ವಿವೊ ಮೊಬೈಲ್ ಕಂಪೆನಿ ಐಪಿಎಲ್ ಶೀರ್ಷಿಕೆ ಪ್ರಾಯೋಜಿಸುವುದಕ್ಕೆ ಭಾರತೀಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಈ ವರ್ಷ ವಿದೇಶದಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿಗೆ ಡ್ರೀಮ್ 11 ಎಂಬ ದೇಶೀಯ ಕಂಪೆನಿಯ ಪ್ರಾಯೋಜಕತ್ವ ಪಡೆಯಲಾಗಿದೆ. ಸೋಮವಾರವಷ್ಟೇ ಪ್ರಾಯೋಜಕತ್ವ ಒಪ್ಪಂದ ಆಖೈರು ಆಗಿತ್ತು. ಆದರೆ ಇದೀಗ ಈ ಡ್ರೀಮ್ 11 ಕಂಪನಿ ಕೂಡ ಚೀನ ನಂಟು ಹೊಂದಿರುವ ವಿಚಾರ ಬೆಳಕಿಗೆ ಬಂದು ಹೊಸ ಚರ್ಚೆ ಶುರುವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಡ್ರೀಮ್ 11 ಪ್ರಾಯೋಜಕತ್ವ ಪಡೆಯುವುದ ಸರಿಯೇ ಎಂದು ಭಾರಿ ವಾದ-ಪ್ರತಿವಾದಗಳಾಗುತ್ತಿವೆ.
ಈ ಕುರಿತಾಗಿ ಸ್ವತಃ ಬಿಸಿಸಿಐ ಸ್ಪಷ್ಟೀಕರಣ ನೀಡಿದೆ. ಆದರೆ ಚೀನದೊಂದಿಗೆ ನಂಟು ಹೊಂದಿರುವ ಕಂಪನಿಯನ್ನೇ ಮತ್ತೆ ಆಯ್ಕೆ ಮಾಡಿಕೊಂಡಿರುವುದು ಮತ್ತೊಂದು ಸುತ್ತಿನ ವಿವಾದಕ್ಕೆ ಕಾರಣವಾಗಿದೆ.
ಡ್ರೀಮ್ 11 ಚೀನ ಮೂಲದ ಕಂಪನಿ ಅಲ್ಲ. ಆನ್ಲೈನ್ ಫ್ಯಾಂಟಸಿ ಗೇಮ್ನಲ್ಲಿ ಆಸಕ್ತರಾದವರಿಗೆ ಡ್ರೀಮ್ 11 ಪರಿಚಿತ ಹೆಸರು. 736 ಕೋಟಿ ಮೌಲ್ಯದ ಕಂಪನಿ ಇದು. ಹರ್ಷ್ ಜೈನ್ ಹಾಗೂ ಭವಿತ್ ಸೇಠ್ ಎಂಬ ಇಬ್ಬರು ಯುವ ಉದ್ಯಮಿಗಳು 2012ರಲ್ಲಿ ಇದನ್ನು ಆರಂಭಿಸುವ ಮೂಲಕ ಭಾರತದಲ್ಲಿ ಫ್ಯಾಂಟಸಿ ಸ್ಪೋರ್ಟ್ಸ್ಗೆ ಬುನಾದಿ ಹಾಕಿದರು. 2019ರಲ್ಲಿ ಈ ಕಂಪನಿ ‘ಯುನಿಕಾರ್ನ್ ಕ್ಲಬ್’ಗೆ ಸೇರ್ಪಡೆಗೊಂಡ ಮೊದಲ ಭಾರತೀಯ ಗೇಮಿಂಗ್ ಕಂಪನಿ ಎನಿಸಿಕೊಂಡಿತು.
ಡ್ರೀಮ್ 11 ಹಲವಾರು ಹೂಡಿಕೆದಾರರನ್ನು ಹೊಂದಿದೆ. ಸ್ಟೆಡ್ ವ್ಯೂ, ಕರಾರಿ ಕ್ಯಾಪಿಟಲ್, ಥಿಂಕ್ ಇನ್ವೆಸ್ಟ್ಮೆಂಟ್, ಮಲ್ಟಿಪಲ್ಸ್ ಈಕ್ವಿಟಿ ಹಾಗೂ ಟೆನ್ಸೆಂಟ್. ಇದರಲ್ಲಿ ಟೆನ್ಸೆಂಟ್ ಚೀನ ಮೂಲದ ಕಂಪನಿಯಾಗಿರುವುದೇ ಹೊಸ ವಿವಾದಕ್ಕೆ ಕಾರಣವಾಗಿದೆ.ಚೀನದ ಶೆನ್ಝೆನ್ ಮೂಲದ ಟೆನ್ಸೆಂಟ್ ಕಂಪನಿ ವಿಶ್ವದ ಅತಿ ದೊಡ್ಡ ಗೇಮಿಂಗ್ ಕಂಪನಿ ಎನಿಸಿಕೊಂಡಿದೆ. ಡ್ರೀಮ್ 11ನಲ್ಲಿ ಈ ಕಂಪನಿ ಶೇ. 10 ಹೂಡಿಕೆ ಮಾಡಿದೆ .
ಡ್ರೀಮ್ 11ಗೆ ಎಂ.ಎಸ್. ಧೋನಿ ಪ್ರಮುಖ ರಾಯಭಾರಿಯಾಗಿದ್ದಾರೆ. ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್, ಜಾನಿ ಬೈರ್ಸ್ಟೋವ್, ಫಾಫ್ ಡು ಪ್ಲೆಸಿಸ್, ಕ್ವಿಂಟನ್ ಡಿ ಕಾಕ್, ಕಗಿಸೊ ರಬಾಡಾ, ಆಂಡ್ರೆ ರಸ್ಸೆಲ್, ಜೇಸನ್ ಹೋಲ್ಡರ್ ಮತ್ತು ಕೇನ್ ವಿಲಿಯಮ್ಸನ್ ಅವರೊಂದಿಗೆ ಡ್ರೀಮ್11 ಒಪ್ಪಂದ ಮಾಡಿಕೊಂಡಿದೆ.