ರಾಜಕೀಯ ಬಣ್ಣ ಪಡೆಯುತ್ತಿರುವ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ

ಬಾಲಿವುಡ್ ನಲ್ಲಿ ಬೆಳೆಯುತ್ತಿದ್ದ ಪ್ರತಿಭಾವಂತ ನಟ ಸುಶಾಂತ್ ಸಿಂಗ್ ರಜಪೂತ್ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡಾಗ ಚಿತ್ರರಂಗ  ಸೇರಿದಂತೆ ಅಭಿಮಾನಿಗಳೆಲ್ಲ ಆಘಾತಕ್ಕೊಳಗಾಗಿದ್ದು ಸಹಜ.ಸುಶಾಂತ್ ಗಿಂತಲೂ ಮೊದಲು ಈ ರೀತಿ ಯುವ ಪ್ರತಿಭೆಗಳು ಆತ್ಮಹತ್ಯೆ ಮಾಡಿಕೊಂಡ ಕೆಲವು ಘಟನೆಗಳು  ಸಂಭವಿಸಿದ್ದವು. ನೆನಪಿಡಿ ಹೀಗೆ ಸತ್ತವರೆಲ್ಲಾ  ಚಿತ್ರರಂಗದಲ್ಲಿ ಅಪ್ಪ ಅಮ್ಮನ ಹೆಸರು‌ ಉಪಯೋಗಿಸಿ ಬಂದವರಲ್ಲ. ಅಥವಾ ಗಾಡ್ ಫಾದರ್ ಗಳ ಬಲದಿಂದ ಬಂದವರಲ್ಲ.ಅವರ  ಸಾವಿನ  ಸುದ್ದಿ ಹೆಣ ಸ್ಮಶಾನಕ್ಕೆ  ಹೋಗುವ ತನಕ ಮಾತ್ರ ಬಿಸಿಯಾಗಿರುತ್ತಿತ್ತು.ಅತ್ತ ಚಿತೆಯ  ಬೆಂಕಿ‌ ನಂದುವ ಮೊದಲೇ ಇತ್ತ ಸುದ್ದಿಯೂ ತಣ್ಣಗಾಗುತ್ತಿದ್ದವು.ಆದರೆ ಸುಶಾಂತ್ ಸಾವಿನ ಬಳಿಕ  ಬಾಲಿವುಡ್ ನಲ್ಲಿ ‘ನೆಪೊಟಿಸಮ್'(ಸ್ವಜನ ಪಕ್ಷ ಪಾತ) ತಾಂಡವವಾಡುತ್ತಿರುವ ಸತ್ಯ ಹೊರಬಂತು.ಈ ಸತ್ಯ ಮೊದಲಿನಿಂದಲೂ ಎಲ್ಲರಿಗೂ ತಿಳಿದಿರುವಂಥಾದ್ದೆ.ಆದರೆ ಆ ಬಗ್ಗೆ ಯಾರೊಬ್ಬರೂ ಮಾತಾಡುತ್ತಿರಲಿಲ್ಲ. ಈಗ ಖುಲ್ಲಂ ಖುಲ್ಲಾ ಆಗಿ ಚರ್ಚೆಯಾಗುತ್ತಿದೆ ಅಷ್ಟೆ.

ಎಲ್ಲ  ಸಾವುಗಳಂತೆ ಸುಶಾಂತ್ ಸಾವು ಕೂಡಾ ಒಂದು ಸಾಮಾನ್ಯ ಆತ್ಮಹತ್ಯೆ ರೂಪ ಪಡೆದು ಹಳ್ಳ ಹಿಡಿಯುತ್ತಿತ್ತು.ಆದರೆ ಇದೀಗ ಒಂದು ತಾರ್ಕಿಕ ಅಂತ್ಯ ಕಾಣುವ ಸಾಧ್ಯತೆಗಳನ್ನು ಹುಟ್ಟು ಹಾಕಿದೆ.

ಸ್ವಜನ ಪಕ್ಷಪಾತದಿಂದ ಬಹಳಷ್ಟು ಹೊಡೆತ ತಿಂದವರಲ್ಲಿ  ನಟಿ ಕಂಗನಾ ರಣಾವತ್ ಕೂಡಾ ಒಬ್ಬರು.ಆದರೆ ಆಕೆ ಎದೆಗಾರಿಕೆಯ ಹುಡುಗಿ.ಎಲ್ಲವನ್ನೂ ಮೆಟ್ಟಿ ನಿಲ್ಲಬೇಕೆನ್ನುವ ಛಲಗಾರ್ತಿ.ಆದ್ದರಿಂದ ಎಂತೆಂಥವರನ್ನೂ ಎದುರು ಹಾಕಿಕೊಂಡು ಬಾಲಿವುಡ್ ನಲ್ಲಿ ತನ್ನದಾದ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.ಈ ಗಟ್ಟಿಗಿತ್ತಿ ಮೊದಲಿನಿಂದಲೂ ಬಾಲಿವುಡ್ ಅನಾಚಾರ,ನೆಪೊಟಿಸಂ ಬಗ್ಗೆ ಹೇಳಿಕೊಳ್ಳುತ್ತಲೇ ಇದ್ದರು.ಆದರೆ ಈಕೆಯ ಮಾತಿಗೆ ಯಾರೂ ಸೊಪ್ಪು ಹಾಕಲೇ ಇಲ್ಲ.ಈ ಬಗ್ಗೆ ಆಕೆಯ ಪರವಾಗಿ ನಿಂತರೆ ಎಲ್ಲಿ ತಮಗೆ ಬಾಲಿವುಡ್ ನ ಘಟಾನುಘಟಿಗಳಿಂದ ಬೆದರಿಕೆ ಎದುರಿಸಬೇಕಾಗಿ ಬರುತ್ತದೋ ಅಥವಾ ತಮಗೆ ಅವಕಾಶವೇ ನಿಂತು ಹೋಗುತ್ತದೋ ಎಂಬ ಹೆದರಿಕೆ ಅವರನ್ನು ಕಾಡುತ್ತಿತ್ತು. ಒಂದು ಹಂತದಲ್ಲಿ ಈಕೆಯನ್ನೇ ಮಾನಸಿಕ ಅಸ್ವಸ್ಥತೆಯಿಂದ ಬಳಲುವಾಕೆ ಎಂದು‌ ಬಿಂಬಿಸಲು ಪ್ರಯತ್ನಿಸಲಾಗಿತ್ತು.

ಸುಶಾಂತ್ ಸಿಂಗ್ ಪ್ರಕರಣದಲ್ಲೂ ಸುಶಾಂತ್ ನ ಪರವಾಗಿ‌ ಬಾಯಿಬಿಟ್ಟ ಮೊದಲ ನಟಿ ಈಕೆ.ಎರಡನೇ ಕಲಾವಿದರು ಯಾರು ಎಂದು ಕೇಳಬೇಡಿ.ಯಾಕೆಂದರೆ ಎರಡನೇ ಸಂಖ್ಯೆ ಇಲ್ಲವೇ ಇಲ್ಲ.ಈಕೆಗೆ ಚಿತ್ರರಂಗದೊಳಗಿನ ರಾಜಕೀಯ ಗೊತ್ತು.ಯಾರೆಲ್ಲಾ ಹೇಗೆಲ್ಲ ಆಡಿಸುತ್ತಾರೆ ಎಂಬುದೂ ಗೊತ್ತು. ಆದ್ದರಿಂದ ಈ ಗಟ್ಟಿಗಿತ್ತಿ ಅಂಥವರ ಹೆಸರನ್ನು ಹೇಳಿದ್ದಾಳೆ. ಈಗ ಪೊಲೀಸರು ಅವರನ್ನೆಲ್ಲಾ ಕರೆದು ವಿಚಾರಿಸಲಾರಂಭಿಸಿದ್ದಾರೆ.

ನಿರ್ಮಾಪಕ,ನಿರ್ದೇಶಕ ಕರಣ್ ಜೋಹರ್ ನ ಬದಲು ಆತನ ನಿರ್ಮಾಣ ಕಂಪನಿಯ ಸಿಎಓ ನನ್ನು ಕರೆದು ಪೊಲೀಸರು ವಿಚಾರಣೆ ನಡೆಸಿದ್ದರು.ಜೋಹರ್ ನನ್ನು ಕರೆಸಿ ವಿಚಾರಿಸುವ ಇರಾದೆ ಬಹುಶಃ ಪೊಲೀಸರಲ್ಲಿ ಇದ್ದಂತೆ ಕಂಡು ಬಂದಿಲ್ಲ.ಕರಣ್ ಜೋಹರ್ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆಯ ಆತ್ಮೀಯ ಗೆಳೆಯ.  ಆದ್ದರಿಂದ ಆತನನ್ನು ವಿಚಾರಿಸಲಿಕ್ಕಿಲ್ಲ ಎಂಬುದಾಗಿ ಇದೇ ಕಂಗನಾ ಸಾಮಾಜಿಕ ಜಾಲತಾಣದಲ್ಲಿ  ಬರೆದುಕೊಂಡ ಬಳಿಕ ಗೃಹ ಸಚಿವರು ಅಗತ್ಯಬಿದ್ದರೆ ಕರಣ್ ಜೋಹರ್ ನನ್ನೂ ಕರೆಸಿ ವಿಚಾರಿಸಲಾಗುವುದೆಂದು ಹೇಳಿಕೆ ಕೊಟ್ಟಿದ್ದಾರೆ. ಮೊನ್ನೆ ಮೊನ್ನೆ ಟೈಂಸ್ ನೌ ತನ್ನ ಟ್ವಿಟರ್ ನಲ್ಲಿ ಸುಶಾಂತ್ ಸಾವಿನ ಕೆಲ ದಿನಗಳ ಹಿಂದೆ  ಮುಖ್ಯಮಂತ್ರಿಗೆ ಬಹಳ ಹತ್ತಿರದ ಮಂತ್ರಿಯೊಬ್ಬರ  ಏರ್ಪಡಿಸಿದ್ದ ಪಾರ್ಟಿಯಲ್ಲಿ ಸುಶಾಂತ್ ಭಾಗವಹಿಸಿದ್ದರು.ಈ ಪಾರ್ಟಿಯ ಸಿಸಿಟಿವಿಯಲ್ಲೂ ಕೈಯಾಡಿಸಲಾಗಿದೆ ಎಂದು ಬರೆದು ಬಳಿಕ ಅಳಿಸಿದೆ.ಈ ಅಂಶ ಈಗ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಆದ್ದರಿಂದ ಮುಂಬಯಿ ಪೊಲೀಸರಿಗೂ ಸರಿಯಾಗಿ ತನಿಖೆ ನಡೆಸಲು ಆಗುತ್ತಿಲ್ಲ.ಅದಕ್ಕಾಗಿಯೇ ಮಹಾರಾಷ್ಟ್ರ ಸರಕಾರ ಸಿಬಿಐ ತನಿಖೆಗೆ ತಯಾರಾಗುತ್ತಿಲ್ಲ.ಜತೆಗೆ ಮುಂಬಯಿಯಲ್ಲಿರುವ ಬಿಹಾರದ ಪೊಲೀಸರಿಗೂ ಮುಂಬಯಿ ಪೊಲೀಸರು ಸಹಕರಿಸುತ್ತಿಲ್ಲ ,ಅಲ್ಲದೆ ಬಿಹಾರ ಪೊಲೀಸರ ಜತೆ ಅನಾಗರಿಕವಾಗಿ ಮುಂಬಯಿ ಪೊಲೀಸರು ವರ್ತಿಸಿದ್ದಾರೆ ಎಂಬುದು ವಿರೋಧ ಪಕ್ಷದ ಆರೋಪವಾಗಿದೆ.ಆದ್ದರಿಂದ ದಾಲ್‌ಮೆ ಕುಛ್ ಕಾಲಾ ಹೈ ಎನ್ನಲಡ್ಡಿಯಿಲ್ಲ.

ಮಹೇಶ್ ಭಟ್, ಸಂಜಯ್ ಲೀಲಾ ಬನ್ಸಾಲಿ, ಆದಿತ್ಯ ಚೋಪ್ರಾ ಸೇರಿದಂತೆ ಪ್ರಮುಖ ನಿರ್ಮಾಪಕ ,ನಿರ್ದೇಶಕರನ್ನು ಕರೆಸಿ ಅವರ ಹೇಳಿಕೆಗಳನ್ನು ಪೋಲೀಸರು ದಾಖಲಿಸಿದ್ದಾರೆ.

ಶೇಖರ್ ಕಪೂರ್ ನಿರ್ದೇಶನದ ‘ ಪಾನಿ’ ಚಿತ್ರಕ್ಕೆ ಸುಶಾಂತ್ ರನ್ನು‌ ಹಾಕಿಕೊಳ್ಳಲಾಗಿತ್ತು.ಅದಕ್ಕಾಗಿ ಅವರು  ಬಹಳಷ್ಟು ತಯಾರಿಯನ್ನೂ ನಡೆಸಿದ್ದರು.ಆದರೆ ಕಾಣದ ಕೈಯೊಂದು ಆ ಚಿತ್ರ ಸೆಟ್ಟೇರದಂತೆ ಮಾಡಿತ್ತು.ಸಂಜಯ್ ಲೀಲಾ ಭನ್ಸಾಲಿಯ ‘ ಪದ್ಮಾವತ್’, ಸೇರಿದಂತೆ ಮೂರು ಚಿತ್ರಗಳಿಗೆ ಸುಶಾಂತ್ ರನ್ನು ಸಹಿ ಮಾಡಿಸಲಾಗಿತ್ತು.ಆದರೆ ಕೊನೆ ಘಳಿಗೆಯಲ್ಲಿ ಅವರನ್ನು ಕೈ ಬಿಟ್ಟು ರಣವೀರ್ ಸಿಂಗ್ ರನ್ನು ಹಾಕಲಾಗಿತ್ತು. ಆ ಮೂರೂ ಚಿತ್ರಗಳು ಭರ್ಜರಿ ಯಶಸ್ಸಾಗಿತ್ತು.ಇಲ್ಲೂ ಕಾಣದ ಕೈಯೊಂದು ಸುಶಾಂತ್ ರಿಂದ ಆ ಚಿತ್ರಗಳನ್ನು ಕಸಿದುಕೊಂಡಿತ್ತು.ಆ ಕಾಣದ ಕೈ  ಯಾವುದು ಎಂದು ಲೆಕ್ಕ ಹಾಕತೊಡಗಿದರೆ ಸಂಶಯದ ದೃಷ್ಟಿ ಹಲವರ ಕಡೆಗೆ ತಿರುಗುತ್ತದೆ.ಒಂದು ವರ್ಗದ ಸ್ಥಾಪಿತ ಕಲಾವಿದರು, ನಿರ್ಮಾಪಕರು,ನಿರ್ದೇಶಕ ರತ್ತ ಆ ದೃಷ್ಟಿ ಹರಿಯುತ್ತದೆ.ಎಲ್ಲವೂ ಪೊಲೀಸ್ ತನಿಖೆಯಿಂದ ಹೊರಬರಬೇಕಾಗಿದೆ.ದೇಶದಲ್ಲಿ‌ ಮಹಾರಾಷ್ಟ್ರ ಪೊಲೀಸ್ ಗೆ ವಿಶೇಷ ಸ್ಥಾನ ಮಾನವೇನೋ ಇದೆ.ಆದರೆ ನ್ಯಾಯಯುತವಾದ ತನಿಖೆ ನಡೆದು ನಿಜವಾದ ಕಾರಣ ಬೆಳಕಿಗೆ  ಬರಬಹುದೇ ಎಂಬ ಸಂಶಯ ಹೆಚ್ಚಿನವರನ್ನು ಕಾಡತೊಡಗಿರುವುದು ಸತ್ಯವೇ.ಸುಬ್ರಹ್ಮಣ್ಯ ಸ್ವಾಮಿ ಆರಂಭದಿಂದಲೇ ಸಿಬಿಐ ತನಿಖೆಗೆ ಒತ್ತಾಯಿಸಿದ್ದರು.ಅವರ ಬಳಿಕ ಈಗ ಪಾಸ್ವಾನ್ ರ ಪುತ್ರ ಚಿರಾಗ್ ಪಾಸ್ವಾನ್,ಮಹಾರಾಷ್ಟ್ರ ಸಚಿವ ಅಜಿತ್ ಪವಾರ್ ರ ಪುತ್ರ ಈಗ ಮೈದಾನಕ್ಕಿಳಿದಿದ್ದು ಅವರೂ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ.

ವಿಶೇಷವೆಂದರೆ ಮೊನ್ನೆ ಮೊನ್ನೆ ಸುಶಾಂತ್ ನ ಹೊಸ ಪ್ರೇಯಸಿ  ರಿಯಾ ಚಕ್ರವರ್ತಿ ಕೂಡಾ ಸಿಬಿಐ ತನಿಖೆಗೆ ಒತ್ತಾಯಿಸಿದ್ದು ಈಗ ಆಕೆಯ ವಿರುದ್ಧವೇ ಸುಶಾಂತ್ ತಂದೆ ಎಫ್ ಐ ಆರ್ ದಾಖಲಿಸಿದ್ದಾರೆ.ಅವರ ದೂರಿನಲ್ಲಿನ ಅಂಶಗಳನ್ನು ಅವಲೋಕಿಸಿದರೆ ಮೇಲ್ನೋಟಕ್ಕೆ ನಿಜವಾಗಿರಲೂ ಬಹುದೆನ್ನಿಸುತ್ತಿದೆ.ಸುಶಾಂತ್ನ ಗೆಳೆತನ ಮಾಡಿ ಆತನನ್ನು ಬುಟ್ಟಿಗೆ ಹಾಕಿ ಆ ಮೂಲಕ ತನಗೂ ಬಾಲಿವುಡ್‌ನಲ್ಲಿ ಕೆಲಸ ಗಿಟ್ಟಿಸುವ ಲೆಕ್ಕಾಚಾರ ಆಕೆಯದ್ದು.ಆತ ಹೀರೋ ಆಗುವ ಚಿತ್ರಗಳಿಗೆ ಆಕೆಯೇ ನಾಯಕಿ ಆಗಬೇಕೆಂಬ ಶರತ್ತು  ಇಟ್ಟು ಆಕೆಗೂ ಕೆಲಸ ಪಡೆಯುವುದು ಲೆಕ್ಕಾಚಾರ.

ವಿದೇಶಕ್ಕೆ ಜಾಹೀರಾತು ಒಂದರ ಚಿತ್ರೀಕರಣಕ್ಕೆ ಹೋಗಿ ಬರುವ ಎಲ್ಲಾ ಖರ್ಚು ಸುಶಾಂತ್  ಖಾತೆಯಿಂದ ಹೋಗಿತ್ತು ಎಂಬ ಸುದ್ದಿ ಆತನ ಸಾವಿನ ಬೆನ್ನಿಗೆ ಹೊರಬಿದ್ದಿತ್ತು.ಈಗ ಅವರ  ತಂದೆಯ ದೂರಿನ ಪ್ರಕಾರ ಅವರ  ಖಾತೆಯಲ್ಲಿದ್ದ 17 ಕೋಟಿಯಲ್ಲಿ  15 ಕೋಟಿಯನ್ನು ವರ್ಗಾಯಿಸಲಾಗಿದೆಯಂತೆ.ಈ ಬಗ್ಗೆ ತನಿಖೆಗಾಗಿ ಮುಂಬಯಿಗೆ ಬಂದಿರುವ ಬಿಹಾರ  ಪೊಲೀಸರು ಬಾಂದ್ರಾ,ಪಾಲಿ ಹಿಲ್ ನಲ್ಲಿರುವ ಕೋಟಕ್ ಮಹೀಂದ್ರ ,ಎಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕ್ ಗಳಿಗೆ ಭೇಟಿ ನೀಡಿ ಸುಶಾಂತ್ ನ ಬ್ಯಾಂಕ್ ವ್ಯವಹಾರಗಳ ವಿವರಗಳನ್ನು ಪಡಕೊಂಡಿದ್ದಾರೆ.ಈ ಮಧ್ಯೆ ರಿಚಾ ತನ್ನ ಪ್ರಕರಣವನ್ನು ಬಿಹಾರದಿಂದ ಮುಂಬಯಿಗೆ ವರ್ಗಾಯಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಗೂ ಅರ್ಜಿ ಸಲ್ಲಿಸಿದ್ದಾರೆ.ಬಿಹಾರ ಪೊಲೀಸರ ಹಿಡಿತ ಬಿಗಿಗೊಳ್ಳುವ ಎಲ್ಲಾ ಸಾಧ್ಯತೆಗಳು ಆಕೆಗೆ ಆರಂಭದಲ್ಲೇ ಗೋಚರಿಸಿದಂತಿದೆ. ರಿಚಾ ಹಣಕ್ಕಾಗಿ ಸುಶಾಂತ್ ರನ್ನು ಬಲಿತೆಗೆದುಕೊಂಡಳೇ ಎಂಬ ಸಂಶಯ ಇಲ್ಲಿಂದಲೇ ಪ್ರಾರಂಭವಾಗುತ್ತದೆ.2019 ರ ತನಕ ಸುಶಾಂತ್‌ ಗೆ ಯಾವುದೇ ‌ರೀತಿಯ ಮಾನಸಿಕ ತೊಂದರೆ ಇದ್ದಿರಲಿಲ್ಲ.ಏಕಾಏಕಿಯಾಗಿ ರಿಚಾ ಈತನ ಬಾಳಿಗೆ ಪ್ರವೇಶಿಸಿದ ಬಳಿಕ ಈ ಮಾನಸಿಕ ಖಾಯಿಲೆ ಅಂಟಿಕೊಂಡಿತು? ಆತನಿಗೆ ಔಷಧ ನೀಡುವ ಉಸ್ತುವಾರಿಯನ್ನು ಆಕೆಯೇ ಸ್ವತಃ ನೋಡಿಕೊಳ್ಳುತ್ತಿದ್ದಳು. ಆತನಿಗೆ ಓವರ್ ಡೋಸ್ ನೀಡಿ ಆತನನ್ನು‌ಮಾನಸಿಕ ಅಸ್ವಸ್ಥ ಎಂದು ಸಾಬೀತು ಪಡಿಸುವುದು ಆಕೆಯ ಉದ್ದೇಶ ವಾಗಿತ್ತು ಎಂಬುದಾಗಿಯೂ ಎಫ್ ಐ ಆರ್ ನಲ್ಲಿ ದೂರಿದ್ದಾರೆ.ಅಷ್ಟೇ ಅಲ್ಲ, ಆಕೆ ಕೆಲಸದವರನ್ನೂ ಬದಲಿಸಿದ್ದಲ್ಲದೆ ಆತನ ಮನೆಯನ್ನೂ ಬದಲಾಯಿಸಿದ್ದಳು.ಆತನ ಫೋನ್ ಕೂಡಾ ಆಕೆಯ ಬಳಿಯೇ ಇತ್ತು.ಆತನಿಗೆ ತನ್ನವರ ಜತೆ ಮಾತಾಡಲೂ ಅವಕಾಶ ಸಿಗುತ್ತಿರಲಿಲ್ಲವಂತೆ.ಬಲವಂತವಾಗಿ ಮನೆ ಬದಲಾಯಿಸುವಲ್ಲಿ ಹಾಗೂ ಆತನ ಇಷ್ಟದ ರೀತಿಯಲ್ಲಿ ಇಲ್ಲದ ಹಳೆಮನೆಯನ್ನು ಖರೀದಿಸಿದ್ದು, ಎಲ್ಲವನ್ನೂ ಈಕೆಯೇ ಮುಂದೆ ನಿಂತು ಮಾಡಿಸಿದ್ದು,ಸುಶಾಂತ್ ಎದುರುಬಾರದ ಹಾಗೆ ನೋಡಿಕೊಂಡಿರುವುದನ್ನು ಎಸ್ಟೇಟ್ ಏಜೆನ್ಟ್  ಟಿವಿ ಮಾಧ್ಯವದವರ ಎದುರು ಹೇಳಿಕೊಂಡಿದ್ದಾರೆ. ಸಾವಿನ ಒಂದೆರಡು ದಿನದ ಹಿಂದೆಯೇ ಆಕೆ ಸುಶಾಂತ್ ನ ಮನೆಯಿಂದ ಗಂಟುಮೂಟೆ ಕಟ್ಟಿದ್ದಳು.ಹೀಗೆ ಹೋಗುವಾಗ ಆತನ ಹಣ ಕ್ರೆಡಿಟ್ ಕಾರ್ಡ್, ದಾಖಲೆ ಪತ್ರ,ಚಿನ್ನಾಭರಣಗಳನ್ನೂ ಒಯ್ದಿದ್ದಳು ಎನ್ನುವ ಆರೋಪ  ಆತನ ತಂದೆಯದ್ದು.ಆದ್ದರಿಂದ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎನ್ನುವುದು ‌ಅವರ ವಾದ.ಆದರೆ ಸರಕಾರ ಅದಕ್ಕೆ ತಯಾರಿಲ್ಲ.ಸುಶಾಂತ್‌  ತಂದೆ ಮಾಡುವ ಆರೋಪಗಳು ನಿಜವಾಗಿದ್ದರೆ ರಿಚಾರನ್ನೇ ಆರೋಪಿ ಎಂದು ಭಾವಿಸಬೇಕಾಗುತ್ತದೆ.

ಆದರೆ ಇದು ಒಂದೇ ಅಂಶ ಆತನ ಆತ್ಮಹತ್ಯೆ ನಿರ್ಧಾರಕ್ಕೆ ಕಾರಣವಾಗಿರದು.ಆಕೆ ಆತನ ಬದುಕಿಗೆ ಪ್ರವೇಶಿಸಿ ಒಂದು ವರ್ಷವೂ ಆಗಿಲ್ಲ. ಇದು ಬಹಳ ಜಟಿಲವಾದ ರಹಸ್ಯವಾಗಿದೆ.ಬಂದ ಚಿತ್ರಗಳೆಲ್ಲಾ ತನ್ನ ಕೈಜಾರುತ್ತಿರುವುದು, ಬಾಲಿವುಡ್‌ನ ಸ್ವಯಂ ಘೋಷಿತ  ಘಟಾನುಘಟಿಗಳೆನಿಸಿಕೊಂಡವರು ತನ್ನ ಪ್ರತಿಭೆಯನ್ನು ಗುರುತಿಸದೆ ತನ್ನನ್ನು ಮೂಲೆಗುಂಪಾಗಿಸಲು ಕುತಂತ್ರ ಹೆಣೆಯುತ್ತಿರುವುದು, ಚಿತ್ರರಂಗದಲ್ಲಿ ತನ್ನ ಬಗ್ಗೆ ಸುಳ್ಳುಸುದ್ದಿ ಹಬ್ಬಿಸಿ ನಿರ್ಮಾಪಕ, ನಿರ್ದೇಶಕರು ಸಹಿ‌ ಮಾಡಿಸಲು ತಯಾರಾಗದಂತೆ ನೋಡಿಕೊಳ್ಳುವುದು, ಮಾಜಿ ಸೆಕ್ರೆಟರಿ ದಿಶಾ ಸಾಲ್ಯಾನ್ ಆತ್ಮಹತ್ಯೆಗೂ ಈತನ ಸಾವಿಗೂ ತಾಳೆ ಹಾಕಿನೋಡಿಕೊಳ್ಳುತ್ತಿರುವಾಗಲೇ ಆಕೆಯ ದಾಖಲೆಗಳು ಕಾಣೆಯಾಗಿರುವುದು ಹತ್ತು ಹಲವು ಸಂಶಯಗಳನ್ನು ಹುಟ್ಟು ಹಾಕುತ್ತಿದೆ…. ಹೀಗೆ ಹತ್ತು ಹಲವು ಅಂಶಗಳು ಈತನನ್ನು ಬಹುಶಃ ಜರ್ಝರಿತಗೊಳಿಸಿರಬೇಕು.ಬಾಲಿವುಡ್ ತನ್ನನ್ನು ಯಾಕೆ ಒಪ್ಪಿ ಅಪ್ಪಿಕೊಳ್ಳುತ್ತಿಲ್ಲ ಎಂಬ ಕೊರಗನ್ನು ಆತ ತನ್ನ ಆತ್ಮೀಯರ ಬಳಿ ಹೇಳಿಕೊಂಡಿದ್ದ. ಬಾಲಿವುಡ್ ನಲ್ಲಿ ಕೆಲವು ದಶಕದಿಂದಲೂ ಡಿ.ಗ್ಯಾಂಗ್ ಕೈವಾಡ ಇರುವುದು ಬಹಿರಂಗ ರಹಸ್ಯ.

ಈ  ನಡುವೆ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಕೂಡಾ ತನಗೆ ಬಾಲಿವುಡ್ ನಲ್ಲಿ ಬೆಳೆಯಲು ಬಿಡುತ್ತಿಲ್ಲ ಎಂಬುದಾಗಿ ಇತ್ತೀಚೆಗೆ ಹೇಳಿರುವುದು ನೆಪೋಟಿಸಮ್ ಇರುವುದಕ್ಕೆ ಪುಷ್ಟಿ ನೀಡುತ್ತದೆ.ಕೆಲ ಸ್ಥಾಪಿತ ಕಲಾವಿದರು ಸಮಾರಂಭವೊಂದರ  ವೇದಿಕೆಯಲ್ಲೇ  ರೆಹಮಾನ್ ಗೆ ಹಾಗೂ ಮತ್ತೊಂದು ಪ್ರಶಸ್ತಿ ಸಮಾರಂಭದಲ್ಲಿ ಸುಶಾಂತ್ ರನ್ನು‌ ಹಂಗಿಸಿವ ರೀತಿಯಲ್ಲಿ ನಡೆದುಕೊಂಡಿರುವ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗ ಹರಿದಾಡುತ್ತಿವೆ.

ತಮಗೆ ಬೇಕಾದವರನ್ನು ಉಳಿಸಿ ಬೆಳೆಸುವ, ಬೇಡದವರನ್ನು ಈ ಕ್ಷೇತ್ರದಿಂದ ದೂರಗೊಳಿಸುವುದು ಎಲ್ಲ  ನಡೆದೇ ಇರುತ್ತದೆ.ಆದ್ದರಿಂದ ಈ ಪ್ರಕರಣದಲ್ಲಿ ಕೂಡಾ ಆ ಅಂಶದತ್ತ ಪೊಲೀಸರು ಗಮನ ಹರಿಸಿದರೆ ನಿಜ ಸಂಗತಿ ಬಯಲಾಗಬಹುದು.

ಏಳಿಂಜೆ ನಾಗೇಶ್ , ಮುಂಬಯಿerror: Content is protected !!
Scroll to Top