ಲಕ್ನೊ, ಆ. 2 : ಕೊರೊನಾ ವೈರಸ್ ಗೆ ಉತ್ತರ ಪ್ರದೇಶದ ಸಚಿವರೊಬ್ಬರು ಬಲಿಯಾಗಿದ್ದಾರೆ. ತಾಂತ್ರಿಕ ಶಿಕ್ಷಣ ಸಚಿವೆಯಾಗಿದ್ದ ಕಮಲ್ ರಾಣಿ ವರುಣ್ ಕೊರೊನಾದಿಂದಾಗಿ ಭಾನುವಾರ ನಿಧನರಾಗಿದ್ದಾರೆ. ಜುಲೈ 18ರಂದು ಕಮಲ್ ರಾಣಿ ಅವರಿಗೆ ಕೊರೊನಾ ಪಾಸಿಟಿವ್ ಬಂದು ಇಲ್ಲಿನ ಎಸ್ಜಿಪಿಜಿಐ ಆಸ್ಪತ್ರೆಗೆ ದಾಖಲಾಗಿದ್ದರು.
ಸಮಾಜ ಶಾಸ್ತ್ರದಲ್ಲಿ ಸ್ನಾತಕೊತ್ತರ ಪದವಿ ಪಡೆದಿದ್ದ 62 ವರ್ಷದ ಕಮಲ್ ರಾಣಿ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದರು. ಕಾನಪುರದ ಘಾತಂಪುರ್ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಮೊದಲ ಬಿಜೆಪಿ ಅಭ್ಯರ್ಥಿ ಅವರಾಗಿದ್ದರು.
ಆರೆಸ್ಸೆಸ್ ಕಾರ್ಯಕರ್ತರೊಬ್ಬರ ಪತ್ನಿಯಾದ ಕಮಲರಾಣಿ ಅವರು 1989ರಲ್ಲೇ ಕಾನ್ ಪುರ ಮಹಾಪಾಲಿಕೆಯ ಸದಸ್ಯೆಯಾಗಿ ಚುನಾಯಿತರಾಗಿ ರಾಜಕಾರಣಕ್ಕೆ ಅಡಿ ಇಟ್ಟಿದ್ದರು. ಅದೇ ದ್ವಾರಕಾಪುರಿ ವಾರ್ಡ್ನಿಂದ 1995ರಲ್ಲಿ ಮರು ಆಯ್ಕೆಯಾದರು. ಕೊರೊನಾಕ್ಕೆ ಬಲಿಯಾದ ಉತ್ತರ ಪ್ರದೇಶದ ಮೊದಲ ಸಚಿವೆ ಇವರಾಗಿದ್ದಾರೆ.