ರಾಜಸ್ಥಾನ ಬಿಕ್ಕಟ್ಟು : ಹೈಕೋರ್ಟ್‌ ವಿರುದ್ಧ ಸುಪ್ರೀಂ ಕೋರ್ಟಿಗೆ ಸ್ಪೀಕರ್‌

ದಿಲ್ಲಿ : ಸರಕಾರದ ವಿರುದ್ಧ ಬಂಡೆದ್ದಿರುವ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು ಇತರ ಕಾಂಗ್ರೆಸ್ ಶಾಸಕರ ವಿರುದ್ಧ ಜು.24 ರ ತನಕ ಯಾವುದೇ ಕ್ರಮ ಕೈಗೊಳ್ಳುವುದನ್ನು ನಿರ್ಬಂಧಿಸಿರುವ ಹೈಕೋರ್ಟಿನ ತೀರ್ಪಿನ ವಿರುದ್ಧ  ರಾಜಸ್ಥಾನ ಸ್ಪೀಕರ್ ಸಿ. ಪಿ. ಜೋಶಿ ಅವರು ಬುಧವಾರ ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ. ರಾಜ್ಯ ಸರ್ಕಾರದಲ್ಲಿ ಉಂಟಾಗಿರುವ ಸಾಂವಿಧಾನಿಕ ಬಿಕ್ಕಟ್ಟನ್ನು ವಿಳಂಬ ಮಾಡದೆ ಶೀಘ್ರವೇ ಬಗೆಹರಿಸಲು ಸುಪ್ರೀಂ ಕೋರ್ಟ್ ಮುಂದೆ ಮನವಿ ಮಾಡಲು ನಿರ್ಧರಿಸಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಸಚಿನ್ ಪೈಲಟ್ ಸೇರಿದಂತೆ 19 ಮಂದಿ ಶಾಸಕರ ವಿರುದ್ಧ ಅನರ್ಹತೆ ನೊಟೀಸ್ ನೀಡಿದ್ದ ರಾಜಸ್ಥಾನ ವಿಧಾನಸಭೆ ಸ್ಪೀಕರ್ ಸಿ. ಪಿ. ಜೋಶಿ ಅವರಿಗೆ ಜು.24ರ ತನಕ ಯಾವುದೇ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಆದೇಶ ನೀಡಿತ್ತು. ಶುಕ್ರವಾರ ಬಂಡಾಯ ಶಾಸಕರ ಅನರ್ಹತೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯಲಿದೆ.

ಇದೀಗ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸ್ಪೀಕರ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ನಡೆಸುವ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಸ್ಪೀಕರ್ ಗೆ ಇದೆ ಎಂದು ಸ್ವತಃ ಸುಪ್ರೀಂ ಕೋರ್ಟ್‌ ಹಿಂದಿನ ಪ್ರಕರಣಗಳಲ್ಲಿ ಹೇಳಿದೆ. ಹೀಗಿರುವಾಗ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ  ಶಾಸಕರಿಗೆ ನೊಟೀಸ್ ನೀಡಿದ ತನ್ನ ಕ್ರಮ ಸರಿಯಾಗಿದೆ ಎಂದು ಸ್ಪೀಕರ್‌ ಪ್ರತಿಪಾದಿಸಿದ್ದಾರೆ. ಸ್ಪೀಕರ್ ಅವರ ತೀರ್ಮಾನದ ನಂತರ ನ್ಯಾಯಾಂಗ ಅದನ್ನು ಪರಿಶೀಲನೆ ಮಾಡಬಹುದು, ಬಂಡಾಯ ಶಾಸಕರ ಅನರ್ಹತೆ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿರುವುದು ಅಪಾಯಕಾರಿ ನಡೆಯಾಗಿದ್ದು ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸುತ್ತದೆ, ಹೀಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಇಂದು ಸ್ಪೀಕರ್ ಸಿ. ಪಿ. ಜೋಶಿ ಹೇಳಿದ್ದಾರೆ.

ಜು.24ರಂದು ಹೈಕೋರ್ಟ್ ನೀಡಲಿರುವ ತೀರ್ಪು ಅಶೋಕ್ ಗೆಹ್ಲೊಟ್ ಸರ್ಕಾರ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುವ ಸಂದರ್ಭದಲ್ಲಿ ನಿರ್ಣಾಯಕವಾಗುತ್ತದೆ.

error: Content is protected !!
Scroll to Top