ತಿರುವನಂತಪುರ: ಕೇರಳದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮನೆ ಮನೆಗಳಿಗೆ ತೆರಳಿ ಮೀನು ಮಾರಾಟ ಮಾಡುವುದನ್ನು ಸರಕಾರ ನಿಷೇಧಿಸಿದೆ. ಅಲ್ಲದೆ ರಸ್ತೆಬದಿಯ ಮೀನು ಮಾರಾಟ ಮತ್ತು ಮೀನು ಹರಾಜನ್ನು ಕೂಡ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಎರಡು ದಿನಗಳ ಹಿಂದೆ ಕೊಲ್ಲಂ ಜಿಲ್ಲೆಯಲ್ಲಿ ಅಲ್ಲಿನ ಜಿಲ್ಲಾಧಿಕಾರಿ ಮೀನು ಮಾರಾಟವನ್ನು ನಿಷೇಧಿಸಿದ್ದರು. ಬಂದರುಗಳಲ್ಲಿ ಕೇಂದ್ರೀಕೃತವಾಗಿರುವ ಕೋವಿಡ್ ಹರಡುವುದನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿತ್ತು.
ಇದೀಗ ಕೋವಿಡ್-19 ಹರಡುತ್ತಿರುವ ಹಿನ್ನೆಲೆಯಲ್ಲಿ ಸರಕಾರವು ಇಡೀ ರಾಜ್ಯಕ್ಕೆ ಈ ನಿಷೇಧವನ್ನು ವಿಸ್ತರಿಸಿ ಆದೇಶ ಹೊರಡಿಸಿದೆ. ಅಲ್ಲದೆ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಈ ಮಧ್ಯೆ ತಿರುವನಂತಪುರ ಜಿಲ್ಲೆಯ ಪೂಂತುರಾ ಮತ್ತು ಪುಲ್ಲುವಿಲಾ ಪ್ರದೇಶಗಳಲ್ಲಿ ಕೊರೋನಾ ವೈರಸ್ ಸಮುದಾಯ ವಿಸ್ತರಣೆ ಹಂತ ತಲುಪಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ತಿರುವನಂತಪುರ ಜಿಲ್ಲೆಯ ಕರಾವಳಿ ಪ್ರದೇಶಗಳಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ.