ಉಡುಪಿ : ಕೇವಲ ಪ್ರಚಾರದ ತೆವಲಿನಿಂದ ದೇಶಭಕ್ತ ಸಂಘಟನೆಯಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ನಿರಂತರ ಕೀಳು ಮಟ್ಟದ ಹೇಳಿಕೆಗಳನ್ನು ನೀಡುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಾರ್ಕಳದ ಓರ್ವ ಸಾಮಾನ್ಯ ಕಾರ್ಯಕರ್ತನ ಮೇಲೆ ವಿನಾಃಕಾರಣ ಅಟ್ರಾಸಿಟಿ ಪ್ರಕರಣ ದಾಖಲಿಸಿ ಬಂಧಿಸಿರುವುದು ಖಂಡನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.
ತಾನೋರ್ವ ಜವಾಬ್ದಾರಿಯುತ ಸಚಿವ ಎನ್ನುವುದನ್ನು ಮರೆತು ಸದಾ ತನ್ನ ನಾಲಗೆಯ ಮೇಲೆ ಹಿಡಿತವಿಲ್ಲದಂತೆ ದೇಶದ ಪ್ರಧಾನಿ ಹಾಗೂ ಆರ್‌ಎಸ್ಎಸ್ ಕುರಿತು ಮನಬಂದಂತೆ ಮಾತನಾಡುವ ಪ್ರಿಯಾಂಕ್ ಖರ್ಗೆ ನೀಡುತ್ತಿರುವ ಅಸಂಬದ್ಧ ಹೇಳಿಕೆಗಳಿಗೆ ಅದೇ ದಾಟಿಯಲ್ಲಿ ಜನ ಸಾಮಾನ್ಯರು, ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಉತ್ತರ ನೀಡುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ.
ಗೃಹಮಂತ್ರಿಗೆ ಶೋಭೆಯಲ್ಲ
ಪ್ರಿಯಾಂಕ್ ಖರ್ಗೆ ಅವರ ಅಹಂಭಾವದ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಭಾಷೆಯಲ್ಲಿ ಉತ್ತರಿಸಿರುವ ಸಾಮಾನ್ಯ ಕಾರ್ಯಕರ್ತನ ಮೇಲೆ ಸುಳ್ಳು ಕೇಸ್ ದಾಖಲಿಸಿ ಬಂಧಿಸಿರುವುದು ರಾಜ್ಯದ ಗೃಹ ಮಂತ್ರಿ ಎನಿಸಿರುವ ಪ್ರಿಯಾಂಕ್ ಖರ್ಗೆ ಅವರಿಗೆ ಶೋಭೆ ತರುವುದಿಲ್ಲ. ಇಂತಹ ಕ್ಷುಲ್ಲಕ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸುವ ಬದಲು ಪ್ರಿಯಾಂಕ್ ಖರ್ಗೆ ಅವರು ತಮ್ಮ ಸ್ವಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿ, ರಾಜ್ಯದಲ್ಲಿ ನಿಷ್ಪಕ್ಷಪಾತವಾಗಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಮುಂದಡಿ ಇಡುವುದು ಉತ್ತಮ ಎಂದು ನವೀನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭ್ರಮೆ
ಸಾಮಾಜಿಕ ಜಾಲತಾಣದಲ್ಲಿ ಕೆರ್ವಾಶೆ ಸುಧೀರ್ ಬರೆದಿರುವ ಕಮೆಂಟ್‌ನಲ್ಲಿ ಅಟ್ರಾಸಿಟಿ ದಾಖಲಿಸುವಂತಹ ಯಾವುದೇ ಅಂಶಗಳು ಇಲ್ಲದೇ ಇದ್ದರೂ ತನ್ನ ಸ್ವಯಂ ಪ್ರತಿಷ್ಠೆಗಾಗಿ ರಾಜ್ಯ ಗೃಹ ಇಲಾಖೆಯನ್ನು ಖರ್ಗೆ ದುರುಪಯೋಗಪಡಿಸಿಕೊಂಡಿರುವಂತೆ ಕಂಡುಬರುತ್ತಿದೆ. ಇಂತಹ ಕ್ಷುಲ್ಲಕ ನಡೆಗಳಿಂದ ಸಾಮಾನ್ಯ ಕಾರ್ಯಕರ್ತರನ್ನು ಹೆದರಿಸಬಹುದು ಎಂದು ಅವರು ಅಂದುಕೊಂಡಿದ್ದರೆ ಅದು ಖರ್ಗೆ ಅವರ ಭ್ರಮೆ. ಇಂತಹ ಅನೇಕ ಸವಾಲುಗಳನ್ನು ಎದುರಿಸಿಕೊಂಡು ಬಂದು ಇಂದು ಬಿಜೆಪಿ ವಿಶ್ವದ ಅತೀ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿದೆ. ಪ್ರಧಾನಿ ನರೇಂದ್ರ ಮೋದಿ ಸುದೀರ್ಘ ಅವಧಿಯ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು.
ಆತ್ಮಾವಲೋಕನ ಮಾಡಿಕೊಳ್ಳಿ
ಕಾಂಗ್ರೆಸ್ಸಿನ ಕೆಲವು ಹಿರಿಯ ಮುಖಂಡರು ಪ್ರಧಾನಿ ಮೋದಿ ಹಾಗೂ ಆರ್‌ಎಸ್ಎಸ್ ಬಗ್ಗೆ ಯಾವ ರೀತಿ ವಾಚಾಮಗೋಚರವಾಗಿ ಮಾತನಾಡಿ ತಮ್ಮ ಘನತೆ, ಗೌರವವನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬ ಬಗ್ಗೆಯೂ ಪ್ರಿಯಾಂಕ್ ಖರ್ಗೆ ಅವರು ಆತ್ಮಾವಲೋಕನ ಮಾಡಿಕೊಳ್ಳುವುದು ಉತ್ತಮ. ಬಿಜೆಪಿ ಕಾರ್ಯಕರ್ತರು ಇಂತಹ ಪೊಳ್ಳು ಬೆದರಿಕೆಗಳಿಂದ ಎಂದೂ ದೃತಿಗೆಡುವುದಿಲ್ಲ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಪೊಲೀಸ್ ಇಲಾಖೆಯನ್ನು ತನ್ನ ಕೈಗೊಂಬೆಯನ್ನಾಗಿಸಿ ಅನಗತ್ಯ ಕ್ಷುಲ್ಲಕ ವಿಚಾರಗಳಲ್ಲಿ ಮೂಗು ತೂರಿಸಿ ಗೊಂದಲ ಸೃಷ್ಟಿಸುವ ಬದಲು ಪ್ರಕರಣದ ಸತ್ಯಾಸತ್ಯತೆಯನ್ನು ಪುನರ್ ಪರಿಶೀಲಿಸಿ ಸಾಮಾನ್ಯ ಕಾರ್ಯಕರ್ತನ ಮೇಲೆ ವಿನಾಕಾರಣ ದಾಖಲಿಸಿರುವ ಪ್ರಕರಣವನ್ನು ತೆರವುಗೊಳಿಸಿ ನ್ಯಾಯ ಸಮ್ಮತವಾಗಿ ಇತ್ಯರ್ಥಗೊಳಿಸಬೇಕು ಎಂದು ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.






































































