ನಮ್ಮೂರ ಸಾಧಕ – ಕೆ. ಗುಣಪಾಲ ಕಡಂಬ

ವಯಸ್ಸನ್ನು ಮೀರಿದ ಉತ್ಸುಕತೆ, ಸೃಜನಶೀಲತೆ, ಗುರುತ್ವ ಶಕ್ತಿಯಿಂದ ಶಿಕ್ಷಣ ತಜ್ಞರಾಗಿ, ಕಂಬಳ ಸಾಧಕರಾಗಿ, ಆದರ್ಶ ಕೃಷಿಕರಾಗಿ, ಸಾಹಿತಿಯಾಗಿ, ಧಾರ್ಮಿಕ ಮುಂದಾಳುವಾಗಿ ಗುರುತಿಸಿಕೊಂಡಿರುವ ಮಾದರಿ ವ್ಯಕ್ತಿತ್ವ ಇಂದಿನ ಲೇಖನದಲ್ಲಿ ಪರಿಚಯಿಸುತ್ತಿರುವ ನಮ್ಮೂರ ಸಾಧಕ ನಿವೃತ್ತ ಪ್ರಾಚಾರ್ಯ, ಕಂಬಳ ವಿದ್ವಾಂಸ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಗುಣಪಾಲ ಕಡಂಬ.

ಕೃಷಿ ಪ್ರಧಾನ ಕೊಳಕ್ಕೆ ಇರ್ವತ್ತೂರು ಮನೆತನದ ಪಟೇಲ್ ನಾಗರಾಜ ಕಡಂಬ – ಜಯಾವತಿ ದಂಪತಿಯ ಪುತ್ರರಾಗಿ 1947ರ ಜೂ. 3ರಂದು ಜನಿಸಿದರು. ಕೊಳಕ್ಕೆ ಇರ್ವತ್ತೂರು ಶಾಲೆ, ಕಾರ್ಕಳದ ಭುಜಬಲಿ ಬ್ರಹ್ಮಚರ್ಯಾಶ್ರಮ, ಬೋರ್ಡ್ ಹೈಸ್ಕೂಲ್‌ನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪಡೆದ ಬಳಿಕ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಪಿಯುಸಿ, ಡಿವಿಎಸ್ ಕಾಲೇಜಿನಲ್ಲಿ ಕನ್ನಡ ಮೇಜರ್, ಇಕನಾಮಿಕ್ಸ್‌ನಲ್ಲಿ ಬಿಎ ಪದವಿ, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದವರು. 1969ರಲ್ಲಿ ಡಿವಿಎಸ್ ಕಾಲೇಜಿನಲ್ಲಿ NCC ಮೊದಲ ತಂಡದ ಕೆಡೆಟ್‌ ಆಗಿ, ದೆಹಲಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ ಹೆಗ್ಗಳಿಕೆ ಇವರದ್ದಾಗಿದೆ. ವಿದ್ಯಾರ್ಥಿ ದೆಸೆಯಲ್ಲೇ ಉತ್ತಮ ವಾಗ್ಮಿಯಾಗಿದ್ದು ಡಿಬೇಟ್ ಕ್ಲಬ್‌ ಅಧ್ಯಕ್ಷ, ಸ್ಟುಡೆಂಟ್ಸ್ ಯೂನಿಯನ್ ಜನರಲ್ ಸೆಕ್ರೆಟರಿ ಹುದ್ದೆಗಳಲ್ಲಿ ಮಿಂಚಿದವರು. ಸ್ನಾತಕೋತ್ತರ ಪದವಿಗೆ ಸೇರುವ ಮೊದಲು ಒಂದು ವರ್ಷ ಅಜೆಕಾರು ಜ್ಯೋತಿ ಹೈಸ್ಕೂಲ್‌ನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಮೂಡುಬಿದಿರೆ ಜೈನ ಪದವಿ ಪೂರ್ವ ಕಾಲೇಜಿನಲ್ಲಿ 1973ರಿಂದ ಕನ್ನಡ ಭಾಷಾ ಉಪನ್ಯಾಸಕ, 2000ದಿಂದ 2005ರವರೆಗೆ ಪ್ರಾಚಾರ್ಯರಾಗಿ ಕರ್ತವ್ಯ ಸಲ್ಲಿಸಿದ್ದಾರೆ.

ಶಿರ್ಲಾಲಿನಲ್ಲಿ ಸುಸಜ್ಜಿತ ಶಿಕ್ಷಣ
ತಮ್ಮ ಊರು ಶಿರ್ಲಾಲಿನಲ್ಲಿರುವ ನಾಲ್ಕೂರು ನರಸಿಂಗರಾವ್ ಸ್ಮಾರಕ ಪದವಿಪೂರ್ವ ಕಾಲೇಜು- ಪ್ರೌಢಶಾಲೆಯ ಅಭಿವೃದ್ಧಿಯಲ್ಲಿ ಕಡಂಬರ ಶ್ರಮ ಚಿರಸ್ಥಾಯಿ. ಸಂಸ್ಥೆಗೆ ಸುಸಜ್ಜಿತ ಕಟ್ಟಡ, ಗ್ರಂಥಾಲಯ, ಭೋಜನಾಲಯ, ಕಂಪ್ಯೂಟರ್ ಲ್ಯಾಬ್‌, ವಿಶಾಲವಾದ ಸಭಾಂಗಣ ನಿರ್ಮಾಣ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಈ ಹೈಸ್ಕೂಲಿಗೆ 400 ಮೀ. ಓಟದ ಟ್ರ್ಯಾಕ್, ಹತ್ತಿರದಲ್ಲೇ ಪ್ರಾಕೃತಿಕ ಕಾಡು ಬೆಳೆಸುವ ಕಲ್ಪನೆ ಇವರದ್ದಾಗಿದೆ. ಇನ್ನು ಪತ್ನಿಯ ಸ್ಮರಣಾರ್ಥ ಸುಮಂಗಲಾ ಚಾರಿಟೇಬಲ್‌ ಟ್ರಸ್ಟ್‌ ಮುಖೇನ ಪುತ್ರ ಜೇವಿತೇಶ್‌ ಮತ್ತು ಪುತ್ರಿ ಸುನೈನಾ ಅವರ ಮೂಲಕ ಸಂಸ್ಥೆಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, SSLCಯಲ್ಲಿ ಪ್ರಥಮ ದ್ವಿತೀಯ ಸ್ಥಾನಿಗಳಿಗೆ ಚಿನ್ನದ ಪದಕ ನೀಡುತ್ತ ಬರುತ್ತಿದ್ದಾರೆ. ಇವರ ನೇತೃತ್ವದಲ್ಲಿ 2024ರ ಡಿಸೆಂಬರ್‌ನಲ್ಲಿ ಶಾಲೆಯು ರಜತ ಮಹೋತ್ಸವ ಸಂಭ್ರಮ ಆಚರಿಸಿತು.

ಕಂಬಳದ ಕಡಂಬ
ಕಂಬಳ ಮತ್ತು ಕಡಂಬ ಒಂದೇ ನಾಣ್ಯದ ಎರಡು ಮುಖಗಳೆಂಬಂತೆ ಕಂಬಳ ಕ್ಷೇತ್ರದಲ್ಲಿ ಉದ್ಘೋಪಕರಾಗಿ, ಪ್ರಧಾನ ತೀರ್ಪುಗಾರರಾಗಿ, ಸಂಘಟಕರಾಗಿ ಛಾಪು ಮೂಡಿಸಿದ್ದಾರೆ. 1989ರಲ್ಲಿ ರೂಪುಗೊಂಡ ಕಾಸರಗೋಡು ಸಹಿತ ಅವಿಭಜಿತ ದ.ಕ. ಜಿಲ್ಲೆಯ ಕಂಬಳ ಸಮಾವೇಶ ಸಮಿತಿಯ ಸ್ಥಾಪಕ ಕಾರ್ಯದರ್ಶಿಯಾಗಿ 22 ವರ್ಷ ಕಾರ್ಯನಿರ್ವಹಿಸಿದ್ದಾರೆ. ಮಂಗಳೂರಿನಲ್ಲಿ ನೆಲೆ ಕಾಣಬಹುದಾಗಿದ್ದ ಕಂಬಳ ಸ್ಟೇಡಿಯಂ ಮೂಡುಬಿದಿರೆಯ ಬಸವನಕಜೆಗೆ ಅಲ್ಲಿಂದ 2003ರಲ್ಲಿ ಈಗಿನ ಕಡಲೆಕೆರೆಗೆ ಬರುವಂತಾದದ್ದು ಇವರಿಂದ. ಇನ್ನು ಹತ್ತು ಎಕರೆ ಜಾಗದಲ್ಲಿ ಇಡೀ ಕರಾವಳಿಗೆ ಮಾದರಿಯಾಗಿರುವ ಮೂಡುಬಿದಿರೆಯ ಕೋಟಿ ಚೆನ್ನಯ ಕಂಬಳ ಸ್ಟೇಡಿಯಂ ಉತ್ತಮ ವ್ಯವಸ್ಥೆಗಳ ಸ್ವರೂಪದೊಂದಿಗೆ ಅಧಿಕೃತ ಸ್ಟೇಡಿಯಂ ಆಗಿ ಮಾನ್ಯತೆ ಗಳಿಸುವಲ್ಲಿ ಅನೇಕರಲ್ಲಿ ಕಡಂಬರ ಪಾತ್ರವೂ ಮಹತ್ವಪೂರ್ಣ.

ಕಂಬಳ ಅಕಾಡೆಮಿ ಸ್ಥಾಪನೆ
ಕಂಬಳಕ್ಕೊಂದು ಗೊಂದಲ ರಹಿತ ಸಮಗ್ರ ನೀತಿ ನಿಯಮ ಬೇಕು ಎಂಬ ದೂರದೃಷ್ಟಿಯಿಂದ 2011ರಲ್ಲಿ 11 ಮಂದಿ ಸಮಾನ ಆಸಕ್ತರು ಸೇರಿ ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ನೀಡುವ ಸದುದ್ದೇಶದಿಂದ ಕಡಂಬರು ಸ್ಥಾಪಿಸಿದ ಕಂಬಳ ಅಕಾಡೆಮಿ ಕಂಬಳ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲು. ಯೋಗ, ವ್ಯಾಯಾಮ, ಆಹಾರ, ವ್ಯಕ್ತಿತ್ವ ವಿಕಸನ, ಕೋಣಗಳ ಸಾಕುವಿಕೆ, 6 ಬಗೆಯ ಹಗ್ಗ ನೆಯ್ಗೆ, ಬೆತ್ತ ತಯಾರಿ ಮೊದಲಾದ ವಿಷಯಗಳಲ್ಲಿ ನೀಡಲಾಗುವ ತರಬೇತಿ ಕಂಬಳಕ್ಕೆ ಹೊಸ ಭವಿಷ್ಯ ತೋರಿದೆ. ಲೇಸರ್ ಬೀಮ್ ನೆಟ್‌ವರ್ಕ್ ಸಿಸ್ಟಂ, ಇಲೆಕ್ಟ್ರಾನಿಕ್ ಟೈಮಿಂಗ್ಸ್ ಮೂಲಕ ನಿಖರ ಫಲಿತಾಂಶ ಕಂಬಳದಲ್ಲಿ ಪಾರದರ್ಶಕತೆ ತರುವಲ್ಲಿ ಸಾಧ್ಯವಾಗಿರುವುದು ಇವರ ದೂರದರ್ಶಿತ್ವದ ಕೊಡುಗೆಗಳೇ ಆಗಿದೆ ಎನ್ನುತ್ತಾರೆ ಕಂಬಳಾಭಿಮಾನಿಗಳು. ಕಂಬಳ ಕುರಿತಾದ ಪರಿಚಯಾತ್ಮಕ ಸಚಿತ್ರ ಕೈಪಿಡಿಯನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಕಟಿಸಿರುವುದು ಗಮನಾರ್ಹ ದಾಖಲೆಯಾಗಿದೆ. ಕಂಬಳಕ್ಕೆ ಕಾನೂನಿನ ತೊಡಕು ಎದುರಾದಾಗ ಹೋರಾಟದ ಮೂಲಕ ಸರಕಾರಕ್ಕೂ ನ್ಯಾಯಾಂಗಕ್ಕೂ ಕಂಬಳದ ನಿಜ ಸ್ವರೂಪವನ್ನು ತಿಳಿಸಿಕೊಡುವಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ. ಕಂಬಳ ಕ್ಷೇತ್ರದಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲ, ಇದೊಂದು ಅಳಿಲು ಸೇವೆಯಂತೆ ದುಡಿಯುವ ಇವರು ಪ್ರಧಾನ ತೀರ್ಪುಗಾರರಾಗಿ, ತೀರ್ಪುಗಾರರ ದೊಡ್ಡ ಸಮೂಹವನ್ನೇ ರೂಪಿಸಿದವರಾಗಿ, ಜಿಲ್ಲಾ ಕಂಬಳ ಸಮಿತಿ, ಮೂಡಬಿದಿರೆ ಕೋಟಿ ಚೆನ್ನಯ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾಗಿ ಹಳೆಯ ಕಂಬಳಗಳ ಪುನರುತ್ಥಾನ, ಹೊಸ ಕಂಬಳಗಳ ನಿರ್ಮಾಣ, ನಿರ್ವಹಣೆಯಲ್ಲಿ ಮಾರ್ಗದರ್ಶಕರಾಗಿ ಅದೆಷ್ಟೋ ಕಂಬಳಾಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಇನ್ನು 2025ರ ಡಿಸೆಂಬರ್‌ನಲ್ಲಿ ಮಂಗಳೂರು ಕಂಬಳದ ವೇಳೆ ವೇದಿಕೆಯೊಂದರಲ್ಲಿ ಇವರಿಗೆ ಸಾರ್ವಜನಿಕವಾಗಿ ಅವಮಾನವಾದಾಗ, ಇಡೀ ಕರಾವಳಿಯಾದ್ಯಂತ ಇವರ ಅಭಿಮಾನಿಗಳು ಸಿಡಿದೆದ್ದು ಕಂಬಳ ಸಮಿತಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಕಂಬಳ ಕ್ಷೇತ್ರದಲ್ಲಿ ಇವರ ಪ್ರಾಧ್ಯಾನತೆಯನ್ನು ಪರಿಚಯಿಸಿತ್ತು.

ಕನಸು
ಕಂಬಳ ಲೋಕ ಎಂಬ ಮ್ಯೂಸಿಯಂ, ಜಿಮ್ನೆಶಿಯಂ, ಕಂಬಳದ ಎಲ್ಲ ವಸ್ತು ಪರಿಕರಗಳ ಪ್ರದರ್ಶನ, ದಾಖಲೆಗಳ ಸಂಗ್ರಹ, ಗ್ರಂಥಾಲಯ, ಸಮಾವೇಶ ಸಭಾಂಗಣ ಇತರ ಜಾನಪದ ಕ್ರೀಡೆ, ಕಲೆಗಳ ವಿನಿಮಯ ಕಾರ್ಯಕ್ರಮಗಳು, ಸಾಧಕರ ದಾಖಲೀಕರಣದ ಕನಸು ಇವರದ್ದಾಗಿದೆ.

ಕೃಷಿಯಲ್ಲಿ ಪ್ರಯೋಗ
ಇವರು ಪಾರಂಪರಿಕ ಕೃಷಿಯನ್ನು ಮುಂದುವರಿಸಿಕೊಂಡು ಹೋಗುವ ಜೊತೆ ಜೊತೆಗೆ ಹೊಸ ಹೊಸ ಪ್ರಯೋಗಗಳನ್ನೂ ನಡೆಸಿದ್ದಾರೆ. ಸೈಕಲ್ ರಿಮ್‌ನ ಪಿನ್ ಬಳಸಿ ಹನಿ ನೀರಾವರಿ ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ. ಮಳೆಗಾಲದಲ್ಲಿ ಅಡಿಕೆಯ ಕೆಡದಂತಿರಲು ಸ್ಮೋಕಿಂಗ್ ಹೌಸ್ ಮಾಡಿದ್ದಾರೆ. ಅಲ್ಲದೆ ಅಡಿಕೆಯ ಒಂದು ಮೊಳಕೆಯಲ್ಲಿ 9, 13 ಸಸಿಗಳನ್ನು ಬೆಳೆಸಿ ಅಚ್ಚರಿ ಉಂಟುಮಾಡಿದ್ದಾರೆ. ತೆಂಗು, ಕಂಗು, ಕರಿಮೆಣಸು, ಕೊಕ್ಕೋ ಸೇರಿದಂತೆ ಅನೇಕ ಬೆಳೆಗಳನ್ನು ಬೆಳೆಯುತ್ತಾರೆ.

ಮೂಡುಬಿದಿರೆಯ ವರ್ಧಮಾನ ಸಾಹಿತ್ಯ ಪ್ರಶಸ್ತಿ ಪೀಠದ ಸ್ಥಾಪಕ ಸದಸ್ಯ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಮೂಡುಬಿದಿರೆ ಶ್ರೀ ಜೈನ ಮಠಾಧಿಪತಿಯವರ ಪಟ್ಟಾಭಿಷೇಕ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ, ಜೈನ್ ಮಿಲನ್ ಸ್ಥಾಪಕ ಕಾರ್ಯದರ್ಶಿಯಾಗಿ, ಕಾರ್ಕಳ, ಧರ್ಮಸ್ಥಳ ಕ್ಷೇತ್ರಗಳ ಮಹಾಮಸ್ತಕಾಭಿಷೇಕದ ವಾರ್ತಾ ಪ್ರಸಾರ ವಿಭಾಗದ ಮುಖ್ಯಸ್ಥರಾಗಿ, ಧರ್ಮೋತ್ಥಾನ ಟ್ರಸ್ಟ್ ಸಹಕಾರದಲ್ಲಿ ನಡೆದ ಕೊಳಕ್ಕೆ ಇರ್ವತ್ತೂರು ಆದಿನಾಥ ಬಸದಿಯ ಜೀರ್ಣೊದ್ದಾರ ಮತ್ತು ಪಂಚಕಲ್ಯಾಣದ ಉಸ್ತುವಾರಿಯಾಗಿ, ಶಿರ್ಲಾಲು ಅನಂತನಾಥ ಸ್ವಾಮಿ ಬಸದಿ ಆಡಳಿತ ಮಂಡಳಿ ಸ್ಥಾಪಕಾಧ್ಯಕ್ಷರಾಗಿ, ಶಿರ್ಲಾಲು ಸೂಡಿ ಬಸದಿಯ ಜೀರ್ಣೋದ್ದಾರದ ನೇತೃತ್ವ, ಕಾರ್ಕಳ ತಾಲೂಕಿನ 20ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ಶಿರ್ಲಾಲು ಶಾಲಾ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಗುಣಪಾಲ ಕಡಂಬ ಇದಲ್ಲದೆ ಇನ್ನಿತರೆ ಧಾರ್ಮಿಕ ಕ್ಷೇತ್ರದಲ್ಲಿ, ಸಂಘ ಸಂಸ್ಥೆಗಳಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಪ್ರಶಸ್ತಿ
ಮಂಜೇಶ್ವರ ಗೋವಿಂದ ಪೈ ಸಂಶೋಧನ ಕೇಂದ್ರ ನಡೆಸಿದ ಮರೆಯಲಾಗದ ತುಳುವೆರ್ ದಾಖಲೀಕರಣದಲ್ಲಿ ಗುರುತಿಸುವಿಕೆ, ಕಂಬಳ ಸಂಘಟನೆ, ನಿರ್ವಹಣೆಗಾಗಿ 1994ರಲ್ಲಿ ರಾಜ್ಯ ದಸರಾ ಪ್ರಶಸ್ತಿ, ಕಂಬಳ ಅಕಾಡೆಮಿ ಸಾಧನೆಗಾಗಿ 2015ರಲ್ಲಿ ರೂ. 5 ಲಕ್ಷ ಸಹಿತ ಕ್ರೀಡಾ ಪೋಷಕ ಪ್ರಶಸ್ತಿ ಮತ್ತು ಶಿಕ್ಷಣ ಕ್ಷೇತ್ರದ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದಕ್ಷಿಣ ಕನ್ನಡ ಜೈನ ಮೈತ್ರಿಕೂಟ (ರಿ.) ಬೆಂಗಳೂರು ಇದರ ವತಿಯಿಂದ ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ಅನೇಕ ಪ್ರಶಸ್ತಿ, ಪುರಸ್ಕಾರಗಳು ಇವರಿಗೆ ಲಭಿಸಿದೆ.





























































































error: Content is protected !!
Scroll to Top