ಕಾರ್ಕಳ : ತೋಟಕ್ಕೆ ಬಿದ್ದ ಬೆಂಕಿಯನ್ನು ನಂದಿಸಲು ಹೋಗಿ ತೀವ್ರವಾಗಿ ಗಾಯಗೊಂಡಿದ್ದ ನಿಟ್ಟೆ ಗ್ರಾಮದ ಬಜೆಕ್ಕಳ ನಿವಾಸಿ ಜಯಕರ ಶೆಟ್ಟಿ (80) ಅವರು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮಧ್ಯಾಹ್ನ ನಿಧನರಾದರು. ನಿಟ್ಟೆ ಗ್ರಾಮದ ಬಜೆಕ್ಕಳದ ಜಯಕರ ಶೆಟ್ಟಿ ಅವರು ಎ. 9ರಂದು ಬೆಳಿಗ್ಗೆ ತಮ್ಮ ಮನೆಯ ಹಿತ್ತಲಿನಲ್ಲಿ ಕಸಕ್ಕೆ ಬೆಂಕಿ ಹಾಕಿದ್ದರು. ಈ ವೇಳೆ ಆಕಸ್ಮಿಕವಾಗಿ ಬೆಂಕಿ ಹಬ್ಬಿದ್ದು, ವಯೋಸಹಜ ಅಶಕ್ತತೆಯ ನಡುವೆಯೂ ಜಯಕರ ಶೆಟ್ಟಿ ಅವರು ಊರುಗೋಲು ಹಿಡಿದುಕೊಂಡು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ ಗಾಳಿಯ ವೇಗಕ್ಕೆ ಬೆಂಕಿ ತೀವ್ರವಾಗಿ ಆವರಿಸಿದ ಪರಿಣಾಮ ಅವರ ಮೈಕೈ ಸುಟ್ಟು ಗಂಭೀರವಾಗಿ ಗಾಯಗೊಂಡಿದ್ದರು.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕಾರ್ಕಳ ಅಗ್ನಿಶಾಮಕ ದಳ ಬೆಂಕಿ ನಂದಿಸಿತ್ತು. ಅಗ್ನಿಶಾಮಕ ವಾಹನದಲ್ಲೇ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಧ್ಯಾಹ್ನ 1:40ರ ಸುಮಾರಿಗೆ ಜಯಕರ ಶೆಟ್ಟಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿದ್ದಾರೆ. ಈ ಕುರಿತು ಮೃತರ ಪತ್ನಿ ಪುಷ್ಪಾವತಿ ಅವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೋಟದ ಬೆಂಕಿ ನಂದಿಸಲು ಹೋಗಿದ್ದ ವೃದ್ಧ ಸಾವು







































