ಕಾರ್ಕಳ : ಮಾಹಿತಿ ಹಕ್ಕು ಅಧಿಕಾರಿ ತಾನು ಕೇಳಿದ ದಾಖಲೆಗಳನ್ನು ನೀಡದೇ ಸತಾಯಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಕೇಳಿದರೇ ಮೇಲ್ಮನವಿ ಸಲ್ಲಿಸಿ ಎಂದು ಉಡಾಫೆಯಾಗಿ ವರ್ತಿಸುತ್ತಾರೆ ಎಂದು ಆರೋಪಿಸಿ ಪುರಸಭೆಯ ಮಾಜಿ ಸದಸ್ಯರೋರ್ವರು ಧರಣಿ ಕುಳಿತ ಘಟನೆ ಕಾರ್ಕಳ ಪುರಸಭೆಯಲ್ಲಿ ನಡೆದಿದೆ. ಮಾಹಿತಿ ಹಕ್ಕು ಅಧಿಕಾರಿ ವಿರುದ್ಧ ಮಾಜಿ ಪುರಸಭಾ ಸದಸ್ಯ ಸುನೀಲ್ ಕೋಟ್ಯಾನ್ ಅವರು ಎ. 10ರಂದು ಪುರಸಭೆ ಕಚೇರಿಯೊಳಗೆ ಧರಣಿ ಕುಳಿತು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪುರಸಭಾ ವ್ಯಾಪ್ತಿಯ ಕುಂಟಲ್ಪಾಡಿ ಅಂಬಾಭವಾನಿ ದೇವಸ್ಥಾನ ರಸ್ತೆಗೆ ಪುರಸಭಾ ವತಿಯಿಂದ 2011 – 2012 ಸಾಲಿನಲ್ಲಿ ಡಾಮಾರೀಕರಣ ನಡೆಸಲಾಗಿತ್ತು. ತದನಂತರ ಪುನಃ ಅದೇ ರಸ್ತೆಗೆ ಮರು ಡಾಮಾರೀಕರಣ ನಡೆಸಲಾಗಿದೆ. ಆದರೆ, ಈ ರಸ್ತೆಯನ್ನು ಹಾಗೂ ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನು ಉದ್ಯಮಿಯೊಬ್ಬರು ಲೇಔಟ್ ಮಾಡಿ ಮುಚ್ಚಿ ಹಾಕಿದ್ದಾರೆ. ಉದ್ಯಮಿಗಳಿಗೆ ಅಧಿಕಾರಿಗಳು ಸಹಕಾರ ನೀಡುತ್ತಿದ್ದು, ಅಧಿಕಾರಿಗಳು ರಸ್ತೆ ಕೆಲಸವನ್ನೇ ಮಾಡಿಸಿಲ್ಲ. ಈ ಕುರಿತು ಸಮರ್ಪಕ ಮಾಹಿತಿಯನ್ನೂ ನೀಡುತ್ತಿಲ್ಲ. ಕೇಳಿದರೆ ಮೆಲ್ಮನವಿ ಸಲ್ಲಿಸಿ ಎಂದು ಮಾಹಿತಿ ಹಕ್ಕು ಅಧಿಕಾರಿ ಉಡಾಫೆಯಾಗಿ ಉತ್ತರ ನೀಡುತ್ತಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸುನಿಲ್ ಕೋಟ್ಯಾನ್ ನ್ಯಾಯ ಸಿಗುವರೆಗೆ ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ.
ಪುರಸಭಾ ಅಧಿಕಾರಿಗಳ ವರ್ತನೆಗೆ ಬೇಸತ್ತು ಧರಣಿ ಕುಳಿತ ಪುರಸಭಾ ಮಾಜಿ ಸದಸ್ಯ





