ಮಾರ್ಚ್ 23 – ನಿಜವಾದ ಶಹೀದ್ ದಿನ

ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಮರೆಯಲಾಗದ ಮೂರು ಹೆಸರುಗಳು ಭಗತ್ ಸಿಂಗ್, ರಾಜಗುರು ಮತ್ತು ಬಟುಕೇಶ್ವರ ದತ್ತ! ಆ ಮೂವರೂ ನಗುನಗುತ್ತಾ ಲಾಹೋರ್ ಸೆರೆಮನೆಯಲ್ಲಿ ಗಲ್ಲಿಗೇರಿದ ಅತ್ಯಂತ ಪವಿತ್ರವಾದ ದಿನ 1931 ಮಾರ್ಚ್ 23! ಆ ದಿನವನ್ನು ಯಾವ ಭಾರತೀಯರೂ ಮರೆಯಬಾರದು.

ಸ್ವಾತಂತ್ರ್ಯ ಹೋರಾಟದ ಹೊಳೆಯುವ ನಕ್ಷತ್ರಗಳು!
ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕ್ರಾಂತಿಕಾರಿಗಳ ಪಾತ್ರವನ್ನು ಉಲ್ಲೇಖ ಮಾಡದೇ ಅದು ಮುಗಿಯುವುದೇ ಇಲ್ಲ. ಆ ರಕ್ತರಂಜಿತ ಇತಿಹಾಸದಲ್ಲಿ ಭಗತ್ ಸಿಂಗ್, ಚಂದ್ರಶೇಖರ್ ಅಜಾದ್, ರಾಮಪ್ರಸಾದ್ ಬಿಸ್ಮಿಲ್ ಹೊಳೆಯುವ ನಕ್ಷತ್ರಗಳು. ಬಾಬು ಕೃಷ್ಣಮೂರ್ತಿ ಅವರ ‘ ಅಜೇಯ ‘ ಪುಸ್ತಕವನ್ನು ಓದುತ್ತಾ ಹೋದಂತೆ ನಮ್ಮ ರಕ್ತ ಬಿಸಿಯಾದರೆ ನಮ್ಮಲ್ಲಿ ರಾಷ್ಟ್ರಪ್ರೇಮವು ಜೀವಂತ ಆಗಿದೆ ಎಂದರ್ಥ. ಗಾಂಧೀಜಿಯವರ ಅಹಿಂಸಾ ಹೋರಾಟದಲ್ಲಿ ನಂಬಿಕೆ ಕಳೆದುಕೊಂಡ ಈ ಕ್ರಾಂತಿಕಾರಿ ಯುವಕರು ಆರಿಸಿಕೊಂಡದ್ದು ರಕ್ತಕ್ಕೆ ರಕ್ತ ಎಂಬ ಹಿಂಸಾತ್ಮಕ ಹೋರಾಟವನ್ನು! ಅವರ್ಯಾರಿಗೂ ಜೀವದ ಮೇಲೆ ಆಸೆ ಇರಲಿಲ್ಲ. ಬ್ರಿಟಿಷ್ ಸಾಮ್ರಾಜ್ಯವನ್ನು ನಡುಗಿಸಿ ಭಾರತಕ್ಕೆ ಕ್ಷಿಪ್ರವಾಗಿ ಸ್ವಾತಂತ್ರ್ಯವನ್ನು ತಂದುಕೊಡಲು ಹೋರಾಟಕ್ಕೆ ಇಳಿದವರು ಈ ಹೋರಾಟಗಾರರು.

ಪೊಲೀಸ್ ಅಧಿಕಾರಿ ಸಾಂಡರ್ಸ್ ಹತ್ಯೆ
ಭಾರತಕ್ಕೆ ಬಂದಿಳಿದ ಸೈಮನ್ ಕಮಿಶನನ್ನು ಹಿಮ್ಮೆಟ್ಟಿಸುವ ಹೋರಾಟದ ಕಿಚ್ಚು ದೇಶದಾದ್ಯಂತ ಹರಡಿದ್ದ ಕಾಲ ಅದು. 1929ರಲ್ಲಿ ಪಂಜಾಬಿನಲ್ಲಿ ಈ ಚಳುವಳಿಯು ಬೀದಿಗೆ ಇಳಿದು ಹೋರಾಟವನ್ನು ಮಾಡುವಾಗ ಪಂಜಾಬ್ ಸಿಂಹ ಲಾಲಾ ಲಜಪತ್ ರೈ ಮೇಲೆ ದೈಹಿಕ ಆಕ್ರಮಣವು ನಡೆಯಿತು. ಅದರಿಂದ ಘಾಸಿಗೊಂಡ ಅವರು ಆಸ್ಪತ್ರೆಯಲ್ಲಿ ಕೊನೆಯ ಉಸಿರೆಳೆದರು. ಇದಕ್ಕೆ ಸೇಡು ತೀರಿಸಲು ಪಂಜಾಬಿನ ಕ್ರಾಂತಿಕಾರಿ ಪಡೆಯು ತೀವ್ರ ಚಿಂತನೆ ಮಾಡಿತು. ಲಾಲಾ ಅವರ ಹತ್ಯೆಗೆ ಕಾರಣವಾದ ಜೇಮ್ಸ್ ಸ್ಕಾಟ್ ಎಂಬ ಅಧಿಕಾರಿ ಅವರ ಟಾರ್ಗೆಟ್ ಆಗಿದ್ದನು. ಆದರೆ ಸರಿಯಾಗಿ ಗುರುತು ಹಿಡಿಯಲು ಆಗದೇ ಅವರು ಶೂಟ್ ಮಾಡಿದ್ದು ಸ್ಯಾಂಡರ್ಸ್ ಎಂಬ ಅಧಿಕಾರಿಯನ್ನು! ಭಗತ್ ಸಿಂಗ್ ಶೂಟ್ ಮಾಡಿದ್ದ ಎಂಟು ಬುಲೆಟಗಳು ಸಾಂಡರ್ಸ್ ಎಂಬ 21 ವರ್ಷದ ಅಧಿಕಾರಿಯ ಉಸಿರನ್ನು ಖಾಲಿ ಮಾಡಿದ್ದವು. ಅಲ್ಲಿಂದ ಮುಂದೆ ಆ ಕ್ರಾಂತಿಕಾರಿಗಳ ಪಡೆಯು ಭೂಗತವಾಗಿತ್ತು!

ಅಸೆಂಬ್ಲಿ ಸೆಂಟ್ರಲ್ ಸಭಾಂಗಣದಲ್ಲಿ ಬಾಂಬ್ ಎಸೆತ
ಮುಂದೆ ಇದೇ ಭಗತ್ ಸಿಂಗ್ ಮತ್ತು ಬಟುಕೇಶ್ವರ್ ದತ್ತ ಸೇರಿಕೊಂಡು ಲೆಜಿಸ್ಲೇಟಿವ್ ಅಸೆಂಬ್ಲಿಯ ಸೆಂಟ್ರಲ್ ಹಾಲಿನಲ್ಲಿ ಘೋಷಣೆ ಕೂಗಿ ಬಾಂಬ್ ಎಸೆದರು. ಅವರಿಗೆ ಯಾರನ್ನೂ ಕೊಲ್ಲುವ ಉದ್ದೇಶ ಇರಲಿಲ್ಲ. ಕಿವಿಯಿದ್ದೂ ಕಿವುಡಾಗಿರುವ, ಕಣ್ಣಿದ್ದೂ ಕುರುಡಾಗಿರುವ ಬ್ರಿಟಿಷ್ ಸರಕಾರವನ್ನು ಎಚ್ಚರಿಸುವ ಉದ್ದೇಶಕ್ಕೆ ಈ ಬಾಂಬ್ ದಾಳಿ ಆಗಿತ್ತು. ಈ ಬಾಂಬ್ ಸದ್ದು ಬ್ರಿಟಿಷ್ ಸರಕಾರವನ್ನು ನಡುಗಿಸಿದ್ದು ಮಾತ್ರವಲ್ಲ ಇಂಗ್ಲೆಂಡನ ಪಾರ್ಲಿಮೆಂಟನಲ್ಲಿ ಕೂಡ ಚರ್ಚೆಗೆ ನಾಂದಿ ಹಾಡಿತ್ತು. ಭಾರತದಲ್ಲಿ ಚಕ್ರಾಧಿಪತ್ಯದ ಕನಸು ಕಂಡಿದ್ದ ಬ್ರಿಟಿಷ್ ಸರಕಾರ ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿತು. ಭಗತ್ ಸಿಂಗ್, ಸುಖದೇವ್, ರಾಜಗುರು ಈ ಕ್ರಾಂತಿಕಾರಿಗಳನ್ನು ಸೆರೆಮನೆಗೆ ಅಟ್ಟಿ ವಿಚಾರಣೆಯ ನಾಟಕವನ್ನು ಮಾಡಿತು. ಬ್ರಿಟಿಷ್ ಸರಕಾರಕ್ಕೆ ನಿಷ್ಟರಾಗಿದ್ದ ಮೂವರು ನ್ಯಾಯಾಧೀಶರಿಂದ ಬೇರೆ ಯಾವ ತೀರ್ಪು ನಿರೀಕ್ಷೆ ಮಾಡುವ ಹಾಗೇ ಇರಲಿಲ್ಲ.

1931 ಮಾರ್ಚ್ 23 ಏನಾಯಿತು ಎಂದರೆ
ನ್ಯಾಯಾಧೀಶರು ಕ್ರಾಂತಿಕಾರಿ ಯುವಕರನ್ನು ಗಲ್ಲಿಗೇರಿಸುವ ಶಿಕ್ಷೆ ಪ್ರಕಟಿಸಿದಾಗ ಇಡೀ ಭಾರತದಲ್ಲಿ ಅವರ ಪರವಾದ ಒಂದು ಅಲೆ ಎದ್ದಿತ್ತು. ರಾಜಕೀಯ ಖೈದಿಗಳನ್ನು ಸಾಮಾನ್ಯ ಖೈದಿಗಳ ಹಾಗೆ ಪರಿಗಣನೆ ಮಾಡಿದ್ದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಇದನ್ನು ಖಂಡಿಸಿ ಸೆರೆಮನೆಯಲ್ಲಿ ಇದ್ದ ಜತೀಂದ್ರ ನಾಥ್ ಸಿಂಗ್ ಎಂಬ ಕ್ರಾಂತಿಕಾರಿ 63 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿ ಹುತಾತ್ಮನಾದ ಘಟನೆಯೂ ನಡೆದುಹೋಯಿತು! ಕೆರಳಿದ ಬ್ರಿಟಿಷ್ ಸರಕಾರವು ಈ ಮೂವರು ಕ್ರಾಂತಿಕಾರಿಗಳನ್ನು ಕೋರ್ಟು ನಿಗದಿ ಪಡಿಸಿದ ದಿನಕ್ಕಿಂತ ಸಾಕಷ್ಟು ಮೊದಲು ಅಂದರೆ ಮಾರ್ಚ್ 23ರ ಮುಂಜಾನೆ 7-30ಕ್ಕೆ ಲಾಹೋರ್ ಸೆರೆಮನೆಯಲ್ಲಿ ಗಲ್ಲಿಗೇರಿಸಿತು. ಸರ್ಫರೋಷಿ ಕೀ ತಮನ್ನಾ ಬಸ್ ಹಮಾರೆ ದಿಲ್ ಮೇ ಹೈ ಎಂಬ ಕ್ರಾಂತಿಗೀತೆಯನ್ನು ಹಾಡುತ್ತಾ ನಗು ನಗುತ್ತ ಗಲ್ಲುಕಂಬವನ್ನು ಏರಿದ ಈ ಕ್ರಾಂತಿಕಾರಿಗಳ ಕಂಠದಿಂದ ಹೊಮ್ಮಿದ INQUILAB ZINDABAD ಎಂಬ ಮಂತ್ರಘೋಷವು ಮುಂದೆ ಭಾರತದ ಸ್ವಾತಂತ್ರ್ಯಕ್ಕೆ ಮುನ್ನುಡಿ ಬರೆಯಿತು.























error: Content is protected !!
Scroll to Top