ತಾಲೂಕು ಮಟ್ಟದ ಪರಿಶಿಷ್ಟ ಜಾತಿ – ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆ

ಕಾರ್ಕಳ : ನಮ್ಮ ತಾಲೂಕಿನಲ್ಲಿ ಹೊರರಾಜ್ಯದಿಂದ ಬಂದವರಿಗೆ ದಾಖಲೆ ಇಲ್ಲದಿದ್ದರೂ ಮನೆ, ನೀರು, ಪಡಿತರ ಚೀಟಿ ಹೀಗೆ ಎಲ್ಲಾ ಸೌಲಭ್ಯಗಳನ್ನ ನೀಡಲಾಗುತ್ತಿದೆ. ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಯಾವುದಾದರೂ ಸೌಲಭ್ಯಕ್ಕಾಗಿ ಯಾವುದೇ ಪಂಚಾಯತ್‌ ಅಥವಾ ಅಧಿಕಾರಿಗಳ ಬಳಿ ಬಂದಾಗ ದಾಖಲೆ ಸರಿಯಿಲ್ಲ ಎಂದು ಓಡಾಡಿಸುತ್ತೀರಿ ಎಂದು ದಲಿತ ಮುಖಂಡ ಅಶೋಕ್‌ ಕುಂಟಲ್ಪಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಕಾರ್ಕಳ ತಾ. ಪಂ. ಸಭಾಂಗಣದಲ್ಲಿ ಫೆ.21 ರಂದು ನಡೆದ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಜನಾಂಗದವರ ಹಿತರಕ್ಷಣಾ ಹಾಗೂ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.

ತಾಲೂಕಿನ ವಿವಿಧೆಡೆ ನಮ್ಮ ಸಮುದಾಯದವರಿಗಾಗಿ ಕಾಯ್ದಿರಿಸಿದ ಜಾಗವನ್ನು ಮಂಜೂರುಗೊಳಿಸಲು ವರ್ಷಾನುಗಟ್ಟಲೆ ಸಮಯ ತೆಗೆದುಕೊಳ್ಳುವ ಅಧಿಕಾರಿಗಳು ಜೋಡುರಸ್ತೆ, ನಿಟ್ಟೆ ಸೇರಿದಂತೆ ತಾಲೂಕಿನ ವಿವಿಧೆಡೆ ಹೊರರಾಜ್ಯದಿಂದ ಬಂದವರಿಗೆ ಹಕ್ಕುಪತ್ರ, ದಾಖಲೆ‌ಪತ್ರ ಇಲ್ಲದೆ ಇದ್ದರೂ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದಾರೆ ಎಂದು ಆರೋಪಿಸಿದರು.

ಬೆಳ್ಮಣ್‌ನಿಂದ ಮುಂಡ್ಕೂರು ರಾಜ್ಯ ಹೆದ್ದಾರಿಯ ರಸ್ತೆ ಬದಿಯಲ್ಲಿರುವ ಅಂಗಡಿ, ಬಾವಿ ರಿಂಗ್‌ಗಳನ್ನು ತೆರವುಗೊಳಿಸುವಂತೆ ಮಾಡಿರುವ ಮನವಿಗೆ ಅಧಿಕಾರಿಗಳು ಈ ಬಗ್ಗೆ ನೊಟೀಸ್ ನೀಡಲಾಗಿದೆ‌ ಎಂದು ಪ್ರತಿಕ್ರಿಯಿಸಿದಾಗ ಬಾವಿ ರಿಂಗ್‌ಗಳಿಂದಾಗಿ ರಸ್ತೆ ಬದಿ ಯಾರಾದದರೂ ಅಪಘಾತಕ್ಕೀಡಾದರೆ‌ ಏನು ಗತಿ ಎಂದು ಪ್ರಶ್ನಿಸಿದ ಮುಖಂಡರು ಅವರು ಹೊರರಾಜ್ಯದವರು ನೋಟೀಸ್ ನೀಡುವುದಲ್ಲ ಬದಲಾಗಿ ರಸ್ತೆ ಬದಿಯಿಂದ ಅವರನ್ನು ತೆರವುಗೊಳಿಸಿ ಎಂದರು.

ಯಾವುದೇ ತನಿಖೆ ಇಲ್ಲ
ಪ.ಜಾ. ಮತ್ತು ಪ.ಪಂ. ದವರನ್ನು ತಾಲೂಕು ಮಟ್ಟದಲ್ಲಿ ಒಗ್ಗೂಡಿಸಿ ಕುಂದು ಕೊರತೆ ಸಭೆ ನಡೆಸುವುದಷ್ಟೆ ಅನಂತರ ಅವರ ಸಮಸ್ಯೆ ಬಗ್ಗೆ ತನಿಖೆ ನಡೆಸಿ ಪರಿಹಾರ ಒದಗಿಸುವ ಕೆಲಸ ಅಧಿಕಾರಿಗಳಿಂದ ನಡೆಯುತ್ತಿಲ್ಲ. ಇಲ್ಲಿಯೇ ನಮ್ಮ ಸಮಸ್ಯೆ ಪರಿಹಾರವಾಗದಿದ್ದರೆ ಮತ್ತೇ ಎಲ್ಲಿ ಪರಿಹಾರವಾಗಲು ಸಾಧ್ಯ. ನಮಗೆ ನಮ್ಮ ಸಮಸ್ಯೆ ಹೇಳಲು ಈ ಒಂದು ವೇದಿಕೆ ಬಿಟ್ಟರೆ ಗ್ರಾ. ಪಂ. ನಿಂದ ಜಿ.ಪಂ. ಬೇರೆ ಯಾವುದಾದರೂ ವೇದಿಕೆ ಇದೆಯೇ ಎಂದು ಪ್ರಶ್ನಿಸಿದರು.

9/11 ಸಮಸ್ಯೆ
ಪ್ರಸ್ತುತ ಕಾರ್ಕಳ ತಾಲೂಕಿನಲ್ಲಿ 9/11 ಸಮಸ್ಯೆ ಕೇವಲ ದಲಿತ ಸಮುದಾಯ ಮಾತ್ರವಲ್ಲದೆ ಎಲ್ಲರಿಗೂ ಅಪಾಯಕಾರಿಯಾಗಿ ಪರಿಣಮಿಸಿದೆ. ಒಂದು 9/11ಗೆ ಒಬ್ಬ ವ್ಯಕ್ತಿ ಕಾಪುಗೆ ಎಷ್ಟು ಬಾರಿ ಅಳೆದಾಟ ಮಾಡಬೇಕು..? ಪ್ರಶ್ನಿಸಿದ ಮಾಳ ಗ್ರಾಮ ವಿಠಲ್‌ ಗೌಡ ಅವರು ಈ ಬಗ್ಗೆ ನಮಗೆ ಕಾರ್ಕಳದಲ್ಲೇ ಪರಿಹಾರ ಸಿಗುವಂತಾಗಬೇಕು ಎಂದರು. ಈ ವೇಳೆ ಪ್ರತಿಕ್ರಿಯಿಸಿದ ಪ್ರಾಧಿಕಾರದ ಅಧಿಕಾರಿಗಳು ವಾರದಲ್ಲಿ ಒಂದು ದಿನ ಕಾರ್ಕಳಕ್ಕೆ ಸೈಟ್‌ ವಿಸಿಟ್‌ಗೆ ಬರುತ್ತಿದ್ದು ಇಲ್ಲಿ ಕಚೇರಿ, ಸಿಬ್ಬಂದಿ ವ್ಯವಸ್ಥೆ ಇಲ್ಲದ ಕಾರಣ ಆಫೀಸ್‌ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು. ಈ ವೇಳೆ ತಹಶೀಲ್ದಾರ್‌ ಮಾತನಾಡಿ ಇನ್ನು ಮುಂದೆ ಕಾರ್ಕಳಕ್ಕೆ ವಾರದಲ್ಲಿ ಒಂದು ದಿನ ಸೈಟ್‌ ವಿಸಿಟ್‌ ಇನ್ನೊಂದು ಆಫೀಸ್‌ ಕೆಲಸ ಮಾಡುವಂತಹ ವ್ಯವಸ್ಥೆಯನ್ನು ಮಾಡಿಕೊಳ್ಳಿ ಎಂದು ಅಧಿಕಾರಿಗೆ ಸೂಚಿಸಿದರು.

ನೀರಿನ ಸಮಸ್ಯೆ
ಪುರಸಭೆ ಸೇರಿದಂತೆ ತಾಲೂಕು ವ್ಯಾಪ್ತಿಯಲ್ಲಿ ಪ.ಜಾ. ಮತ್ತು ಪ. ಪಂ.ದವರಿಗೆ ನೀರಿನ ಪೂರೈಕೆ ಮತ್ತು ನೀರಿನ ಬಿಲ್‌ ಪಾವತಿ ವಿಚಾರದಲ್ಲಿ ಸಮಸ್ಯೆಯಾಗುತ್ತಿದೆ. 10 ವರ್ಷಗಳ ಹಿಂದೆ ಪುರಸಭೆಯಲ್ಲಿ ನಮ್ಮ ಜನಾಂಗರದವರಿಗೆ ನೀರಿನ‌ ಬಿಲ್ ಕಟ್ಟುಲು ಇರಲಿಲ್ಲ. ಆದರೆ ಈಗ ಬಿಲ್‌ ಪಾವತಿ ಮಾಡಬೇಕೆನ್ನುತ್ತಾರೆ ಎಂದು ಸಮುದಾಯದ ಮುಖಂಡರು ಆರೋಪಿಸಿದರು. ಶ್ರೀನಿವಾಸ್‌ ಕಾರ್ಲ ಅವರು ನಮ್ಮ ಜನಾಂಗದವರ ಹಣವನ್ನು ಸರಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿದೆ ಹಾಗಿರುವಾಗ ನಾವೇಕೆ ನೀರಿನ ಬಿಲ್‌ ಪಾವತಿಸಬೇಕು ಎಂದರು. ಈ ವೇಳೆ ಕೊರಗ ಸಮುದಾಯದ ಮುಖಂಡ ಪ.ಜಾ. ಮತ್ತು ಪ. ಪಂಗಡದವರಿಗಾಗಿರುವ ಶೇ. 25 ನಿಧಿಯಲ್ಲಿ ಅವರ‌ ನೀರಿನ ಬಿಲ್ ಪಾವತಿ ಮಾಡುವಂತೆ ಎಲ್ಲಾ ಪಂಚಾಯತ್‌ಗಳಿಗೆ‌ ನೋಟಿಸ್ ನೀಡುವಂತೆ ಆಗ್ರಹಿಸಿದರು.

ಕೆಆರ್‌ಎಸ್‌ ಪಕ್ಷದ ವಿರುದ್ಧ ಆಕ್ರೋಶ
ಲಂಚಮುಕ್ತ, ಭ್ರಷ್ಟಾಚಾರ ಮುಕ್ತ ಕರ್ನಾಟಕ ನಿರ್ಮಾಣ ಎನ್ನುವ ಹೆಸರಿನಲ್ಲಿ ಕೆಆರ್‌ಎಸ್‌ ಎನ್ನುವ ಪಕ್ಷವೊಂದು ಸರಕಾರಿ ಕಚೇರಿಗಳಿಗೆ ತೆರಳಿ ಅಧಿಕಾರಿಗಳ ವಿರುದ್ಧ ಧಮ್ಕಿ ಹಾಕುವುದು, ವಿಡಿಯೋ ಚಿತ್ರಿಕರಣ ಮಾಡುತ್ತಿದೆ. ಅವರ ಈ ರೀತಿಯ ವರ್ತನೆ ಸರಿಯಲ್ಲ. ಅದಲ್ಲದೆ ಅವರು ರಾಜಕೀಯ ಪಕ್ಷದವರೇ ಆಗಿದ್ದರೆ ಅವರು ತಮ್ಮ ಪಕ್ಷದ ಚಿಹ್ನೆ, ಸಮವಸ್ತ್ರ ಧರಿಸಿಕೊಂಡು ಸರಕಾರಿ ಕಚೇರಿಯೊಳಗೆ ಬರಲು ಅಧಿಕಾರ ನೀಡಿದವರು ಯಾರು. ಅವರ ಪಕ್ಷದ ಕಾರ್ಯಚಟುವಟಿಕೆಯನ್ನು ಪಕ್ಷದ ಕಚೇರಿಯಲ್ಲಿ ಇಟ್ಟುಕೊಳ್ಳಲಿ ಬದಲಾಗಿ ಸರಕಾರಿ ಕಚೇರಿಯಲ್ಲಲ್ಲ ಎಂದ ಅಶೋಕ್‌ ಕುಂಟಲ್ಪಾಡಿ ಅವರು ಸರಕಾರಿ ನೌಕರರೆಲ್ಲರ ಪರವಾಗಿ ನಾನು ಮಾತನಾಡುತ್ತಿದ್ದೇನೆ ಈ ಬಗ್ಗೆ ಅಧಿಕಾರಿಗಳು ಗಮನ ವಹಿಸಬೇಕು ಎಂದಾಗ ಕಾರ್ಕಳ ನಗರ ಪೊಲೀಸ್‌ ನಿರೀಕ್ಷಕ ಮರಳೀಧರ ನಾಯ್ಕ್‌ ಜಿ. ಪ್ರತಿಕ್ರಿಯಿಸಿ ಈ ಬಗ್ಗೆ ವಿಚಾರಣೆ ಮಾಡುತ್ತಿದ್ದೇವೆ ಎಂದರು.

ಅಕ್ರಮ ಗಣಿಗಾರಿಕೆ
ಸರಕಾರದ ಸಂಪತ್ತನ್ನು ಲೂಟಿ‌ ಮಾಡಿ ಜನರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದು‌ ಖಂಡನೀಯ. ಕುಕ್ಕುಂದೂರು, ನಂದಳಿಕೆ ಸೇರಿದಂತೆ ತಾಲೂಕಿನ ಕೆಲ ಭಾಗಗಳು ಗಣಿ ಮಾಫಿಯಾ ಪ್ರದೇಶಗಳಾಗಿದೆ. ಪೊಸನೊಟ್ಟು ಗ್ರಾಮದಲ್ಲಿ ಪರಿಶಿಷ್ಟ ವರ್ಗದ ಮಹಿಳೆಯ ಮೇಲೆ ಅಕ್ರಮ ಗಣಿಗಾರಿಕೆ ಮಾಡುವವರು ಬೆದರಿಕೆ ಹಾಕಿದ ಪ್ರಸಂಗವೂ ನಡೆದಿದೆ. ಹಾಗಿರುವಾಗ ಅಕ್ರಮ ಗಣಿಗಾರಿಕೆ ವಿರುದ್ಧ ಏನು ಕ್ರಮಕೈಗೊಂಡಿದ್ದೀರಿ ಎಂದು ಗಣಿ ಇಲಾಖೆಯವರನ್ನು ಪ್ರಶ್ನಿಸಿದಾಗ ಅಧಿಕಾರಿಗಳು ಯಾವುದೇ ಉತ್ತರ ನೀಡದೆ ಸುಮ್ಮನಾದರು.

ಗಂಗಾಧರ ಗೌಡ ಈದು ಅವರು ನಮೂನೆ 50, 53, 57, 94ಸಿ ಯಲ್ಲಿ ಸುಮಾರು 150 ಅರ್ಜಿಗಳು ತಿರಸ್ಕಾರವಾಗಿದೆ. ಇದನ್ನು ವಿಶೇಷವಾಗಿ ಪರಿಗಣಿಸಿ ಭೂಮಿ ಮಂಜೂರು ಮಾಡುವಂತೆ ಮನವಿ ಮಾಡಿದರು.

ಸಭೆಯಲ್ಲಿ 2025ರ ಜನವರಿಯಲ್ಲಿ ತಹಶೀಲ್ದಾರ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಎಸ್‌ವಿಟಿ ಸರ್ಕಲ್‌ ಬಳಿಯಿರುವ ಸಂಘದ ಕಚೇರಿಯ ದುರಸ್ಥಿ, ಮಿಯ್ಯಾರು ಗ್ರಾಮದಲ್ಲಿ ಸಮುದಾಯ ನಿರ್ಮಾಣ ಜಾಗದ ಅಳೆತೆ ಕಾರ್ಯದ ಸಮಸ್ಯೆ, ಶಾಲೆಯಲ್ಲಿ ಸಂಸ್ಕೃತ ವಿಷಯ ಅಳವಡಿಸುವಂತೆ, ಡಾ.ಬಿ.ಆರ್.‌ ಅಂಬೇಡ್ಕರ್‌ ಕಂಚಿನ ಪುತ್ಥಳಿ ನಿರ್ಮಾಣದ ಕುರಿತು, ಡಿಸಿ ಮನ್ನಾ ಭೂಮಿ, ಪಡಿತರ ಚೀಟಿ, ಕೃಷಿ ಭೂಮಿ ಮಂಜೂರಾತಿ, ಈದು ಗ್ರಾಮದಲ್ಲಿ ಬಸ್‌ನ ಸಮಸ್ಯೆ ಸೇರಿದಂತೆ ವಿವಿಧ ನಡವಳಿಗೆ ಕೈಗೊಂಡ ಕ್ರಮದ ಬಗ್ಗೆ ಹಾಗೂ ಇನ್ನಿತರೆ ಕೆಲ ಸಮಸ್ಯೆಗಳ ಬಗ್ಗೆ ಪ.ಜಾ. ಪ. ಪಂ. ಸಮುದಾಯದವರು ಅಧಿಕಾರಗಳೊಂದಿಗೆ ಚರ್ಚಿಸಿದರು.

ತಹಶೀಲ್ದಾರ್‌ ಪ್ರದೀಪ್‌ ಆರ್.‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‌, ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಸಮಾಜ ಕಲ್ಯಾಣ ಇಲಾಖಾಧಿಕಾರಿ ಕುಮಾರ್‌ ಬಿ. ನಾಯ್ಕ್‌ ವೇದಿಕೆಯಲ್ಲಿದ್ದರು. ವಿವಿಧ ಇಲಾಖಾಧಿಕಾರಿಗಳು, ಪಂಚಾಯತ್‌ ಪಿಡಿಓ, ಗ್ರಾಮ ಆಡಳಿತಾಧಿಕಾರಿಗಳು ಹಾಗು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಸಭೆಯಲ್ಲಿ ಪಾಲ್ಗೊಂಡಿದ್ದರು.









































































































error: Content is protected !!
Scroll to Top