ಆಹ್ಲಾದತೆಯಿಂದಿರಲು ಕಲೆಯ ಕುರಿತು ಒಲವು ಅವಶ್ಯ – ಕೀರ್ತನ್ ಕುಮಾರ್
ಕಾರ್ಕಳ : ಕನ್ನಡ ಭಾಷೆ, ಕನ್ನಡ ಪ್ರೀತಿ, ಕನ್ನಡ ನುಡಿಯ ಪ್ರೇಮವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಕಾರ್ಯವಾಗಬೇಕು. ಕನ್ನಡ ತರಗತಿಯೆಂದರೆ ಬರೀ ಪಾಠದ ಬೋಧನೆಯಲ್ಲ. ಅಲ್ಲಿ ಭಾಷಾ ಪ್ರಭುತ್ವ ಮತ್ತು ಸಾಹಿತ್ಯದ ಒಲವು ಬೆಳೆಯಬೇಕು. ಯುವ ಬರಹಗಾರರು ಸೃಜಿಸಬೇಕು ಎಂದು ನಾರಾಯಣ ಗುರು ಅಭಿವೃದ್ಧಿ ನಿಗಮ್ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ ಹೇಳಿದರು.
ಅವರು ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ಉಡುಪಿ ಜಿಲ್ಲಾ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರ ಸಂಘ ಆಯೋಜಿಸಿದ ಸಾಧಕ ಶಿಕ್ಷಕರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಸುಲತಾ ಹೆಗ್ಡೆ, ಕನ್ನಡ ಭಾಷೆಯನ್ನು ಬೆಳೆಸುವುದೆಂದರೆ ಭಾಷೆಯ ಗೌರವವನ್ನು ಹೆಚ್ಚಿಸುವುದು. ಶಿಕ್ಷಣದಲ್ಲಿ ಮಾತೃಭಾಷೆಗೆ ಮೊದಲ ಆದ್ಯತೆಯನ್ನು ನೀಡುವುದು. ಒಳ್ಳೆಯ ಸಾಹಿತ್ಯ ಕೃತಿಗಳನ್ನು ಓದುವಂತೆ ಮತ್ತು ಬರೆಯುವಂತೆ ನಾವೆಲ್ಲರೂ ಪ್ರೋತ್ಸಾಹಿಸುವುದು ಎಂದರು.

ಉದ್ಯೋಗಕ್ಕೆ ಮಾತ್ರ ಕಲಿತರೆ ಉದ್ಯೋಗ ಸಿಗಬಹುದು. ಆದರೆ, ಮನಸ್ಸು ಆಹ್ಲಾದತೆಯಿಂದ ಕೂಡಿರಲು ಸಂಗೀತ, ಸಾಹಿತ್ಯ, ಲಲಿತ ಕಲೆಗಳಲ್ಲಿ ಒಲವಿರಬೇಕು. ಇವೆಲ್ಲವುಗಳ ಆಸಕ್ತಿಗೆ ಕನ್ನಡ ಪ್ರೀತಿ ಇರಬೇಕು ಎಂದು ಹೇಳಿದರು.
ಕೆ.ಬಿ. ಕೀರ್ತನ್ ಕುಮಾರ್
ಜಂಟಿ ಪ್ರಧಾನ ವ್ಯವಸ್ಥಾಪಕರು, ಪ್ಯಾರಾದೀಪ್ ಫಾಸ್ಫೇಟ್ ಮಂಗಳೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿರಸಿ ಜಿಲ್ಲಾ ಶಿಕ್ಷಣ ಸಂಸ್ಥೆ ಉಪನ್ಯಾಸಕ ನಾರಾಯಣ ಪರಮೇಶ್ವರ ಭಾಗ್ವತ್ ಅವರಿಗೆ ಸಂಘವು ಕನ್ನಡ ಜ್ಞಾನ ನೇಸರ ಎಂಬ ಬಿರುದು ನೀಡಿ ಗೌರವಿಸಲಾಯಿತು. ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ವಿಜೇತ ಶಿಕ್ಷಕರನ್ನು ಅಭಿನಂದಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ, ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಹ ಸಂಸ್ಥಾಪಕ ಅಶ್ವಥ್ ಎಸ್. ಎಲ್., ತಾಲೂಕು ಸಾಹಿ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಮಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಪಿ. ವಿ. ಆನಂದ ಸಾಲಿಗ್ರಾಮ ಅಧ್ಯಕ್ಷತೆ ವಹಿಸಿದ್ದರು. ವಿಜಯ ಹೆಗಡೆ ಪ್ರಾರ್ಥಿಸಿದರು ಸಂಘದ ಜಿಲ್ಲಾ ಗೌರವಾಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘದ ತಾಲೂಕು ಘಟಕದ ಅಧ್ಯಕ್ಷ ಗಣೇಶ್ ಜಾಲ್ಸೂರು ಸ್ವಾಗತಿಸಿ, ದೇವದಾಸ್ ಕೆರೆಮನೆ ನಿರೂಪಿಸಿದರು. ರಾಜೀವ್ ಶೇಡಿಮನೆ ವಂದಿಸಿದರು.
ಸಮಾರಂಭದಲ್ಲಿ ವಲಯವಾರು ಅಧ್ಯಕ್ಷರಾದ ರಮೇಶ್ ಕುಲಾಲ್, ಮಾಲತಿ, ಶಕುಂತಲಾ, ಮಹೇಶ್, ಸುಭೀಕ್ಷಾ ಸಹಕರಿಸಿದರು. ಬೈಂದೂರು, ಕುಂದಾಪುರ, ಬ್ರಹ್ಮಾವರ, ಕಾಪು, ಉಡುಪಿ, ಕಾರ್ಕಳ ವಲಯದ ಪ್ರೌಢ ಶಾಲಾ ವಿಭಾಗದ ಕನ್ನಡ ಭಾಷಾ ಶಿಕ್ಷಕರು ಭಾಗವಹಿಸಿದ್ದರು.





































