ಕಂಪನಿ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ – ವಸಂತ ಆಚಾರ್ಯ ಎಚ್ಚರಿಕೆ
ಕಾರ್ಕಳ : 2018ರಿಂದ 2024ರವರೆಗಿನ 6 ವರ್ಷಗಳ ಕನಿಷ್ಠ ಕೂಲಿ, 2024ರಲ್ಲಿ ಅಧಿಸೂಚಿಸಿದ ತುಟ್ಟಿಭತ್ಯೆಯನ್ನು ಪಾವತಿಸಲು ಒತ್ತಾಯಿಸಿ ದ.ಕ ಮತ್ತು ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಸಂಘಗಳ ಜಂಟಿ ಕ್ರೀಯಾಸಮಿತಿ ನೇತೃತ್ವದಲ್ಲಿ ಅ. 7ರಿಂದ ಅ. 17ವರೆಗೆ ಎರಡು ಜಿಲ್ಲೆಯ ಎಲ್ಲಾ ಕಂಪನಿಗಳ ಮುಂದೆ ಹಕ್ಕೊತ್ತಾಯ ಚಳುವಳಿಗೆ ಕರೆ ನೀಡಿದ್ದು, ಕಾರ್ಕಳದಲ್ಲಿ ಅ. 14ರಂದು ಭಾರತ್ ಬೀಡಿ ಕಂಪನಿ ಮುಂದೆ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಬೀಡಿ ಫೆಡರೇಶನ್ ಉಪಾಧ್ಯಕ್ಷ ವಸಂತ ಆಚಾರ್ಯ ಮಾತನಾಡಿ, ಭಾರತ್ ಬೀಡಿ ಮಾಲೀಕರು ಬೀಡಿ ಉದ್ಯಮ ಹಣದಿಂದ ಇತ್ತೀಚೆಗೆ ಟೀ ಪುಡಿ ಉದ್ಯಮ ಪ್ರಾರಂಭಿಸಿದ್ದಾರೆ. ಇದಲ್ಲದೆ ಬೀಡಿ ಕಾರ್ಮಿಕರು ಬೇವರು ಸುರಿಸಿ ದುಡಿದ ಹಣದಿಂದ ಬೇರೆ ಬೇರೆ ಕಂಪನಿಗಳನ್ನು ಆರಂಬಿಸುತ್ತಿದ್ದಾರೆ. ಆದರೆ, ಕಾರ್ಮಿಕರಿಗೆ ನೀಡಬೇಕಾದ ಹಣವನ್ನು ನೀಡುತ್ತಿಲ್ಲ ಎಂದು ಆರೋಪಿಸಿದ ಅವರು ಕಾರ್ಮಿಕರಿಗೆ ಕಾನೂನು ಬದ್ದವಾಗಿ ಸಿಗಬೇಕಾದ ತುಟ್ಟಿಭತ್ಯೆ, ಬಾಕಿ ಇಟ್ಟುಕೊಂಡಿರುವ ಸಾವಿರಾರು ಕೋಟಿ ಹಣ ಕೂಡಲೇ ನೀಡದಿದ್ದಲ್ಲಿ ಕಂಪನಿ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಸಿದ್ಧತೆ ಮಾಡಕೊಳ್ಳಬೇಕಾದೀತು ಎಂದು ಎಚ್ಚರಿಕೆ ನೀಡಿದರು.


ಪ್ರತಿಭಟನಾ ಸಭೆಯಲ್ಲಿ ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ಅಧ್ಯಕ್ಷ ವಹಾಬಲ ಹೊಡೆಯರ ಹೋಬಳಿ, ಕಾರ್ಯದರ್ಶಿ ಉಮೇಶ್ ಕುಂದರ್, ಮುಖಂಡರಾದ ಬಲ್ಕೀಸ್, ನಳಿನಿ ಎಸ್., ಸಿಐಟಿಯು ಉಡುಪಿ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್, ಮುಖಂಡರಾದ ಮೋಹನ್, ನಾಗೇಶ್, ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷೆ ಸುನೀತಾ ಶೆಟ್ಟಿ, ಕೋಶಾಧಿಕಾರಿ ಸುಮತಿ ಎಸ್., ಮುಖಂಡರಾದ ವಿಲಾಸಿನಿ, ಶಕುಂತಲಾ, ಜಯಂತಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಕವಿರಾಜ್. ಎಸ್. ಕಾಂಚನ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.





































