ಉಡುಪಿ : ಜಿಲ್ಲೆಯಲ್ಲಿ ದೀಪಾವಳಿ ಹಬ್ಬ ಆಚರಣೆ ಸಂದರ್ಭ ತಾತ್ಕಾಲಿಕ ಸುಡುಮದ್ದು ಮಾರಾಟ ಮಾಡುವವರು ಸಂಬಂಧಪಟ್ಟ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದು, ನಿಯಮಾನುಸಾರ ಮಾರ್ಗಸೂಚಿಗಳನ್ನು ಪಾಲಿಸುವುದರೊಂದಿಗೆ ಯಾವುದೇ ಅನಾಹುತಗಳು ಸಂಭವಿಸದಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅವರು ಸೆ. 25ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟ ಮಳಿಗೆಗಳನ್ನು ತೆರೆಯಲು ಅನುಮತಿ ನೀಡುವ ಕುರಿತು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅ. 10ರವರೆಗೆ ಕಾಲಾವಕಾಶ
ಜಿಲ್ಲಾ ವ್ಯಾಪ್ತಿಯಲ್ಲಿ ನಿಗಧಿಪಡಿಸಿರುವ ತೆರೆದ ಪ್ರದೇಶಗಳಲ್ಲಿ ಹೊಸದಾಗಿ ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯುವವರಿಗೆ ಅರ್ಜಿ ಸಲ್ಲಿಸಲು ಅ. 10ರವರೆಗೆ ಕಾಲಾವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಗ್ನಿಶಾಮಕ, ಪೊಲೀಸ್ ಇಲಾಖೆ, ತಹಶೀಲ್ದಾರರ ಕಚೇರಿ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಪಡೆದ ನಿರಾಕ್ಷೇಪಣಾ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದರು.

ಸ್ಥಳ ಪರಿಶೀಲನೆ
ತಾತ್ಕಾಲಿಕ ಸುಡುಮದ್ದು ಮಾರಾಟ ಮಳಿಗೆಗಳನ್ನು ತೆರೆಯಲು ಅನುಮತಿ ನೀಡುವ ಮೊದಲು ತಹಶೀಲ್ದಾರರ ನೇತೃತ್ವದ ಸಮಿತಿಯು ಖುದ್ದು ಸ್ಥಳ ಪರಿಶೀಲನೆ ನಡೆಸುವುದರೊಂದಿಗೆ, ಅಂಗಡಿ ಮುಂಗಟ್ಟುಗಳ ಸಮೀಪದಲ್ಲಿ, ಜನನಿಬಿಡ ಪ್ರದೇಶಗಳಲ್ಲಿ, ಸಂಚಾರ ವ್ಯವಸ್ಥೆಗೆ ಅಡಚಣೆಯಾಗುವ ಕಡೆಗಳಲ್ಲಿ, ಪಟಾಕಿ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಬಾರದು ಎಂದರು.
ಹಸಿರು ಪಟಾಕಿ
ಜಿಲ್ಲೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯು ದೀಪಾವಳಿ ಹಬ್ಬವನ್ನು ಆಚರಿಸುವ ಸಮಯದಲ್ಲಿ ರಾಜ್ಯ ಸರಕಾರದ ಸೂಚನೆಯಂತೆ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು. ಎಲ್ಲಾ ಮಳಿಗೆ ಹಾಗೂ ಗೋದಾಮುಗಳಲ್ಲಿ ಹಸಿರು ಪಟಾಕಿ ಹೊರತುಪಡಿಸಿ, ನಿಷೇಧಿತ ಪಟಾಕಿಗಳನ್ನು ದಾಸ್ತಾನು ಮಾಡುವಂತಿಲ್ಲ. ತಾಲೂಕು ಸಮಿತಿಯು ಈ ಬಗ್ಗೆ ಆಗಿಂದಾಗ್ಗೆ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ ಅವರು, ನಿಯಮಬಾಹಿರವಾಗಿ ಪಟಾಕಿ ದಾಸ್ತಾನು ಮಾಡಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಸ್ವಚ್ಛತೆಗೆ ಆದ್ಯತೆಯಿರಲಿ
ಪಟಾಕಿ ಮಾರಾಟ ಮಾಡುವ ಸ್ಥಳಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಈ ಸಮಯದಲ್ಲಿ ಉತ್ಪಾದನೆಯಾಗುವ ಘನತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೆ ಸೂಕ್ತ ಕ್ರಮ ಜರುಗಿಸಲು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳು ಕ್ರಮ ವಹಿಸಬೇಕು ಎಂದರು. ಹಸಿರು ಪಟಾಕಿಗಳ ಪ್ಯಾಕೆಟ್ ಮೇಲೆ ಹಸಿರು ಪಟಾಕಿಯ ಚಿಹ್ನೆ ಹಾಗೂ ಕ್ಯೂ ಆರ್ ಕೋಡ್ ಇದ್ದು, ಸದ್ರಿ ಚಿಹ್ನೆ ಹೊಂದಿರುವ ಬಗ್ಗೆ ಪರಿಸರ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಹಸಿರು ಪಟಾಕಿಯ ಚಿಹ್ನೆ ಇಲ್ಲದೇ ಇದ್ದಲ್ಲಿ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕ್ರಮವಹಿಸಬೇಕು ಎಂದರು.
ಜಿಲ್ಲೆಯ ಯಾವುದೇ ಶೈಕ್ಷಣಿಕ ಸಂಸ್ಥೆಗಳ ಸುತ್ತಮುತ್ತ, ಆಸ್ಪತ್ರೆಗಳ ಆವರಣ ಸೇರಿದಂತೆ ಇನ್ನಿತರೆ ನಿಷೇಧಿತ ಪ್ರದೇಶಗಳ ವ್ಯಾಪ್ತಿಯಲ್ಲಿ ಪಟಾಕಿಗಳನ್ನು ಬಳಸುವಂತಿಲ್ಲ. ಈ ಬಗ್ಗೆ ಪೊಲೀಸ್ ಹಾಗೂ ಸ್ಥಳೀಯ ಸಂಸ್ಥೆಗಳು ಸಮನ್ವಯತೆ ಹೊಂದಿ ಮೇಲ್ವಿಚಾರಣೆ ನಡೆಸಬೇಕು ಎಂದ ಅವರು, ಯಾವುದೇ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿಯಾಗದಂತೆ, ಸಾರ್ವಜನಿಕರು ಆರೋಗ್ಯಕ್ಕೆ ಹಾಗೂ ಪರಿಸರ ಮಾಲಿನ್ಯಕ್ಕೆ ಧಕ್ಕೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ಸಹಾಯಕ ಕಮೀಷನರ್ ರಶ್ಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ನಾಯಕ್, ನಗರಸಭೆ ಆಯುಕ್ತ ಮಹಾಂತೇಶ ಹಂಗರಗಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು ಉಪಸ್ಥಿತರಿದ್ದರು.











