ಬೈಂದೂರು ಎಂಎಲ್‌ಎ ಹಾಗೂ ಬಿಜೆಪಿ ಮಂಡಲ ಮಾಜಿ ಅಧ್ಯಕ್ಷರ ನಡುವೆ ಜಟಾಪಟಿ – ಬಹಿರಂಗಗೊಂಡ ಭಿನ್ನಮತ

ಉಡುಪಿ : ಸಂಸದ ಬಿ.ವೈ. ರಾಘವೇಂದ್ರ ಅವರ ಸಮ್ಮುಖದಲ್ಲಿ ಬೈಂದೂರು ಬಿಜೆಪಿ ಭಿನ್ನಮತ ಬಹಿರಂಗಗೊಂಡಿದೆ. ಸೆ. 23ರಂದು ಮಣಿಪಾಲದ ಹೊಟೇಲ್‌ನಲ್ಲಿ ನಡೆದ ಸಭೆಯಲ್ಲಿ ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಹಾಗೂ ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ, ರೈತ ಮುಖಂಡ ದೀಪಕ್ ಕುಮಾರ್ ಶೆಟ್ಟಿ ಮಧ್ಯೆ ತಳ್ಳಾಟ ನಡೆದಿದೆ.
ಸಂಸದ ರಾಘವೇಂದ್ರ ಅವರು ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಲಿದ್ದ ದಿಶಾ ಸಭೆಗೆ ಹಾಜರಾಗಲು ಶಾಸಕರೊಂದಿಗೆ ಬಂದಿದ್ದರು. ಈ ವೇಳೆ ಉಪಾಹಾರ ಸೇವನೆ ಹಾಗೂ ವಿಶ್ರಾಂತಿಗಾಗಿ ಮಣಿಪಾಲದ ಹೊಟೇಲ್ ಒಂದಕ್ಕೆ ಆಗಮಿಸಿದ್ದರು. ಬೈಂದೂರಿನ ರಾಜಕೀಯ ಬೆಳವಣಿಗೆಗಳನ್ನು ಸಂಸದರ ಗಮನಕ್ಕೆ ತರುತ್ತಿದ್ದ ಸಂದರ್ಭ ದೀಪಕ್ ಕುಮಾರ್ ಶೆಟ್ಟಿ ಆಕ್ಷೇಪಿಸಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಇಬ್ಬರ ನಡುವೆ ವಾಗ್ವಾದ ನಡೆದು ಹೊಯ್ ಕೈ ಹಂತಕ್ಕೇರಿದೆ ಎಂದು ತಿಳಿದು ಬಂದಿದೆ.

ದೀಪಕ್ ಕುಮಾರ್ ಶೆಟ್ಟಿ ಮಂಡಲ ಅಧ್ಯಕ್ಷ ಹುದ್ದೆ ಕಳೆದುಕೊಂಡ ಬಳಿಕ ರೈತ ಸಂಘದ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು. ಬೈಂದೂರು ಪಟ್ಟಣ ಪಂಚಾಯತ್ ಗೆ ಗ್ರಾಮೀಣ ಪ್ರದೇಶಗಳನ್ನು ಸೇರ್ಪಡಿಸುವ ಅವೈಜ್ಞಾನಿಕ ನೀತಿಯ ವಿರುದ್ಧ ರೈತ ಸಂಘದ ಮುಂದಾಳತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆದಿದ್ದು ಅದರಲ್ಲಿ ದೀಪಕ್‌ ಮುಂಚೂಣಿಯಲ್ಲಿದ್ದರು.

ಮಂಗಳವಾರ ಸಂಸದರ ಭೇಟಿಯ ವೇಳೆ ಇದೇ ವಿಚಾರ ಪ್ರಸ್ತಾಪಿಸಲು ಮುಂದಾಗಿದ್ದ ಶಾಸಕ ಗಂಟೆಹೊಳೆಯವರ ಮಾತಿಗೆ ದೀಪಕ್ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಮಾತಿಗೆ ಮಾತು ಬೆಳೆಯಿತು ಎನ್ನಲಾಗಿದೆ. ಸ್ಥಳದಲ್ಲಿದ್ದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹಾಗೂ ತಾ.ಪಂ. ಮಾಜಿ ಸದಸ್ಯರೊಬ್ಬರ ಪಯತ್ನದಿಂದ ಪರಿಸ್ಥಿತಿ ಶಾಂತವಾಗಿದೆ ಎಂದು ತಿಳಿದು ಬಂದಿದೆ.

ಎರಡು ತಿಂಗಳ ಹಿಂದೆ ದೀಪಕ್‌ ಅವರಿಂದ ತೆರವಾದ ಬಿಜೆಪಿ ಕ್ಷೇತ್ರಾಧ್ಯಕ್ಷ ಸ್ಥಾನಕ್ಕೆ ಅನಿತಾ ಆರ್.‌ ಕೆ. ಅವರನ್ನು ಆಯ್ಕೆ ಮಾಡಲಾಗಿತ್ತು. ಆ ಬಳಿಕ ದೀಪಕ್‌ ಅವರು ಪಕ್ಷದೊಂದಿಗೆ ಮುನಿಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.

















































error: Content is protected !!
Scroll to Top