ಕಾರ್ಕಳ : ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿಗಾಗಿ ಮಾಡಿದ ಪಟ್ಟಿಯಲ್ಲಿದ್ದ ಹಿಂದು ಉಪಜಾತಿಗಳ ಜತೆಗೆ ಮತಾಂತರಗೊಂಡ ಕ್ರಿಶ್ಚಿಯನ್ ಹೆಸರನ್ನು ಕೈಬಿಟ್ಟಿರುವುದು ನಮ್ಮ ಹೋರಾಟಕ್ಕೆ ಸಂದ ಜಯ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
47 ಹೊಸ ಜಾತಿಗಳ ಸೃಷ್ಟಿ ಮತಾಂತರಕ್ಕೆ ಇಂಬು ನೀಡುವ ಜತೆಗೆ ಭವಿಷ್ಯದಲ್ಲಿ ಮೀಸಲು ವ್ಯವಸ್ಥೆಯನ್ನು ಛಿದ್ರಗೊಳಿಸುವ ಅಪಾಯಕಾರಿ ನಡೆಯಾಗಿತ್ತು. ನಾವು ನಡೆಸಿದ ಹೋರಾಟಕ್ಕೆ ಮಣಿದು ಆಯೋಗ ಎರಡು ದಿನಗಳ ಹಿಂದೆ 33 ಜಾತಿಗಳನ್ನು, ಇದೀಗ ಪರಿಶಿಷ್ಟ ಜಾತಿಗಳಲ್ಲಿ ಸೇರ್ಪಡೆಯಾಗಿದ್ದ 14 ಜಾತಿಗಳನ್ನು ಕೈ ಬಿಟ್ಟಿದೆ. ಒಟ್ಟಾರೆಯಾಗಿ ನಮ್ಮ ಹೋರಾಟಕ್ಕೆ ಜಯ ದೊರೆತಿದೆ. ಇನ್ನಾದರೂ ಯಾವುದೇ ಅಪಸವ್ಯವಿಲ್ಲದೇ ಆಯೋಗ ಸಮೀಕ್ಷೆ ನಡೆಸಲಿ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಲಿ ಎಂದು ಸುನಿಲ್ ಕುಮಾರ್ ತಿಳಿಸಿದ್ದಾರೆ.
ಆಯೋಗಕ್ಕೆ ಮನವಿ
ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ 14 ಜಾತಿಗಳನ್ನು ಸೇರಿಸಬಾರದು ಎಂದು ಬಿಜೆಪಿ ನಿಯೋಗ ಆಯೋಗಕ್ಕೆ ಮನವಿ ಮಾಡಿಕೊಂಡಿತ್ತು. ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ, ರಾಜ್ಯ ಬಿಜೆಪಿ ಕಾರ್ಯದರ್ಶಿ, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರು ಸೆ. 23ರಂದು ಆಯೋಗದ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಆದಿ ಆಂಧ್ರ ಕ್ರಿಶ್ಚಿಯನ್, ಆದಿ ದ್ರಾವಿಡ ಕ್ರಿಶ್ಚಿಯನ್, ಬುಡುಗ ಜಂಗಮ ಕ್ರಿಶ್ಚಿಯನ್, ಲಮಾಣಿ ಕ್ರಿಶ್ಚಿಯನ್, ಮಾದಿಗ ಕ್ರಿಶ್ಚಿಯನ್, ಮಾಲಾ ಕ್ರಿಶ್ಚಿಯನ್, ವಡ್ಡ ಕ್ರಿಶ್ಚಿಯನ್, ಆದಿ ಕರ್ನಾಟಕ ಕ್ರಿಶ್ಚಿಯನ್, ಬಂಜಾರ ಕ್ರಿಶ್ಚಿಯನ್, ಹೊಲೆಯ ಕ್ರಿಶ್ಚಿಯನ್, ಲಂಬಾಣಿ ಕ್ರಿಶ್ಚಿಯನ್, ಮಹಾರ್ ಕ್ರಿಶ್ಚಿಯನ್, ಪರಯ ಕ್ರಿಶ್ಚಿಯನ್, ವಾಲ್ಮೀಕಿ ಕ್ರಿಶ್ಚಿಯನ್ ಜಾತಿಗಳ ಹೆಸರನ್ನು ಕೈಬಿಡುವಂತೆ ಆಗ್ರಹಿಸಿದ್ದರು.

























