ಕಾರ್ಕಳ : ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ನವೀಕೃತಗೊಂಡಿರುವ ಮಿಯ್ಯಾರು ಕೈಗಾರಿಕಾ ಪ್ರದೇಶದ ಬಳಿಯ ಕೆರೆಯನ್ನು ಸೆ. 9ರಂದು ಶಾಸಕ ವಿ. ಸುನಿಲ್ ಕುಮಾರ್ ಕೆರೆಗೆ ಹಾಲು ಸುರಿದು ಬಾಗಿನ ಅರ್ಪಿಸುವ ಮೂಲಕ ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಶಾಸಕರು, ಕೆರೆಯಲ್ಲಿ ಬೃಹತ್ ಪ್ರಮಾಣದಲ್ಲಿ ತುಂಬಿದ್ದ ಹೂಳನ್ನು ರಾಕ್ ಸಿಟಿ ವತಿಯಿಂದ ಮೇಲಕ್ಕೆತ್ತಿ ನವೀಕೃತಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಕೆರೆಯನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಪಂಚಾಯತ್ ಹಾಗೂ ಸ್ಥಳೀಯರು ವಹಿಸಿಕೊಳ್ಳಬೇಕೆಂದರು.
ರೋಟರಿ ಸಹಾಯಕ ಗವರ್ನರ್ ವಿಘ್ನಶ್ ಶೆಣೈ ಮಾತನಾಡಿ, ರೋಟರಿ ಯೋಜನೆಗಳಲ್ಲೊಂದಾದ ಕೆರೆಗಳ ಸಂರಕ್ಷಣೆಯಡಿ ಸುಂದರ ಕೆರೆಯನ್ನು ನಿರ್ಮಿಸಿಕೊಟ್ಟು ಸಂಸ್ಥೆಯು ಜಿಲ್ಲೆಗೆ ಮಾದರಿಯಾಗಿದೆ ಎಂದರು.
ಸಾಮಾಜಿಕ ಅರಣ್ಯ ಉಪ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಡಿ. ಎನ್. ಮಾತನಾಡಿ, ಕೆರೆಯ ನಿರ್ಮಾಣ ಮಾಡಿ ಸುತ್ತಲೂ ಗಿಡಗಳನ್ನು ನೆಟ್ಟು ಭವಿಷ್ಯಕ್ಕೆ ಒಳ್ಳೆಯ ಪರಿಸರವನ್ನು ನಿರ್ಮಿಸಲು ಹೊರಟಿರುವ ರೋಟರಿಯ ಕಾರ್ಯ ತತ್ಪರತೆಯನ್ನು ಕೊಂಡಾಡಿದರು.
ಮಿಯ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸನ್ಮತಿ ನಾಯಕ್, ರೋಟರಿ ಮಾಜಿ ಜಿಲ್ಲಾ ಗವರ್ನರ್ ಡಾ. ಭರತೇಶ್ ಆದಿರಾಜ್, ಗ್ರಾ. ಪಂ. ಮಾಜಿ ಅಧ್ಯಕ್ಷ ಗಿರೀಶ್ ಅಮೀನ್ ಉಪಸ್ಥಿತರಿದ್ದರು.
ರೋಟರಿ ಅಧ್ಯಕ್ಷ ಸುರೇಂದ್ರ ನಾಯಕ್ ಸ್ವಾಗತಿಸಿದರು, ಸದಸ್ಯರಾದ ಕೃಷ್ಣಪ್ಪ ಪ್ರಾರ್ಥಿಸಿದರು. ಸುಬ್ರಹ್ಮಣ್ಯ ಉಪಾಧ್ಯ ನಿರೂಪಿಸಿ, ಕಾರ್ಯದರ್ಶಿ ರಾಘವೇಂದ್ರ ಕಾಮತ್ ವಂದಿಸಿದರು.






















