ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ವಿಶೇಷವಾದ ಪೋಸ್ಟ್‌ವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಆರ್‌ಸಿಬಿ ಮೊದಲ ಬಾರಿ ಕಪ್ ಗೆದ್ದ ಮೇಲೆ ಸಂಭ್ರಮಾಚರಣೆಯ ಸಂದರ್ಭದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿತ್ತು. ಈ ದುರಂತದಲ್ಲಿ 11 ಜನ ಮೃತಪಟ್ಟಿದ್ದರು. ಇದಾದ ಮೇಲೆ ಆರ್‌ಸಿಬಿಯು ಯಾವುದೇ ಪೋಸ್ಟ್ ಹಂಚಿಕೊಂಡಿರಲಿಲ್ಲ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಆರ್‌ಸಿಬಿ ಹಂಚಿಕೊಂಡಿದೆ.
ಪೋಸ್ಟ್‌ನಲ್ಲಿ, ಚಿನ್ನಸ್ವಾಮಿ ಸ್ಟೇಡಿಯಂ ಒಂದು ಕಾಲದಲ್ಲಿ ಅಭಿಮಾನಿಗಳು ಹೆಚ್ಚು ಸಂಭ್ರಮದಿಂದ ಕಳೆದ ಸ್ಥಳ. ಆದರೆ ಜೂ.4ರಂದು ಸಂಭವಿಸಿದ ದುರ್ಘಟನೆಯಿಂದ ಆ ಸಂಭ್ರಮ ಮರೆಯಾಗಿದೆ. ಆ ದಿನ ನಮ್ಮ ಹೃದಯ ಚೂರಾಯಿತು. ಈ ಸಂಕಟವನ್ನು ನಾವು ಮೂರು ತಿಂಗಳ ಕಾಲ ಮೌನವಾಗಿ ಅನುಭವಿಸಿದ್ದೇವೆ. ಈ ದುರ್ಘಟನೆಯಿಂದ ಸಾಕಷ್ಟು ಕಲಿತಿದ್ದೇವೆ. ಇದಕ್ಕಾಗಿಯೇ ನಾವು ಅಭಿಮಾನಿಗಳ ಜೊತೆ ನಿಲ್ಲಲು ನಿರ್ಧರಿಸಿದ್ದೇವೆ. ಇದೇ ಕಾರಣಕ್ಕೆ ಅಭಿಮಾನಿಗಳಿಗಾಗಿ ಕೇರ್ ಸೆಂಟರ್ ತೆರೆಯಲು ನಿರ್ಧರಿಸಲಾಗಿದೆ. ಈ ಮೂಲಕ ಕರ್ನಾಟಕದ ಹೆಮ್ಮೆಯಾಗಿ ಮುಂದುವರಿಯುತ್ತೇವೆ. ಈ ಬಗ್ಗೆ ಹೆಚ್ಚಿನ ವಿವರ ಶೀಘ್ರದಲ್ಲೇ ಹಂಚಿಕೊಳ್ಳುತ್ತೇವೆ ಎಂದು ಹೇಳಿದೆ.





















