ಇನ್ನೆಷ್ಟು ಗುಂಡಿ ಅಗೆಯುತ್ತೀರಾ? – ಸುನಿಲ್ ಕುಮಾರ್ ಪ್ರಶ್ನೆ
ಬೆಂಗಳೂರು : ಅಧಿವೇಶನದ ಎರಡನೇ ದಿನವಾದ ಇಂದು ವಿಧಾನಸಭೆಯಲ್ಲಿ ಧರ್ಮಸ್ಥಳ ಪ್ರಕರಣ ಪ್ರತಿಧ್ವನಿಸಿ ಗದ್ದಲಕ್ಕೆ ಕಾರಣವಾಯಿತು. ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಸುನೀಲ್ ಕುಮಾರ್ ಈ ವಿಚಾರವನ್ನು ಪ್ರಸ್ತಾಪಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ತನಿಖೆಗೆ ನಮ್ಮ ಆಕ್ಷೇಪ ಇಲ್ಲ. ಆದರೆ, ಹಿಂದೂ ಧಾರ್ಮಿಕ ಕೇಂದ್ರ ಟಾರ್ಗೆಟ್ ಮಾಡಲಾಗಿದೆ. ಅಪಪ್ರಚಾರ ನಡೆಯುತ್ತಿದೆ. ಅನಾಮಿಕ, ಐದು ಗುಂಡಿ, ಹತ್ತು ಗುಂಡಿ ಅಂತ ಹೇಳ್ತಾ 13 ಗುಂಡಿ ಆಗಿದೆ. ಊಹಾಪೋಹಗಳಿಗೆ ಸರ್ಕಾರ ತೆರೆ ಎಳೆಯಬೇಕು. ಧಾರ್ಮಿಕ ನಂಬಿಕೆ ಮೇಲೆ ಅಪಪ್ರಚಾರ ಮಾಡುತ್ತಿರುವವರ ಮೇಲೆ ಕ್ರಮ ಆಗಬೇಕು. ತನಿಖೆ ಎಲ್ಲಿವರೆಗೆ ಬಂದಿದೆ? ಇನ್ನೆಷ್ಟು ಗುಂಡಿ ತೆಗಿಯುತ್ತೀರಾ? ಎಂಬುದನ್ನು ಗೃಹ ಸಚಿವರು ಸ್ಪಷ್ಟನೆ ಕೊಡಬೇಕು ಎಂದು ಸುನೀಲ್ ಕುಮಾರ್ ಆಗ್ರಹಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ಗೃಹ ಸಚಿವ ಪರಮೇಶ್ವರ್ ತನಿಖೆ ನಡೆಯುತ್ತಿದೆ, ತನಿಖೆ ಮಧ್ಯೆ ನಾವು ಮಧ್ಯ ಪ್ರವೇಶ ಮಾಡಲ್ಲ. ತನಿಖೆ ಒಂದು ಹಂತಕ್ಕೆ ಬಂದ ನಂತರ ವರದಿ ಕೊಡುತ್ತಾರೆ. ಆ ಬಳಿಕ ನಾನು ಪೂರ್ಣ ಉತ್ತರ ಕೊಡುತ್ತೇನೆ ಎಂದರು. ಆದರೆ ಪರಮೇಶ್ವರ್ ಉತ್ತರಕ್ಕೆ ಬಿಜೆಪಿ ಸದಸ್ಯರು ಒಗ್ಗಟ್ಟಾಗಿ ವಿರೋಧ ವ್ಯಕ್ತಪಡಿಸಿ, ಸ್ಪಷ್ಟೀಕರಣ ಕೊಡಬೇಕು, ಇನ್ನೂ ಎಷ್ಟು ಗುಂಡಿ ಅಗೆಯುತ್ತೀರಾ ಹೇಳಿ? ಅಪಪ್ರಚಾರ ನಿಲ್ಲಿಸಿ, ಸುಳ್ಳುಪ್ರಚಾರ ಇದು, ಪ್ರಕರಣದ ಚರ್ಚೆಗೆ ಅವಕಾಶ ಕೊಡಿ ಅಂತ ಬಿಜೆಪಿ ಸದಸ್ಯರು ಆಗ್ರಹಿಸಿದ್ರರು. ಈ ವೇಳೆ ಸದನದಲ್ಲಿ ಗದ್ದಲ ಜೋರಾಗಿದ್ದು, ಮಧ್ಯಪ್ರವೇಶ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ನಾವು ಯಾರ ಪರವೂ ಇಲ್ಲ, ನಾವು ಸತ್ಯದ ಪರ ಎಂದರು. ಚರ್ಚೆಗೆ ಈಗ ಅವಕಾಶ ಕೊಡಿ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದರೆ, ಮಧ್ಯಂತರ ವರದಿ ಪಡೆದುಕೊಂಡು ಕ್ಲಾರಿಟಿ ಕೊಡಿ. ಇನ್ನೊಬ್ಬ ಬಂದು ಗುಂಡಿ ಅಗೆಯಬೇಕು ಅಂತಾನೆ, ಅಗೆಯುತ್ತೀರಾ? ಎಂದು ಸುನೀಲ್ ತಿರುಗೇಟು ನೀಡಿದರು.
ಮತ್ತೆ ಉತ್ತರ ಕೊಟ್ಟ ಪರಮೇಶ್ವರ್, ಎಸ್‌ಐಟಿ ತನಿಖೆ ಮುಗಿಯುವವರೆಗೂ ನಾವು ಮಧ್ಯಪ್ರವೇಶ ಮಾಡಲ್ಲ, ತನಿಖೆ ನಂತರ ವರದಿ ಪಡೆಯುತ್ತೇವೆ ಎಂದು ಸ್ಪಷ್ಟನೆ ನೀಡಿದರು. ನಿಯಮ 69ರಡಿ ಚರ್ಚೆಗೆ ಅವಕಾಶ ನೀಡುವಂತೆ ಬಿಜೆಪಿ ಮನವಿ ಮಾಡಿದೆ.






























































