ಕಾರ್ಕಳ : ಸ್ವಚ್ಛತೆ ಬಗ್ಗೆ ಜಾಗೃತಿ, ಅರಿವು ಮೂಡಿಸುವ ಕಾರ್ಯ, ಅಭಿಯಾನ, ಗೋಡೆ ಬರಹ, ಭಾಷಣ, ಮತ್ತೊಂದು ಮಗದೊಂದು ಹೀಗೆ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಸ್ವಚ್ಛತೆಗಾಗಿ ಸರಕಾರ ಕೋಟಿಗಟ್ಟಲೆ ಹಣ ವ್ಯಯ ಮಾಡುತ್ತಿದೆ. ಇಷ್ಟೆಲ್ಲ ಆಗುತ್ತಿದ್ದರೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವ ಬೇಜವಾಬ್ದಾರಿತನಕ್ಕೆ ಮಾತ್ರ ಕಡಿವಾಣ ಬಿದ್ದಿಲ್ಲ. ಇದಕ್ಕೆ ಕಾರ್ಕಳ ನಗರವೂ ಹೊರತಾಗಿಲ್ಲ.
ಗೋಮಟೇಶ್ವರ ಬೆಟ್ಟದ ಬಳಿ ಕಸದ ರಾಶಿ
ಕಾರ್ಕಳದ ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ಒಂದಾದ ಗೋಮಟೇಶ್ವರ ಬೆಟ್ಟಕ್ಕೆ ಪ್ರತಿ ನಿತ್ಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಂತಹ ಪ್ರೇಕ್ಷಣಿಯ ತಾಣದ ಸುತ್ತ ಕಸದ ರಾಶಿಗಳೇ ತುಂಬಿರುವುದು ದುರಂತ. ಸಾರ್ವಜನಿಕರು, ಪ್ರವಾಸಿಗರು ಎಲ್ಲೆಂದರಲ್ಲಿ ಕಸ ಬಿಸಾಡುತ್ತಿದ್ದು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕಠಿಣ ಕ್ರಮ ವಹಿಸದೆ ಇರುವುದು ವಿಷಾದನೀಯ. ಅಲ್ಲದೆ ಮಳೆಯ ನೀರಿಗೆ ಕಸಗಳೆಲ್ಲಾ ತೇಲಿ ಬರುತ್ತಿದ್ದು ರೋಗ ರುಜಿನಕ್ಕೆ ದಾರಿ ಮಾಡಿಕೊಡುತ್ತಿದೆ.
ಸ್ವಚ್ಛ ಕಾರ್ಕಳ ಪರಿಕಲ್ಪನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಹತ್ತಾರು ಸಂಘ-ಸಂಸ್ಥೆಗಳು ಅವಿರತವಾಗಿ ಶ್ರಮಿಸುತ್ತಿದೆ. ಕಾರ್ಕಳ ಸುಂದರ ನಗರವಾಗಬೇಕೆಂಬ ಕಾಳಜಿಯಲ್ಲಿ ನೂರಾರು ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂಥವರ ಮಧ್ಯೆ ಬೆರಳೆಣಿಕೆ ಮಂದಿ ನಗರದ ಸೌಂದರ್ಯ ಹಾಳುಗೆಡವುತ್ತಿರುವುದು ವಿಪರ್ಯಾಸವೇ ಸರಿ. ಇವರ ಬಗ್ಗೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುವುದಾದರೂ ಯಾವಾಗ ? ಸಾರ್ವಜನಿಕರು ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಾಗ ಒಮ್ಮೆಗೆ ಸ್ವಚ್ಚತೆಯ ಕೆಲಸ ಅಥವಾ ಕಸ ಎಸೆದವರಿಗೆ ದಂಡ ಅಳವಡಿಕೆ ಕ್ರಮ ಕೈಗೊಳ್ಳುತ್ತಾರೆ ಹೊರತು ಅದರ ನಿರಂತರತೆಯನ್ನು ಕಾಯ್ದುಕೊಳ್ಳುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯತನ ಏಕೆ ಎಂಬುದು ಪ್ರಶ್ನಾರ್ಥಕವಾಗಿದೆ.

ಕ್ರಮ ಅಗತ್ಯ
ಎಲ್ಲಿಂದಲೋ ತಂದು ಇಲ್ಲಿ ಕಸ ಸುರಿದು ಪರಿಸರ ಹಾಳುಗೆಡುವವರ ವಿರುದ್ಧ ಪುರಸಭೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸುತ್ತಾರೆ. ಸ್ವಚ್ಛತೆಗೆ ಆದ್ಯತೆ ನೀಡುವುದರೊಂದಿಗೆ ಪುರಸಭೆ ಕಸ ಬಿಸಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸಿಕ್ಕ ಸಿಕ್ಕಲ್ಲಿ ಕಸ ಬಿಸಾಡುವ, ತ್ಯಾಜ್ಯ ಸುರಿಯುವ ಅಪ್ಪಟ ಅನಾಗರಿಕರಂತೆ ವರ್ತಿಸುವವರ ಮೇಲೆ ದಂಡ ಹಾಕದ ಹೊರತು ಪರಿಸರವನ್ನು ಸ್ವಚ್ಛವಾಗಿಡುವುದು ಅಸಾಧ್ಯದ ಮಾತು. ಕೇವಲ ಜಾಗೃತಿ ಮೂಡಿಸಿದಲ್ಲಿ ಪರಿಣಾಮವಾಗದು. ಪಂಚಾಯತ್ ವ್ಯಾಪ್ತಿಯಲ್ಲಿ ಪಿಡಿಒಗಳು, ಪುರಸಭೆ ವ್ಯಾಪ್ತಿಯಲ್ಲಿ ಮುಖ್ಯಾಧಿಕಾರಿ, ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು ದಂಡ ವಿಧಿಸುವ ಅಧಿಕಾರ ಹೊಂದಿದ್ದು, ಪರಿಸರ ಸ್ವಚ್ಛವಾಗಿಟ್ಟುಕೊಳ್ಳದವರ ವಿರುದ್ಧ ದೊಡ್ಡ ಮೊತ್ತದ ದಂಡವೇ ವಿಧಿಸಬೇಕಾಗಿದೆ. ಪೊಲೀಸರು ಇಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕೇಸ್ ಜಡಿಯಬೇಕಾಗಿದೆ. ಈ ಮೂಲಕ ಸ್ವಚ್ಛತೆಯ ಪಾಠ ತಿಳಿಸಿಕೊಡುವ ಕೆಲಸವಾಗಬೇಕಿದೆ.































