ಎರಡು ತಿಂಗಳ ಕಾಲ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ

ಉಡುಪಿ : ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆ ಅನ್ವಯ ರಾಜ್ಯ ಸರಕಾರದ ಅಧಿಸೂಚನೆಯಂತೆ ಜಿಲ್ಲೆಯಲ್ಲಿ ಯಾವುದೇ ಬಲೆಗಳನ್ನು/ಸಾಧನಗಳನ್ನು ಉಪಯೋಗಿಸಿ ಮೀನುಗಾರಿಕೆಗಾಗಿ ಯಾಂತ್ರೀಕೃತ ದೋಣಿಗಳ ಮತ್ತು 10 ಅಶ್ವಶಕ್ತಿ (ಹೆಚ್.ಪಿ.) ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಇನ್‌ಬೋರ್ಡ್ ಅಥವಾ ಔಟ್‌ಬೋರ್ಡ್ ಯಂತ್ರಗಳನ್ನು ಅಳವಡಿಸಿರುವ ಸಾಂಪ್ರದಾಯಿಕ ದೋಣಿಗಳ ಮುಖಾಂತರ ಕೈಗೊಳ್ಳುವ ಮೀನುಗಾರಿಕೆ ಚಟುವಟಿಕೆಯನ್ನು 2025 ರ ಜೂ. 1 ರಿಂದ ಜು. 31 ರ ವರೆಗೆ ಒಟ್ಟು 61 ದಿನಗಳ ಕಾಲ ನಿಷೇಧಿಸಲಾಗಿದೆ. ದೋಣಿಯನ್ನು ಸಾಗಿಸುವ ಉದ್ದೇಶಕ್ಕಾಗಿ 10 ಅಶ್ವಶಕ್ತಿಯವರೆಗಿನ ಸಾಮರ್ಥ್ಯದ ಮೋಟರೀಕೃತ ದೋಣಿ ಹಾಗೂ ಸಾಂಪ್ರದಾಯಕ/ ನಾಡದೋಣಿಗಳು ಕರಾವಳಿ ಮೀನುಗಾರಿಕೆಯನ್ನು ಕೈಗೊಳ್ಳಲು ಅನುಮತಿ ನೀಡಲಾಗಿದೆ.
ಮೀನುಗಾರಿಕೆ ನಿಷೇಧ ಹಿನ್ನೆಲೆ ಕಡ್ಡಾಯವಾಗಿ ಎಲ್ಲ ಬೋಟುಗಳು ಮೇ 31 ರೊಳಗಾಗಿ ಬಂದರು ಪ್ರವೇಶ ಮಾಡಬೇಕು. ತದನಂತರ ಬಂದರು ಪ್ರವೇಶ ಮಾಡುವ ದೋಣಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮೀನುಗಾರಿಕೆ ನಿಷೇಧಿಸಿದ ಸರಕಾರಿ ಆದೇಶವನ್ನು ಉಲ್ಲಂಘಿಸುವ ಮೀನುಗಾರಿಕಾ ದೋಣಿಗಳು ಮತ್ತು ಮೀನುಗಾರರು ಕರ್ನಾಟಕ ಕಡಲ ಮೀನುಗಾರಿಕೆ ಕಾಯ್ದೆ 1986 ರಲ್ಲಿ ವಿಧಿಸಲಾಗಿರುವ ದಂಡನೆಗಳಿಗೆ ಹೊಣೆಯಾಗುವುದಲ್ಲದೇ ಒಂದು ವರ್ಷದ ಅವಧಿಗೆ ಡೆಲಿವರಿ ಪಾಯಿಂಟ್‌ನಲ್ಲಿ ರಾಜ್ಯ ಮಾರಾಟಕರ ರಹಿತ ಡೀಸೆಲ್ ಪಡೆಯಲು ಅನರ್ಹರಾಗುತ್ತಾರೆ. ಈ ಆದೇಶವನ್ನು ಕರಾವಳಿ ಪ್ರದೇಶದ ಎಲ್ಲಾ ಮೀನುಗಾರರು ಪಾಲಿಸುವಂತೆ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.



































































































error: Content is protected !!
Scroll to Top