ಮೈಕ್ರೋ ಫೈನಾನ್ಸ್‌ ಆರ್‌ಬಿಐ ಮಾರ್ಗಸೂಚಿಗಳನ್ನು ಪಾಲಿಸಬೇಕು – ಜಿಲ್ಲಾಧಿಕಾರಿ ಎಚ್ಚರಿಕೆ

ಉಡುಪಿ : ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಫೈನಾನ್ಸ್ ಗಳು, ಲೇವಾದೇವಿ ವ್ಯವಹಾರಸ್ಥರು, ಮೈಕ್ರೋ ಫೈನಾನ್ಸ್ ಹಣಕಾಸು ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕ್‌ ನೀಡುವ ಮಾರ್ಗಸೂಚಿಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಎಚ್ಚರಿಕೆ ನೀಡಿದರು. ಅವರು ಜ. 30ರಂದು ಜಿಲ್ಲಾ ಪಂಚಾಯತ್‌ ನ ಡಾ. ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ನಿಯಂತ್ರಣದ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ರಾಜ್ಯದಾದ್ಯಂತ ಮೈಕ್ರೋ ಫೈನಾನ್ಸ್‌ಗಳಲ್ಲಿ ಸಾಲ ಪಡೆದ ಗ್ರಾಹಕರಿಗೆ ಕಿರುಕುಳ ನೀಡುವಂತಹ ಪ್ರಕರಣಗಳು ಮಾಧ್ಯಮಗಳಲ್ಲಿ ಕೇಳಿ ಬರುತ್ತಿವೆ. ಇದಕ್ಕೆಲ್ಲ ಕಾರಣ ಮಾರ್ಗಸೂಚಿಗಳು ಹಾಗೂ ನಿಯಮಗಳ ಪಾಲಿಸದೇ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮೈಕ್ರೋ ಫೈನಾನ್ಸ್‌ ಸಾಲ ಕೊಡುವ ಮುನ್ನ ಸಾಲಗಾರರ ಕುಟುಂಬದ ಆದಾಯ ಸೇರಿದಂತೆ ಮತ್ತಿತರ ಪೂರ್ವಾಪರಗಳನ್ನು ಪರಿಶೀಲನೆ ಮಾಡಿ, ಅವರ ಆದಾಯದ ಶೇ. 50 ರಷ್ಟು ಮಾತ್ರ ಸಾಲ ನೀಡಬೇಕು. ಆದರೆ, ಅವರು ಸಾಲ ತೆಗೆದುಕೊಳ್ಳುವ ಸಾಮರ್ಥ್ಯ ನೋಡದೇ ಸಾಲವನ್ನು ನೀಡುವ ಪ್ರಮೇಯವೂ ಇದೆ. ಇವುಗಳಿಗೆ ಆಸ್ಪದ ನೀಡಬಾರದು. ಸಾಲ ನೀಡುವವರು ಹಾಗೂ ತೆಗೆದುಕೊಳ್ಳುವವರು ಇಬ್ಬರೂ ಸಹ ಆರ್ಥಿಕ ಶಿಸ್ತನ್ನು ಪಾಲಿಸಬೇಕು ಎಂದರು.
3 ಲಕ್ಷ ರೂ. ಸಾಲ
ಆರ್‌ಬಿಐ ಮಾರ್ಗಸೂಚಿಯ ಪ್ರಕಾರ ಮೈಕ್ರೋ ಫೈನಾನ್ಸ್‌ಗಳು 3 ಲಕ್ಷ ರೂ. ವರೆಗೆ ಮಾತ್ರ ಸಾಲ ನೀಡಲು ಅವಕಾಶವಿದೆ. ಸಾಲ ಮರುಪಾವತಿಯನ್ನು ಕಾನೂನಿನ ಅನ್ವಯ ಕೈಗೊಳ್ಳಬೇಕು. ಕಾನೂನನ್ನು ಉಲ್ಲಂಘಿಸಿ, ದೌರ್ಜನ್ಯ, ಕೆಟ್ಟ ಪದಗಳಲ್ಲಿ ಬೈಯುವುದು, ದಬ್ಬಾಳಿಕೆ, ಕಿರುಕುಳ ನೀಡುವುದು ಮಾಡಿದ್ದಲ್ಲಿ ಅಂತಹವರ ವಿರುದ್ಧ ಪೊಲೀಸ್ ನವರು ಸೊಮೋಟೋ ಪ್ರಕರಣ ದಾಖಲಿಸಿಕೊಳ್ಳಲು ಅವಕಾಶವಿದೆ ಎಂದು ಡಿಸಿ ಎಚ್ಚರಿಸಿದರು.
ಸಾಲ ನೀಡಿದ ಫೈನಾನ್ಸ್‌ನವರ ವಿರುದ್ಧ ತಿರುಗಿ ಬೀಳುವುದು ಅಥವಾ ಸಾಲ ಪಡೆದವರ ಮೇಲೆ ಫೈನಾನ್ಸ್‌ನವರು ಕಾನೂನು ಉಲ್ಲಂಘಿಸಿ ತಿರುಗಿ ಬಿದ್ದಲ್ಲಿ ಅಥವಾ ಮೈಕ್ರೋ ಫೈನಾನ್ಸ್ ಸಂಬಂಧಿತ ಕಿರುಕುಳ, ದೂರುಗಳನ್ನು ಕಂಟ್ರೋಲ್ ರೂಂ ಸಂಖ್ಯೆ : 0820-2574802 ಗೆ ಕರೆ ಮಾಡಿ ತಿಳಿಸಬಹುದು ಎಂದು ಡಿಸಿ ಹೇಳಿದರು.
ಕಾನೂನಿನಡಿ ಕ್ರಮ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಮಾತನಾಡಿ, ಮೈಕ್ರೋ ಫೈನಾನ್ಸ್‌ಗಳಲ್ಲಿ ತೆಗೆದುಕೊಳ್ಳುವ, ಕೊಡುವ ವ್ಯವಹಾರಗಳು ಶಾಂತಿಯುತವಾಗಿ ಆಗಬೇಕು. ಸಾಲ ವಸೂಲಾತಿಗಾಗಿ ಫೈನಾನ್ಸ್ ಕಂಪನಿಗಳು ಬೆಳಗ್ಗೆ 9 ಕ್ಕೂ ಮುನ್ನ ಸಂಜೆ 6 ರ ಅನಂತರ ಸಾಲಗಾರರ ಮನೆಗೆ ಹೋಗಬಾರದು. ಯಾವುದೇ ರೀತಿಯ ದೌರ್ಜನ್ಯಗಳನ್ನು ನಡೆಸಬಾರದು. ಒಂದೊಮ್ಮೆ ಉಲ್ಲಂಘಿಸಿದ್ದಲ್ಲಿ ಅಂಹವರ ಮೇಲೆ ನಿರ್ದ್ಯಾಕ್ಷಿಣ್ಯವಾಗಿ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಹಾಯಕ ಕಮೀಷನರ್ ಮಹೇಶ್ಚಂದ್ರ, ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್, ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು, ವಿವಿಧ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.









error: Content is protected !!
Scroll to Top