ಕರುವಿನ ಬಾಲ ಕತ್ತರಿಸಿದ ಸುಳ್ಳು ಸುದ್ದಿ ಹರಡಿದ ವ್ಯಕ್ತಿ ವಿರುದ್ಧ ಕೇಸ್‌

ಉಡುಪಿ: ಮನೆಗೆ ಬಂದ ಸೇಲ್ಸ್‌ಮ್ಯಾನ್‌ ಕರುವಿನ ಬಾಲ ಕತ್ತರಿಸಿದ್ದಾನೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಡಿದ್ದ ವ್ಯಕ್ತಿಯ ವಿರುದ್ಧ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಂಡ್ಮಿ ಗ್ರಾಮದ ಭಗವತಿ ರಸ್ತೆಯಲ್ಲಿರುವ ಅನಿಲ್‌ ಮಯ್ಯ ಎಂಬವರ ಮನೆಗೆ ವಸ್ತುಗಳನ್ನು ಮಾರಾಟ ಮಾಡಲು ಬಂದ ಮತಾಂಧ ವ್ಯಕ್ತಿಯೊಬ್ಬ ಮನೆಯವರು ವಸ್ತುಗಳನ್ನು ನಿರಾಕರಿಸಿದಾಗ ಮನೆಯ ಆವರಣದೊಳಗೆ ಮೇಯಲು ಬಿಟ್ಟಿದ್ದ ಕರುವಿನ ಬಾಲ ಕತ್ತರಿಸಿ ವಿಕೃತಿ ಮೆರೆದಿದ್ದಾನೆ ಎಂಬ ಸುದ್ದಿಯನ್ನು ಬುಧವಾರ ಸೋಷಿಯಲ್‌ ಮೀಡಿಯಾದಲ್ಲಿ ಹರಿಯಬಿಡಲಾಗಿತ್ತು. ಈ ಕುರಿತು ಯಾವುದೇ ಎಫ್‌ಐಆರ್‌ ದಾಖಲಾಗದ ಹಿನ್ನೆಲೆಯಲ್ಲಿ ಕೋಟ ಪೊಲೀಸರು ತನಿಖೆ ನಡೆಸಿದಾಗ ಇದು ಸುಳ್ಳು ಸುದ್ದಿ ಎಂದು ಸಾಬೀತಾಗಿದೆ. ಅನಿಲ್‌ ಮಯ್ಯ ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವುದು ತಿಳಿದುಬಂದಿದೆ.
ಮನೆಗೆ ಸುಮಾರು 60 ವರ್ಷದ ವ್ಯಕ್ತಿಯೊಬ್ಬ ನೆರವು ಕೇಳಿಕೊಂಡು ಬಂದಿದ್ದರು. ಮನೆಯವರು ಏನನ್ನೂ ನೀಡದೆ ಅವರನ್ನು ವಾಪಸು ಕಳುಹಿಸಿದ್ದರು. ಬಳಿಕ ಕೊಟ್ಟಿಗೆಯಲ್ಲಿದ್ದ ಕರುವನ್ನು ಬಿಡಲು ಹೋದಾಗ ಅದರ ಬಾಲ ತುಂಡಾಗಿರುವುದು ಗಮನಕ್ಕೆ ಬಂದಿದೆ. ದನ ತುಳಿದಾಗ ಬಾಲ ತುಂಡಾಗಿರಬಹುದು ಎಂದು ಭಾವಿಸಿ ಮನೆಯವರು ಸುಮ್ಮನಿದ್ದರು. ಸಂಜೆ ಮನೆಗೆ ಬಂದ ಅನಿಲ್‌ ಮಯ್ಯ ಬಾಲ ತುಂಡಾಗಿರುವುದನ್ನು ರಾಜ್ಯದಲ್ಲಿ ಕೆಲ ದಿನಗಳಿಂದ ಗೋವುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ತಳಕು ಹಾಕಿ ಹಸುವಿನ ಬಾಲವನ್ನು ಮತಾಂಧ ವ್ಯಕ್ತಿ ಕತ್ತರಿಸಿದ್ದಾನೆ ಎಂದು ಫೋಟೊ ಸಹಿತ ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿ ಹರಡಿದ್ದರು.
ಈ ಸುದ್ದಿ ರಾಜ್ಯಾದ್ಯಂತ ಸಂಚಲನವುಂಟು ಮಾಡಿದ ಹಿನ್ನೆಲೆಯಲ್ಲಿ ಉನ್ನತ ಪೊಲೀಸ್‌ ಅಧಿಕಾರಿಗಳು ಅನಿಲ್‌ ಮಯ್ಯ ಮನೆಗೆ ಭೇಟಿ ತನಿಖೆ ನಡೆಸಿದಾಗ ನಿಜ ಸಂಗತಿ ತಿಳಿದುಬಂದಿದೆ. ಮನೆಯವರೇ ಬಾಲ ಕತ್ತರಿಸಿದ ಘಟನೆ ನಡೆದಿಲ್ಲ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅನಿಲ್‌ ಮಯ್ಯ ವಿರುದ್ಧ ಸುಳ್ಳು ಸುದ್ದಿ ಹರಡಿದ್ದಕ್ಕೆ ಸ್ವಯಂ ಪ್ರೇರಿತ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.









error: Content is protected !!
Scroll to Top