ಜ್ಞಾನಸುಧಾ ವಾರ್ಷಿಕೋತ್ಸವ – ಜ್ಞಾನಸಂಭ್ರಮ

ಕಾರ್ಕಳ : ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಕೌಟುಂಬಿಕ ಸಂಬಂಧಗಳಲ್ಲಿ ಬಿರುಕು ಮೂಡುತ್ತಿರುವ ಇಂತಹ ಕಾಲಘಟ್ಟದಲ್ಲಿ ಶಿಕ್ಷಣದ ಜೊತೆ ಜೊತೆಗೆ ವಿದ್ಯಾರ್ಥಿಗಳಲ್ಲಿ ಮಾನವೀಯ ಮತ್ತು ಜೀವನ ಮೌಲ್ಯಗಳನ್ನು ತುಂಬುವ ಕಾರ್ಯವನ್ನು ಜ್ಞಾನಸುಧಾ ಶಿಕ್ಷಣ ಸಂಸ್ಥೆ ಮಾಡುತ್ತಿದೆ ಎಂದು ತರಂಗ ವಾರ ಪತ್ರಿಕೆಯ ಸಂಪಾದಕಿ ಡಾ. ಯು. ಬಿ. ರಾಜಲಕ್ಷ್ಮೀ ಹೇಳಿದರು.
ಅವರು ಜ. 30ರಂದು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಜ್ಞಾನ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಹದಿಹರೆಯ ಎನ್ನುವುದು ವ್ಯಕ್ತಿತ್ವ ರೂಪಿಸುವ ಸಂಕ್ರಮಣ ಕಾಲ. ಯಶಸ್ಸಿಗೆ ತ್ಯಾಗ, ಶ್ರದ್ಧೆ, ಪರಿಶ್ರಮ ಅವಶ್ಯ. ಶಿಕ್ಷಣ ಪರಂಪರೆಗೆ ಅನನ್ಯ ಕೊಡುಗೆ ನೀಡಿರುವ ಜ್ಞಾನಸುಧಾ ಕಾರ್ಕಳದ ಸಂಸ್ಥೆ ಎನ್ನುವ ಹೆಮ್ಮೆ ನಮ್ಮದು ಎಂದು ಡಾ. ಯು.ಬಿ. ರಾಜಲಕ್ಷ್ಮೀ ಹೇಳಿದರು.

ವಕಾರಗಳು ವಿಕಾರವಾಗದೇ ಸಾಕಾರವಾಗಲಿ – ಶೇಖರ್‌ ಶೆಟ್ಟಿ
ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ಬಿ. ಶೇಖರ್ ಶೆಟ್ಟಿ, ವ ಕಾರಗಳಾದ ವಟು, ವಸನ, ವಿದ್ಯೆ, ವಿನಯ ಮತ್ತು ವಾಕ್ ವಿಕಾರವಾಗದೆ ಸಾಕಾರಾವಾದರೆ ಶ್ರೇಷ್ಟ ವ್ಯಕ್ತಿಗಳಾಗಲು ಸಾಧ್ಯ. ಯೋಜನೆ ಮತ್ತು ಸ್ವಯಂ ಮೌಲ್ಯಮಾಪನ ನಮ್ಮಲ್ಲಿರಬೇಕು. ಯಾರು ರಾತ್ರಿ ಮಲಗುವಾಗ, ಬೆಳಗ್ಗೆ ಏಳುವಾಗ ನಗು ಮುಖದಲ್ಲಿ ಇರುತ್ತಾರೋ ಅವರೇ ಸುಖಿಗಳು. ಹಾಗಿದ್ದಾಗಲೇ ಜೀವನ ಸಾರ್ಥಕ ಎಂದರು.

ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಅವರು ಸಂಸ್ಥೆ ನಡೆಸಲು ಹುದ್ದೆ ಮುಖ್ಯವಲ್ಲ. ಮನಸು ಮುಖ್ಯ. ಸಂಖ್ಯೆ ಮುಖ್ಯವಲ್ಲ, ಸಂಕಲ್ಪ ಮುಖ್ಯ. ಅಂತಹ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದ ಪರಿಶ್ರಮದಿಂದ ಜ್ಞಾನಸುಧಾ ಈ ಹಂತಕ್ಕೇರಿದೆ ಎಂದರು.

ಸನ್ಮಾನ
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಇಚ್ಚಿಸುವವರಿಗೆ ರಾಷ್ಟ್ರಮಟ್ಟದಲ್ಲಿ ನ್ಯಾಶನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿಯ ಪ್ರವೇಶಕ್ಕಾಗಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸಿದ ಎನ್.ಡಿ.ಎ. ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ರಾಜೇಂದ್ರ ಕೆ.ವಿ. ಮತ್ತು ಕೀರ್ತನಾ ಬಿ.ಡಿ. ದಂಪತಿ ಪುತ್ರ ಸಂಸ್ಥೆಯ ದ್ವಿತೀಯ ವಿಜ್ಞಾನ ವಿಭಾಗದ ಸರ್ವಜಿತ್ ಕೆ.ಆರ್. ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.

ವಿದ್ಯಾರ್ಥಿಗಳಿಂದ ನೆರವು
ಕಾರ್ಕಳ ಜ್ಞಾನಸುಧಾ ಪ.ಪೂ. ಕಾಲೇಜಿನ ವಾರ್ಷಿಕೋತ್ಸವ ಜ್ಞಾನ ಸಂಭ್ರಮ-2024ದಲ್ಲಿ ಗಳಿಸಿದ ಆದಾಯದ ಒಂದು ಪಾಲನ್ನು ಸಮಾಜಮುಖಿ ಕಾರ್ಯಕ್ರಮಕ್ಕೆ ವಿನಿಯೋಗಿಸಬೇಕೆಂಬ ಡಾ. ಸುಧಾಕರ್ ಶೆಟ್ಟಿಯವರ ಆಶಯದಂತೆ, ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ವಾರ್ಷಿಕ ಕ್ರೀಡಾಕೂಟದ ಸಂದರ್ಭ ಆಯೋಜಿಸಿದ್ದ ‘ವ್ಯವಹಾರದಲ್ಲಿ ಕಲಿಕೆ ಮತ್ತು ಗಳಿಕೆ’ ಎಂಬ ವಿನೂತನ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಿಗೆ ಬಂದ ಲಾಭದಲ್ಲಿ ರೂ.15 ಸಾವಿರವನ್ನು ಅನಾರೋಗ್ಯದಿಂದ ಬಳಲುತ್ತಿರುವ ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಮಂಗಳಪಾದೆಯ ಮಂಜುನಾಥ್ ದೇವಾಡಿಗ ಹಾಗೂ ಪ್ರಮಿಳಾ ದೇವಾಡಿಗ ದಂಪತಿಯ ಮಗನಾದ 14 ವರ್ಷಪ್ರಾಯದ ಚರಣ್ ಇವರಿಗೆ ಮುಖ್ಯ ಅತಿಥಿಗಳಿಂದ ಹೆತ್ತವವರ ಮೂಲಕ ಹಸ್ತಾಂತರಿಸಿಲಾಯಿತು.

ಜ್ಞಾನಸುಧಾ ಪತ್ರಿಕೆ – 38 ಬಿಡುಗಡೆ
ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ತ್ರೈಮಾಸಿಕ ಪತ್ರಿಕೆಯಾದ ಜ್ಞಾನಸುಧಾ ಪತ್ರಿಕೆ ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಕಾಲೇಜಿನ ವಾರ್ಷಿಕ ವರದಿಯನ್ನು ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪ್ರಜ್ವಲ್ ಕುಲಾಲ್, ವಿದ್ಯಾರ್ಥಿಗಳ ಸಾಂಸ್ಕೃತಿಕ ಸಾಧನೆಯ ಪಟ್ಟಿಯನ್ನು ಭೌತಶಾಸ್ತ್ರ ಉಪನ್ಯಾಸಕ ಚಂದ್ರಕಾಂತ್, ಕ್ರೀಡಾಸಾಧಕರ ಪಟ್ಟಿಯನ್ನು ದೈ.ಶಿ. ನಿರ್ದೇಶಕಿ ಸೌಜನ್ಯ ಹೆಗ್ಡೆ ವಾಚಿಸಿದರು.

ವೇದಿಕೆಯಲ್ಲಿ ಉಪಪ್ರಾಂಶುಪಾಲ ಸಾಹಿತ್ಯ, ಉಷಾ ರಾವ್ ಯು., ವಿದ್ಯಾರ್ಥಿ ನಾಯಕರಾದ ಮಯೂರ್ ಎಂ. ಗೌಡ ಮತ್ತು ಅನನ್ಯ ವಿ. ಶೆಟ್ಟಿ ಉಪಸ್ಥಿತರಿದ್ದರು. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿಹಣಾಧಿಕಾರಿ ದಿನೇಶ್ ಎಂ. ಕೊಡವೂರು ಸ್ವಾಗತಿಸಿ, ಆಂಗ್ಲಭಾಷಾ ಉಪನ್ಯಾಸಕಿ ಕು. ದರ್ಶಿನಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.































































































error: Content is protected !!
Scroll to Top