ಉಡುಪಿ : ನಕ್ಸಲೈಟ್ ಅನ್ನು ಬೇರು ಸಮೇತ ಕಿತ್ತು ಹಾಕಬೇಕು. ಇದು ರಾಜ್ಯ ಹಾಗೂ ಕೇಂದ್ರ ಸರಕಾರಗಳ ನಿಲುವು ಆಗಿದೆ ಎಂದು ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಉಡುಪಿಯ ಗೃಹ ಕಚೇರಿಯಲ್ಲಿ ಶನಿವಾರ ಮಾತನಾಡಿದ ಸಚಿವರು, ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಂ ಗೌಡನನ್ನು ಎನ್ ಕೌಂಟರ್ ಮಾಡಲಾಗಿದೆ. ಎನ್‌ಕೌಂಟರ್ ನಕಲಿ ಎಂದು ಅನುಮಾನ ಪಡುವುದು ಬೇಡ. ಈ ಕುರಿತು ನ್ಯಾಯಾಂಗ ತನಿಖೆಯ ಅವಶ್ಯಕತೆ ಇಲ್ಲ. ಅಗತ್ಯವಿದ್ದರೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು ಎಂದವರು ತಿಳಿಸಿದರು.
ಕಾನೂನು ಪ್ರಕಾರ ಕಾನೂನು ಚೌಕಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ವಿಕ್ರಮ್ ಗೌಡ ವಿರುದ್ಧ ಹಲವು ಪ್ರಕರಣಗಳು ಇದ್ದವು. ನಕ್ಸಲರನ್ನು ಕಟ್ಟಿ ಹಾಕಬೇಕು ಎಂಬುದು ಸರಕಾರದ ನಿರ್ಧಾರ. ವಿಕ್ರಂ ಗೌಡ ಬಳಿ ಕೂಡ ಶಸ್ತ್ರಾಸ್ತ್ರಗಳು ಇದ್ದವು. ವಿಕ್ರಂ ಗೌಡ ಒಂದು ಬಾರಿ ಫೈರಿಂಗ್ ಮಾಡಿದ್ದರಿಂದ ಪ್ರತಿ ದಾಳಿ ಮಾಡದಿದ್ದರೆ ಪೊಲೀಸರ ಜೀವಕ್ಕೆ ಹಾನಿ ಆಗುತ್ತಿತ್ತು ಎಂದು ಲಕ್ಷ್ಮೀ ಹೇಳಿದರು.
ಎನ್‌ಕೌಂಟರ್ ಆದಾಗ ಪರ ವಿರೋಧ ಚರ್ಚೆ ಸಹಜವಾಗಿರುತ್ತದೆ. ಸರಕಾರ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿದೆ. ಸಂಶಯ ಇದ್ದವರಿಗೆ ನಾವು ಮತ್ತೆ ಸ್ಪಷ್ಟನೆ ಕೊಡಲು ತಯಾರಿದ್ದೇವೆ ಎಂದು ಲಕ್ಷ್ಮೀ ಸ್ಪಷ್ಟಪಡಿಸಿದರು.

ಭಿನ್ನಮತವಿಲ್ಲ
ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಮತ ಇಲ್ಲ. ಭಿನ್ನಮತ ಇರುವುದು ಬಿಜೆಪಿಯಲ್ಲಿ ಮಾತ್ರ. ಬಿಜೆಪಿ ಭಿನ್ನಮತದ ಬಗ್ಗೆ ಮಾಧ್ಯಮಗಳೇ ದಿನಾ ತೋರಿಸುತ್ತಿವೆ. ನಮ್ಮಲ್ಲಿ ಭಿನ್ನಮತ ಇಲ್ಲ ಅನ್ನೋದಕ್ಕೆ ಉಪಚುನಾವಣೆಯ ಫಲಿತಾಂಶವೇ ಉತ್ತರ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಅನುದಾನ ಕಡಿತವಿಲ್ಲ
ವಿಕಲಾಂಗ ಚೇತನ ಹಾಗೂ ಹಿರಿಯ ನಾಗರೀಕ ಇಲಾಖೆಯ ಅನುದಾನ ಕಡಿತ ಮಾಡಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಮ್ಮ ಇಲಾಖೆ 32 ಸಾವಿರ ಕೋಟಿ ರೂ.ಗಿಂತ ಹೆಚ್ಚಿನ ಗಾತ್ರದ ಬಜೆಟ್ ಹೊಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಾಂಗ ಚೇತನ ಯಾವುದೇ ಅನುದಾನವನ್ನು ನಾವು ಕಡಿತ ಮಾಡುವುದಿಲ್ಲ ಎಂದರು.
ಬಳ್ಳಾರಿ ಸರಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿ ಬಾಣಂತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಈ ವಿಚಾರವಾಗಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದೆ. ನಾನು ಮತ್ತು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಬಳ್ಳಾರಿ ಜಿಲ್ಲಾಡಳಿತದೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದರು.
ಮಾಧ್ಯಮಗಳಲ್ಲಿ ಸಂಪುಟ ವಿಸ್ತರಣೆ
ಸಚಿವ ಸಂಪುಟ ವಿಸ್ತರಣೆಯ ಚರ್ಚೆ ಕಾಂಗ್ರೆಸ್ ನಲ್ಲಿ ಇಲ್ಲ. ಮಾಧ್ಯಮಗಳಲ್ಲಿ ಮಾತ್ರ ಈ ಬಗ್ಗೆ ಚರ್ಚೆಯಾಗುತ್ತಿದೆ. ಸಂಪುಟ ವಿಸ್ತರಣೆ ನಿಜಾನಾ ? ಸುಳ್ಳಾ ? ಅಂತ ನೀವೇ ಸ್ಪಷ್ಟಪಡಿಸಬೇಕು. ಯಾರನ್ನು ತೆಗಿತೀರಾ ? ಯಾರನ್ನು ಕೂರಿಸ್ತೀರಾ ? ಈ ಚರ್ಚೆಗೆ ಮಾಧ್ಯಮಗಳೇ ಸ್ಪಷ್ಟನೆಯನ್ನು ಕೊಡಬೇಕೆಂದರು.
ಕಳಪೆ ಆಹಾರ ಪೂರೈಸಿದರೆ ಕ್ರಮ
ರಾಜ್ಯದಲ್ಲಿ ಅಂಗನವಾಡಿಗೆ 50 ವರ್ಷದ ಇತಿಹಾಸವಿದೆ. 70 ಸಾವಿರ ಅಂಗನವಾಡಿಯಲ್ಲಿ ಸುಮಾರು 35 ಲಕ್ಷ ಮಕ್ಕಳ ಪಾಲನೆ ಮಾಡಲಾಗುತ್ತದೆ. ಅಂಗನವಾಡಿಗಳಲ್ಲಿ ಕಳಪೆ ಅಕ್ಕಿ ವಿತರಣೆ, ಕಳಪೆ ಆಹಾರ ಪದಾರ್ಥ ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಎಚ್ಚರಿಕೆ ನೀಡಿದರು.
























