ಬಾಂಗ್ಲಾದೇಶದಲ್ಲಿನ ಇಸ್ಕಾನ್ ಸಂಸ್ಥೆ ನಂಟು ಹೊಂದಿರುವವರಿಗೆ ಸರ್ಕಾರದಿಂದ ಮತ್ತೊಂದು ಆಘಾತ

ಚಿನ್ಮಯ ಕೃಷ್ಣದಾಸ್ ಸೇರಿದಂತೆ 17 ಮಂದಿಯ ಬ್ಯಾಂಕ್ ಖಾತೆಗಳನ್ನು ನಿರ್ಬಂಧಿಸಿ ಆದೇಶ

ಢಾಕಾ: ಬಾಂಗ್ಲಾದೇಶದಲ್ಲಿ ಇಸ್ಕಾನ್ ಮೇಲಿನ ಸರ್ಕಾರದ ಪ್ರಹಾರ ಮುಂದುವರಿದಿದೆ. ಇಸ್ಕಾನ್‌ಗೆ ಸಂಬಂಧಿಸಿದ 17 ಮಂದಿಯ ಬ್ಯಾಂಕ್ ಖಾತೆಗಳನ್ನು 30 ದಿನಗಳ ಕಾಲ ನಿರ್ಬಂಧಿಸುವಂತೆ ಬಾಂಗ್ಲಾದೇಶ ಸರ್ಕಾರದ ಅಧಿಕಾರಿಗಳು ಆದೇಶ ನೀಡಿದ್ದಾರೆ. ದೇಶದ್ರೋಹ ಆರೋಪದಡಿ ಕೆಲವು ದಿನಗಳ ಹಿಂದೆ ಬಂಧಿತರಾದ ಸಂಸ್ಥೆಯ ಮಾಜಿ ಸದಸ್ಯ ಚಿನ್ಮಯ ಕೃಷ್ಣದಾಸ್ ಅವರ ಖಾತೆಯೂ ಸೇರಿದೆ ಎಂದು ವರದಿಯಾಗಿದೆ.

ಚಿನ್ಮಯ ಕೃಷ್ಣದಾಸ್ ಅವರ ಬೆಂಬಲಿಗರು ಮತ್ತು ಭದ್ರತಾ ಸಿಬ್ಬಂದಿ ನಡುವೆ ನಡೆದ ಘರ್ಷಣೆಯಲ್ಲಿ ವಕೀಲನೊಬ್ಬನ ಹತ್ಯೆ ಬಳಿಕ ಇಸ್ಕಾನ್ ಮೇಲೆ ನಿಷೇಧ ಹೇರುವಂತೆ ಕೋರಿ ಬಾಂಗ್ಲಾದೇಶ ಹೈಕೋರ್ಟ್‌ಗೆ ಅಲ್ಲಿನ ಸರ್ಕಾರ ಅರ್ಜಿ ಸಲ್ಲಿಸಿತ್ತು. ವಿಭಿನ್ನ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಈ ಸಂಬಂಧ ಗುರುವಾರ ನಿರ್ದೇಶನಗಳನ್ನು ಹೊರಡಿಸಿರುವ ಬಾಂಗ್ಲಾದೇಶ ಹಣಕಾಸು ಗುಪ್ತಚರ ಘಟಕ (ಬಿಎಫ್‌ಐಯು), ಅವರ ಖಾತೆಗಳಿಂದ ಎಲ್ಲ ರೀತಿಯ ವಹಿವಾಟುಗಳನ್ನು ಒಂದು ತಿಂಗಳ ಕಾಲ ಅಮಾನತುಗೊಳಿಸಿದೆ.

ಬಾಂಗ್ಲಾದೇಶ ಕೇಂದ್ರ ಬ್ಯಾಂಕ್ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಹಣಕಾಸು ಗುಪ್ತಚರ ಸಂಸ್ಥೆ, ಈ 17 ವ್ಯಕ್ತಿಗಳ ಮಾಲೀಕತ್ವದ ಎಲ್ಲ ವ್ಯವಹಾರ ವಹಿವಾಟುಗಳಿಗೆ ಸಂಬಂಧಿಸಿದ ಖಾತೆಗಳ ಇತ್ತೀಚಿನ ಸ್ಟೇಟ್‌ಮೆಂಟ್ ಸೇರಿದಂತೆ ಎಲ್ಲ ಮಾಹಿತಿಗಳನ್ನು ಕಾರ್ಯಾಚರಣೆಯ ಮೂರು ದಿನಗಳ ಒಳಗೆ ಕಳುಹಿಸುವಂತೆ ಸೂಚಿಸಿದೆ.

















































error: Content is protected !!
Scroll to Top