ನಕ್ಸಲ್ ಬಾಧಿತ ಪ್ರದೇಶ ಬೊಲ್ಲೊಟ್ಟು ಸೇತುವೆ ನಿರ್ಮಾಣಕ್ಕೆ 4 ಕೋಟಿ ರೂ. ಮಂಜೂರು

ಕಾರ್ಕಳ : ನಕ್ಸಲ್ ಬಾಧಿತ ಪ್ರದೇಶ ಈದು ಗ್ರಾಮದ ಬೊಲ್ಲೊಟ್ಟುಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯ 50 : 54ರ ಅಡಿಯಲ್ಲಿ 4 ಕೋಟಿ ರೂ. ಮಂಜೂರಾಗಿದೆ. ಈ ಹಿನ್ನೆಲೆಯಲ್ಲಿ ಸೇತುವೆ ನಿರ್ಮಾಣಗೊಳ್ಳಲಿರುವ ಪರಿಸರಕ್ಕೆ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ ಶನಿವಾರ ಭೇಟಿ ನೀಡಿದರು.

2003ರ ನ. 17ರಂದು ಈದು ಬೊಲ್ಲೊಟ್ಟುನಲ್ಲಿ ರಾಜ್ಯದ ಪ್ರಥಮ ನಕ್ಸಲ್ ಎನ್‌ಕೌಂಟರ್ ನಡೆದಿತ್ತು. ಇಲ್ಲಿ ಹರಿಯುವ ಪಲ್ಗುಣಿ ನದಿ ದಾಟಲು ಸೇತುವೆಯ ಬೇಡಿಕೆಯನ್ನು ಆ ಭಾಗದ ಜನತೆ ಮುಂದಿಟ್ಟಿದ್ದರು. ಆದರೆ, ಎನ್‌ಕೌಂಟರ್ ನಡೆದ 21 ವರ್ಷಗಳಿಂದ ಆ ಬೇಡಿಕೆ ಈಡೇರಲಿಲ್ಲ. ಸ್ಥಳೀಯ ಕುಟುಂಬಗಳು ಪ್ರತಿ ವರ್ಷ ಮಳೆಗಾಲದಲ್ಲಿ ಸುತ್ತು ಬಳಸಿ ಸಂಪರ್ಕ ಸಾಧಿಸುತ್ತಿದ್ದರು. ಇದೀಗ ಸೇತುವೆ ನಿರ್ಮಾಣಕ್ಕೆ ಸರಕಾರ ಹಣ ಮಂಜೂರಾತಿಗೊಳಿಸಿದ್ದು ಸ್ಥಳೀಯರ ಬಹುವರ್ಷಗಳ ಬೇಡಿಕೆಯೊಂದು ಈಡೇರಿದಂತಾಗಲಿದೆ.

ಪ್ರಯತ್ನ ನಡೆಸುತ್ತೇನೆ
ಈದು ಬೊಲ್ಲೊಟ್ಟು ಕುಗ್ರಾಮವಾಗಿಯೇ ಉಳಿಯಬಾರದು. ಅಲ್ಲಿನ ಮೂಲಭೂತ ಬೇಡಿಕೆಗಳನ್ನು ಈಡೇರಿಸುವಲ್ಲಿ ಪ್ರಯತ್ನಿಸುತ್ತೇನೆ. ಪ್ರಸಕ್ತ ಸಾಲಿನಲ್ಲಿ ಸೇತುವೆ ನಿರ್ಮಾಣಕ್ಕೆ ಸರಕಾರ ಅನುದಾನ ನೀಡಿದೆ. ಮುಂದಿನ ದಿನಗಳಲ್ಲಿ ರಸ್ತೆ ಅಭಿವೃದ್ಧಿಗೂ ಸರಕಾರದಿಂದ ಅನುದಾನ ಒದಗಿಸುವ ಪ್ರಯತ್ನ ನಡೆಸುತ್ತೇನೆ. ಬೊಲ್ಲೊಟ್ಟು ಪ್ರಶಾಂತ ಪೂಜಾರಿ ಅವರ ಮನೆಯಲ್ಲಿ ನಕ್ಸಲ್ ಎನ್‌ಕೌಂಟರ್ ನಡೆದು 21 ವರ್ಷ ಸಂದರೂ, ಸರಕಾರದಿಂದ ಮನೆ ನಿರ್ಮಾಣಕ್ಕೆ ಪರಿಹಾರ ಸಿಕ್ಕಿಲ್ಲ. ಅವರು ಸಾಲ ಮಾಡಿ ಮನೆ ನಿರ್ಮಾಣ ಮಾಡಿದ್ದಾರೆ. ಅವರಿಗೆ ಪರಿಹಾರ ಧನ ಒದಗಿಸಿಕೊಡಬೇಕೆನ್ನುವ ಬೇಡಿಕೆಯನ್ನು ಈ ಸಂದರ್ಭ ಇಟ್ಟಿದ್ದಾರೆ. ಅವರ ಬೇಡಿಕೆಗೆ ಅನುಗುಣವಾಗಿ ಸರಕಾರದಿಂದ ಅಥವಾ ನನ್ನ ವೈಯಕ್ತಿಕ ನೆಲೆಯಲ್ಲಿ ಸಹಕರಿಸುವುದಾಗಿ ಭರವಸೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಕೆಎಂಎಫ್ ನಿರ್ದೇಶಕ ಸುಧಾಕರ ಶೆಟ್ಟಿ ಮುಡಾರು, ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಬಾನು ಭಾಸ್ಕರ್, ಈದು ಗ್ರಾ.ಪಂ. ಅಧ್ಯಕ್ಷ ಸದಾನಂದ ಪೂಜಾರಿ, ಜ್ವಾಲಪ್ರಸಾದ್, ಶ್ರೀಧರ್ ಭಟ್, ರಘುರಾಮ್ ಭಟ್, ಸುರೇಶ್ ಆಚಾರ್ಯ, ಶಂಕರ್, ಸುಧೀರ್‌ ಶೆಟ್ಟಿ, ಜಗನ್ನಾಥ್‌ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

















































error: Content is protected !!
Scroll to Top