ಟಾಟಾ ವಂಶದ ಸಾಧನೆಗಳ ಉಲ್ಲೇಖ ಪಠ್ಯದಲ್ಲಿರಬೇಕು – ರಾಜೇಂದ್ರ ಭಟ್ ಅಭಿಮತ

ಕಾರ್ಕಳ : ನಮ್ಮ ಪಠ್ಯದಲ್ಲಿ ಮೊಗಲ್, ಕದಂಬರು, ಚೋಳರು ಮೊದಲಾದ ರಾಜವಂಶಗಳ ವಿಸ್ತಾರವಾದ ಉಲ್ಲೇಖಗಳು ಇವೆ. ಅದೇ ರೀತಿ ಭಾರತದ ಶ್ರೇಷ್ಠತೆಗೆ ಅತಿ ದೊಡ್ಡ ಕೊಡುಗೆ ನೀಡಿರುವ ಟಾಟಾ ವಂಶದ ಸಾಧನೆಗಳ ಉಲ್ಲೇಖವೂ ಇರಬೇಕೆಂದು ವಿಕಸನದ ರಾಷ್ಟ್ರೀಯ ತರಬೇತಿದಾರ ರಾಜೇಂದ್ರ ಭಟ್ ಅಭಿಪ್ರಾಯಪಟ್ಟರು.

ಅವರು ಮಂಗಳವಾರ ಹೊಟೇಲ್‌ ಪ್ರಕಾಶ್‌ ಸಭಾಂಗಣದಲ್ಲಿ ಕಾರ್ಕಳ ಸಾಹಿತ್ಯ ಸಂಘ ಆಯೋಜನೆ ಮಾಡಿದ್ದ ರತನ್ ಟಾಟಾ ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರತನ್ ಟಾಟಾ ಅವರು ತನ್ನ ಸಂಪತ್ತಿನ 60% ಭಾಗವನ್ನು ಸಮಾಜಕ್ಕೆ ಅರ್ಪಣೆ ಮಾಡುವುದರ ಮೂಲಕ ಮಾದರಿಯಾಗಿದ್ದಾರೆ. ಮಾನವೀಯ ಸ್ಪಂದನೆಗಳ ಮೂಲಕ ತಾನೋರ್ವ ಲೆಜೆಂಡ್‌ ಎಂಬುದನ್ನು ಸಾಬೀತು ಪಡಿಸಿರುವ ರತನ್ ಟಾಟಾ ಅವರ ಹೃದಯ ಶ್ರೀಮಂತಿಕೆ, ಕೊಡುಗೆಗಳು, ಬದುಕಿ ತೋರಿದ ಮೌಲ್ಯಗಳು ಮುಂದಿನ ಜನಾಂಗ ಅರಿಯುವಂತಾಗಬೇಕು. ರತನ್ ಟಾಟಾ ರಾಷ್ಟ್ರಕ್ಕೆ ನೀಡಿದ ಸೇವೆಯನ್ನು ಪರಿಗಣಿಸಿ ಕೇಂದ್ರ ಸರಕಾರ ಭಾರತರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಬೇಕೆಂದು ರಾಜೇಂದ್ರ ಭಟ್‌ ಹೇಳಿದರು.

ಸಾಹಿತ್ಯ ಸಂಘದ ಕಾರ್ಯಾಧ್ಯಕ್ಷ ಕೆ.ಪಿ. ಶೆಣೈ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಸಂಘದ ಗೌರವ ಅಧ್ಯಕ್ಷ ತುಕಾರಾಮ ನಾಯಕ್ ಮತ್ತು ಕೋಶಾಧಿಕಾರಿ ಎಸ್. ನಿತ್ಯಾನಂದ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ಸುಮತಿ ಪಿ. ಕಾರ್ಯಕ್ರಮ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಬಿ. ಪದ್ಮನಾಭ ಗೌಡ ವಂದಿಸಿದರು.

































































error: Content is protected !!
Scroll to Top