ಸೋಲಿನ ಹತಾಶೆಯಲ್ಲಿ ಕಾಂಗ್ರೆಸ್‌ನಿಂದ ಕಾರ್ಕಳ ಪ್ರವಾಸೋದ್ಯಮದ ಕಗ್ಗೊಲೆ – ಸುನಿಲ್‌ ಕುಮಾರ್‌ ಕಿಡಿ

ಉಡುಪಿ : ವಿನಾಃ ಕಾರಣ ವಿವಾದಗಳನ್ನು ಸೃಷ್ಟಿಸಿ ಕಾರ್ಕಳದಲ್ಲಿ ಕಾಂಗ್ರೆಸ್ ಪ್ರವಾಸೋದ್ಯಮದ ಕಗ್ಗೊಲೆ‌ ಮಾಡುತ್ತಿದೆ ಎಂದು ಶಾಸಕ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್‌ ಕುಮಾರ್‌ ಕಿಡಿಕಾರಿದರು.
ಪರಶುರಾಮ ವಿವಾದ ವಿಚಾರವಾಗಿ ನ. 13ರಂದು ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಪರಶುರಾಮ ಥೀಮ್‌ ಪಾರ್ಕ್‌ ಕುರಿತಂತೆ ಹಬ್ಬಿರುವ ವಿವಾದದ ಕುರಿತು ದಾಖಲೆಯೊಂದಿಗೆ ತಿರುಗೇಟು ನೀಡಿರುವ ಸುನಿಲ್‌ ಕುಮಾರ್‌ ಉದಯ ಶೆಟ್ಟಿ ವಿರುದ್ಧ ಹರಿಹಾಯ್ದರು.

ಕಾರ್ಕಳವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಮಾಡುವ ನಿಟ್ಟಿನಲ್ಲಿ ಬೈಲೂರಿನಲ್ಲಿ ಪರಶುರಾಮ ಥೀಮ್‌ ಪಾರ್ಕ್‌ ಯೋಜನೆ ಕೈಗೆತ್ತಿಕೊಳ್ಳಲಾಯಿತು. ಸರಕಾರದಿಂದ 6 ಕೋಟಿ 75 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು ಉಳಿದ ನಾಲ್ಕೂವರೆ ಕೋಟಿ ರೂ. ಮಂಜೂರಾತಿಯಾಗಿದ್ದರೂ ಪಾವತಿಯಾಗಿಲ್ಲ. ಕಾಂಗ್ರೆಸಿಗರು ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಸೋಲಿನ ಹತಾಶೆಯಿಂದ ಈ ಯೋಜನೆಯ ಬಗ್ಗೆ ಸುಳ್ಳು ಆರೋಪಗಳನ್ನು ಸೃಷ್ಟಿಸುತ್ತಾ ಬಂದಿದ್ದಾರೆ. ಆರೋಪಗಳ ಮೂಲಸಂಗತಿಗಳು ಪ್ರತಿ ನಿತ್ಯ ಬದಲಾಗುತ್ತಾ ಪ್ರವಸೋದ್ಯಮದ ಕಗ್ಗೋಲೆ ನಡೆದಿರುವುದು ವಿಷಾದನೀಯ ಎಂದರು.

ಹಸ್ತಾಂತರಕ್ಕೂ ಮೊದಲೇ ತನಿಖೆ
ಶಿಲ್ಪಿ ಮೂರ್ತಿಯ ವಿನ್ಯಾಸ ಬದಲಾವಣೆ ಮಾಡುವುದಕ್ಕಾಗಿ ಅನುಮತಿ ಪಡೆದು ಅದರ ಪ್ರಕ್ರಿಯೆಯನ್ನು ಪ್ರಾರಂಭ ಮಾಡಿದ್ದಾರೆ. ಅಲ್ಲದೆ ಸಂಬಂಧಪಟ್ಟ ಯಾವುದೇ ಇಲಾಖೆಗೆ ಹಸ್ತಾಂತರಗೊಳ್ಳದೆ ನಿರ್ಮಿತಿ ಕೇಂದ್ರ ಮೂರ್ತಿಯ ಕಾರ್ಯಚಟುವಟಿಕೆ ಮಾಡುತ್ತಿದೆ. ಆದರೆ, ಆರೋಪ ಪ್ರತ್ಯಾರೋಪಗಳಿಂದಾಗಿ ಸರಕಾರದ ಈ ಯೋಜನೆ ಜಿಲ್ಲಾಡಳಿತ ಅಥವಾ ಇಲಾಖೆಗೆ ಹಸ್ತಾಂತರಗೊಳ್ಳುವ ಮೊದಲೇ ತನಿಖೆಗೊಳಪಟ್ಟ ಮೊದಲ ಯೋಜನೆ ಎಂದು ಬೇಸರ ವ್ಯಕ್ತಪಡಿಸಿದರು.

5 ವಿಚಾರಗಳಿಗೆ ಬದ್ಧ
2023ರಲ್ಲಿ ನಾನು ಹೇಳಿದ್ದ 5 ಸಂಗತಿಗಳನ್ನು ನಾನು ಮತ್ತೆ ಪುನರುಚ್ಚರಿಸುತ್ತೇನೆ. ಗುಣಮಟ್ಟದಲ್ಲಿ ವ್ಯತ್ಯಾಸವಾಗಿದ್ದಲ್ಲಿ ತನಿಖೆಯಾಗಲಿ, ಬಾಕಿಯಿರುವ ಹಣ ಬಿಡುಗಡೆಯಾಗಲಿ, ಪ್ರವಾಸೋದ್ಯಮಕ್ಕೆ ಅನುವು ಮಾಡಿಕೊಡಿ, ಕಾಮಗಾರಿಯನ್ನು ಪ್ರಾರಂಭ ಮಾಡಿ ಹಾಗೂ ಪಾರ್ಕ್‌ನ ಬಗ್ಗೆ ಅಪಪ್ರಚಾರ ಮಾಡುವವರ ಬಗ್ಗೆ ಕ್ರಮಕೈಗೊಳ್ಳಿ. ಆದರೆ, ಈ ಯಾವ ವಿಷಯದ ಬಗ್ಗೆಯೂ ಕಾಂಗ್ರೆಸ್ಸಾಗಲಿ, ಜಿಲ್ಲಾಡಳಿತ ಅಥವಾ ಸರಕಾರವಾಗಲಿ ಕ್ರಮಕೈಗೊಳ್ಳುತ್ತಿಲ್ಲ ಎಂದು ಸುನಿಲ್‌ ಕುಮಾರ್‌ ಹೇಳಿದರು.

ಪೊಲೀಸ್‌ ಇಲಾಖೆಯಿಂದ ಹೊಸ ಪರಂಪರೆಗೆ ನಾಂದಿ
ಒಂದು ಸರಕಾರಿ ಕಾಮಗಾರಿ ಸರಿಯಾಗಿಲ್ಲ ಎಂದಾದಲ್ಲಿ ಅದಕ್ಕೆ ಸಂಬಂಧಪಟ್ಟ ಇಲಾಖೆ ಮತ್ತು ಗುತ್ತಿಗೆದಾರರ ಮೇಲೆ ಮೊಕದ್ದಮೆ ದಾಖಲಿಸಬೇಕು. ಆದರೆ, ಇಲ್ಲಿ ಪ್ರವಾಸೋದ್ಯಮ ಇಲಾಖೆ, ನಿರ್ಮಿತಿ ಕೇಂದ್ರ, ಜಿಲ್ಲಾಡಳಿತ ಅಥವಾ ಯಾವುದೇ ಇಲಾಖೆಯೂ ದೂರು ನೀಡಿಲ್ಲ. ಬದಲಾಗಿ ದೂರು ಕೊಟ್ಟಿರುವುದು ಕಾಂಗ್ರೆಸ್‌ ಮುಖಂಡ. ಓರ್ವ ಕಾಂಗ್ರೆಸ್‌ ಮುಖಂಡ, ಖಾಸಗಿ ವ್ಯಕ್ತಿ ನೀಡಿರುವ ದೂರಿಗೆ ಎಫ್‌ಐಆರ್‌ ದಾಖಲಾಗುತ್ತದೆ. ಹೀಗೆ ಸರಕಾರಿ ಯೋಜನೆಗೆ ಯಾವುದೋ ಒಬ್ಬ ಖಾಸಗಿ ವ್ಯಕ್ತಿ ನೀಡಿದ ದೂರಿಗೆ ಎಫ್‌ಐಆರ್‌ ಮಾಡುವ ಮೂಲಕ ಪೊಲೀಸ್‌ ಇಲಾಖೆ ಹೊಸ ಪರಂಪರೆಗೆ ನಾಂದಿ ಹಾಡಿದೆ. ಅಲ್ಲದೆ ಕೃಷ್ಣ ನಾಯ್ಕ್‌ ಅವರ ಗೋದಾಮಿಗೆ ಮಹಜರು ಮಾಡಲು ಪೊಲೀಸರು ಪರಾಜಿತ ಅಭ್ಯರ್ಥಿಯನ್ನು ಕರೆದುಕೊಂಡು ಹೋಗಿದ್ದಾರೆ. ಯಾಕೆ ಅವರನ್ನು ಮಹಜರಿಗೆ ಕರೆದುಕೊಂಡು ಹೋದರು ಎಂಬುದಕ್ಕೆ ಪೊಲೀಸ್‌ ಇಲಾಖೆ ಉತ್ತರ ನೀಡಬೇಕು ಎಂದರು.

ಹಣ ಬಿಡುಗಡೆಯ ಹೇಳಿಕೆಯಿಲ್ಲ
ಹಣ ಬಿಡುಗಡೆ ಮಾಡಬೇಕಾಗಿರುವುದು ಕಾಂಗ್ರೆಸ್‌ ಸರಕಾರ. ಪರಾಜಿತ ಅಭ್ಯರ್ಥಿ ಉಳಿದ ಎಲ್ಲವನ್ನೂ ಮಾತನಾಡುತ್ತಾರೆ. ಆದರೆ, ಹಣ ಬಿಡುಗಡೆ ಮಾಡಬೇಕೆಂದು ಇಲ್ಲಿಯವರೆಗೂ ಒಂದು ಹೇಳಿಕೆಯನ್ನೂ ಕೊಟ್ಟಿಲ್ಲ. ಬೆಂಗಳೂರಿಗೆ ಹೋಗಿ ಜನ ಸೇರಿಸಿ ಪ್ರತಿಭಟನೆ ಮಾಡಿದವರು ಸರಕಾರ ಬಾಕಿಯಿರುವ ಹಣ ಬಿಡುಗಡೆ ಒತ್ತಾಯಿಸುವುದಿಲ್ಲ ಎಂದು ಸುನಿಲ್‌ ಕುಮಾರ್‌ ಆರೋಪಿಸಿದರು.

ಪಂಚಾಯತ್‌ ಅಧ್ಯಕ್ಷರ ದೂರು ಎಫ್‌ಐಆರ್‌ ಆಗಿಲ್ಲ
ಕಾಮಗಾರಿಯನ್ನು ಮುಂದುವರೆಸಲು ಕೋರ್ಟ್‌ ಹೇಳಿದಾಗ, ರಸ್ತೆಗೆ ಅಡ್ಡಲಾಗಿ ಮಣ್ಣು ಹಾಕುತ್ತಾರೆ. ಇದರ ಕುರಿತಂತೆ ಯರ್ಲಪಾಡಿ ಗ್ರಾ. ಪಂ. ಅಧ್ಯಕ್ಷರು ದೂರು ನೀಡಿದ್ದಾಗ್ಯೂ ಇಲ್ಲಿಯವರೆಗೂ ಎಫ್‌ಐಆರ್‌ ದಾಖಲಾಗಿಲ್ಲ. ಇದು ಈ ಪ್ರಕರಣದಲ್ಲಿ ನಡೆಯುತ್ತಿರುವ ರಾಜಕೀಯ ತನಿಖೆ. ಇದೊಂದು ನಿಷ್ಪಕ್ಷಪಾತವಾದ ತನಿಖೆ ಎನ್ನಲು ನಾಚಿಕೆಯಾಗುತ್ತದೆ ಎಂದ ಅವರು ತನಿಖೆ ಯಾವ ದಿಕ್ಕಿನಲ್ಲಿ ಹೋಗುತ್ತದೆ ಅರ್ಥೈಸಿಕೊಳ್ಳಬೇಕಾಗಿದೆ ಎಂದರು.

ರಕ್ಷಣೆ ನೀಡಿದವರಿಂದಲೇ ತನಿಖೆ
ಮೂರ್ತಿಯ ಮರುವಿನ್ಯಾಸಕ್ಕಾಗಿ ಶಿಲ್ಪಿ ಮನವಿ ಮಾಡಿದಾಗ ಜಿಲ್ಲಾಧಿಕಾರಿಗಳು ಮರುವಿನ್ಯಾಸಕ್ಕೆ ಅನುಮತಿಯ ಆದೇಶ ನೀಡಿರುತ್ತಾರೆ. ಆದ್ದರಿಂದ ಶಿಲ್ಪಿ ವಿಗ್ರಹವನ್ನು ತೆರವುಗೊಳಿಸುವ ಪ್ರಕ್ರಿಯೆ ಪ್ರಾರಂಭ ಮಾಡಿದರು. ಅಲ್ಲದೆ ತಹಶೀಲ್ದಾರರ ಆದೇಶದಂತೆ ಪೊಲೀಸ್‌ ಭದ್ರತೆಯಲ್ಲಿ ಮರುವಿನ್ಯಾಸಕ್ಕೆ ಮೂರ್ತಿ ಕೆಲ ಭಾಗಗಳನ್ನು ತೆರೆವುಗೊಳಿಸಲಾಗುತ್ತದೆ. ಆದರೆ, ಆ ಸಂದರ್ಭ ಕಾಂಗ್ರೆಸಿಗರು ಮೂರ್ತಿ ಕಳವು ಆಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿರುವುದು ಯಾರಿಗೆ ಎಂದು ಪ್ರಶಿಸಿರುವ ಸುನಿಲ್‌ ಕುಮಾರ್‌ ಅಂದು ಮೂರ್ತಿಯನ್ನು ತೆಗೆಯುವಾಗ ರಕ್ಷಣೆ ಕೊಟ್ಟ ಅಧಿಕಾರಿಗಳಿಂದಲೇ ಇಂದು ತನಿಖೆಯಾಗುತ್ತಿರುವುದು ಆಶ್ಚರ್ಯಕರ. ತನಿಖೆಯ ದಿಕ್ಕು ಎತ್ತ ಸಾಗುತ್ತಿದೆ ಅನ್ನುವುದನ್ನು ಇದುವೆ ಸ್ಪಷ್ಟಪಡಿಸುತ್ತದೆ ಎಂದರು.

ಫೈಬರ್‌ ಉದಯ
ಮೂರ್ತಿ ಫೈಬರ್‌ನದ್ದು ಕಂಚಿನದಲ್ಲ ಎಂಬುದು ಈ ಪ್ರಕರಣದ ಮೂಲ ಆರೋಪವಾಗಿತ್ತು. ಆದರೆ, ಇದರ ಬಗ್ಗೆ ದೂರು ದಾಖಲಿಸಿದವರು ಹೈ ಕೋರ್ಟ್‌ನಲ್ಲಿ ಮೂರ್ತಿಯ ಬಗ್ಗೆ ಆಕ್ಷೇಪವಿಲ್ಲ ಶಿಲ್ಪಿ ಜಿಎಸ್‌ಟಿ ಕಟ್ಟದಿರುವ ಬಗ್ಗೆ ನಮ್ಮ ದೂರು ಎನ್ನುತ್ತಾರೆ. ಅಲ್ಲದೆ, ಆ ಸಂದರ್ಭ ಇದು ಫೈಬರ್‌ ಅಲ್ಲ, ಕಂಚಿನದ್ದೇ ಮೂರ್ತಿ ಎಂದು ಹೈಕೋರ್ಟ್‌ ಸ್ಷಷ್ಟಪಡಿಸಿತ್ತು. ಇದರಿಂದಾಗಿ ವಿನಾ ಕಾರಣವಾಗಿ ಅಂದು ಬೇರೆ ಬೇರೆ ಆರೋಪ ಹೊರಿಸಿ ಇಂದು ಶಿಲ್ಪಿಯ ಬಗ್ಗೆ ಅನುಕಂಪದ ಮಾತುಗಳನ್ನಾಡುತ್ತಿರುವ ಫೈಬರ್‌ ಉದಯನಿಗೆ ಮಹಜರು ಮಾಡಲು ಹೋದಾಗ, ರಸ್ತೆಗೆ ಮಣ್ಣು ಅಡ್ಡಲಾಗಿ ಹಾಕಿದಾಗ ಶಿಲ್ಪಿ ಬಗ್ಗೆ ಅನುಕಂಪ ಇರಲಿಲ್ಲವೇ ? ಎಂದು ಪ್ರಶ್ನಿಸಿದರು.

ಸಿಓಡಿ ತನಿಖೆ
ಈ ಪ್ರಕರಣದ ಬಗ್ಗೆ ಸಿಓಡಿ ತನಿಖೆಯಾಗಬೇಕೆಂದು ಮುಖ್ಯಮಂತ್ರಿಗಳು ಫೆಬ್ರವರಿ 6ರಂದು ಆದೇಶಿಸಿರುತ್ತಾರೆ. ಇದರ ನಡುವೆ ಎ. 23ರಂದು ಶಿಲ್ಪಿ ನನಗೆ ಕಾಮಗಾರಿ ಮುಂದುವರಿಸಲು ಅವಕಾಶ ಕೊಡಿ ಎಂದು ಕೋರ್ಟ್‌ನಿಂದ ಆರ್ಡರ್‌ ತರುತ್ತಾರೆ. ಆದರೆ ಶಿಲ್ಪಿ ಮೂರ್ತಿಯ ಕಾಮಗಾರಿ ಮಾಡಬಾರದೆಂದು ಮೆ. 2ರಂದು ರಾತ್ರಿ ರಸ್ತೆಗೆ ಅಡ್ಡಲಾಗಿ ಮಣ್ಣು ಹಾಕುತ್ತಾರೆ. ಮೇ 5 ರಂದು ಸಿಓಡಿ ತನಿಖೆಗೆ ಸಿಎಂ ಟಿಪ್ಪಣಿ ಆದೇಶವಾಗುತ್ತದೆ. ಮೊದಲ ಆದೇಶವಾದ ಫೆಬ್ರವರಿಯಲ್ಲೇ ಸಿಓಡಿ ತನಿಖೆ ಮುಗಿಸಬಹುದಿತ್ತಲ್ಲಾ ಎಂದು ಪ್ರಶ್ನಿಸಿರುವ ಸುನಿಲ್‌ ಕುಮಾರ್‌ ತನಿಖೆ ಹೆಸರಲ್ಲಿ ದಿನಕ್ಕೊಂದು ಕತೆ ಹೇಳುತ್ತಾ ಒಂದು ವರ್ಷ ಕಾಲಹರಣವಾಗಿದೆ ಎಂದರು.

ಪ್ರಶ್ನಾವಳಿಗಳು ತನಿಖೆಗೆ ಪೂರಕವಾಗಿರಬೇಕು
ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ತನಿಖೆಗಳನ್ನು ಮಾಡಿ ಎಂದು ಅಂದು ಹೇಳಿದ್ದೆ. ಇಂದೂ ಅದನ್ನೇ ಹೇಳುತ್ತೇನೆ. ಆದರೆ, ಕಳೆದ ವಾರ ನಿರ್ಮಿತಿ ಕೇಂದ್ರದ ಅಧಿಕಾರಿಗಳ ವಿಚಾರಣೆ, ಗ್ಯಾರೇಜ್‌ ಮಾಲಕರು, ಲಾರಿ ಚಾಲಕರ ವಿಚಾರಣೆಗಳನ್ನು ಮಾಡಿದ್ದೀರಿ. ಈ ಎಲ್ಲದರ ಬಗ್ಗೆ ಎರಡು ದಿನದಲ್ಲಿ ಪ್ರಶ್ನಾವಳಿ ಬಿಡುಗಡೆ ಮಾಡುತ್ತೇನೆ ಎಂದ ಅವರು ಪ್ರಶ್ನಾವಳಿಗಳು ತನಿಖೆಗೆ ಪೂರಕವಾಗಿರಬೇಕು ಬದಲಾಗಿ ಕಾಂಗ್ರೆಸ್‌ ಹೇಳಿದ ಪ್ರಶ್ನೆಗಳನ್ನು ಕೇಳುವುದಲ್ಲ. ಇವತ್ತಿನ ತನಿಖೆಯ ಪ್ರಶ್ನಾವಳಿಗಳು ಕಾಂಗ್ರೆಸ್‌ ಕಚೇರಿಯಲ್ಲಿ ಸಿದ್ಧಗೊಂಡಿದೆ ಎಂದು ಆರೋಪಿಸಿದರಲ್ಲದೇ ಪೊಲೀಸರು ತಮ್ಮ ಅನುಭವಕ್ಕೆ ತಕ್ಕಂತೆ ತನಿಖೆ ನಡೆಸುತ್ತಿಲ್ಲ ಎಂದಿದ್ದಾರೆ.

ಕೊಲೆ ಆರೋಪಿಗೆ 3ದಿನ ಕಸ್ಟಡಿ
ಅಜೆಕಾರು ಕೊಲೆ ಪ್ರಕರಣದ ಆರೋಪಿಗೆ ಕೇವಲ 3 ದಿನ ಪೊಲೀಸ್ ಕಸ್ಟಡಿ‌ಗೆ ಪಡೆದಿರುವ ಪೊಲೀಸರು ಮೂರ್ತಿ ವಿಚಾರದಲ್ಲಿ ಅಮಾಯಕ ಶಿಲ್ಪಿಯನ್ನು 7 ದಿನ ಕಸ್ಟಡಿಗೆ ಪಡೆದಿರುತ್ತಾರೆ. ಇದೆಂಥಹ ವಿಪರ್ಯಾಸ ಎಂದು ಸುನಿಲ್‌ ಕುಮಾರ್‌ ಪ್ರಶ್ನಿಸಿದರು.

ಉದಯ ಶೆಟ್ಟಿ ಹೇಳಿಕೆಗೆ ಸುನಿಲ್‌ ಕುಮಾರ್‌ ಕೌಂಟರ್‌
ಮನೆಯಲ್ಲಿರಬೇಕಾದವರು ವಿಧಾನಸೌಧದಲ್ಲಿದ್ದಾರೆ ಎಂಬ ಮುನಿಯಾಲು ಉದಯ ಕುಮಾರ್‌ ಶೆಟ್ಟಿಯ ಹೇಳಿಕೆಗೆ ತಿರುಗೇಟು ನೀಡಿದರು ಸುನಿಲ್‌ ಕುಮಾರ್‌ ಯಾರು ಮನೆಯಲ್ಲಿ ಕೂರಬೇಕು, ಯಾರು ವಿಧಾನಸೌಧದಲ್ಲಿರಬೇಕು ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ. ಅಂತೆಯೇ ಜನ ನಾನು ವಿಧಾನ ಸೌಧದಲ್ಲಿರಬೇಕು ಎಂದು ಹಾಗೆಯೇ ನೀವು ಮನೆಯಲ್ಲಿರಬೇಕು ಎಂದು ಕೂರಿಸಿದ್ದಾರೆ ಎಂದರು.

ಮಾನಸೀಕತೆ ಬದಲಾಗಿಲ್ಲ
ಅಂದು ಜೀವಂತವಾಗಿದ್ದಾಗಲೇ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಮಾಜಿ ಶಾಸಕ ಗೋಪಾಲ ಭಂಡಾರಿಯವರ ಶವಯಾತ್ರೆ ಮಾಡಿದಂತಹ ಉದಯ ಶೆಟ್ಟಿ ಮಾನಸೀಕತೆ ಬದಲಾಗಿಲ್ಲ. ಅದೇ ಮಾನಸೀಕತೆಯಿಂದ ಇಂದು ಶಿಲ್ಪಿಯ ಅನ್ನಕ್ಕೆ ಕಲ್ಲು ಹಾಕುವ ಕಾರ್ಯಕ್ಕೆ ಮುಂದಾಗಿದ್ದಾರೆ. ಅಲ್ಲದೆ ತನಿಖೆಯಲ್ಲಿ ಯಾರ್ಯ್ಯಾರ್ಯಾದ್ದೋ ಹೆಸರು ಬರುವಂತೆ ಪೊಲೀಸರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಹೇಳಿದ ಸುನಿಲ್‌ ಕುಮಾರ್‌ ದೂರು ನೀಡಿದ್ದು, ಮಹಜರು ಮಾಡಿದ್ದು, ರಸ್ತೆಗೆ ಮಣ್ಣು ಹಾಕಿರುವುದು, ಹಣ ಬಿಡುಗಡೆ ಮಾಡದಿರುವುದು, ತನಿಖೆಗೆ ಪ್ರಶ್ನಾವಳಿಗಳನ್ನು ಸಿದ್ದಪಡಿಸಿರುವುದು ಎಲ್ಲವೂ ಕಾಂಗ್ರೆಸ್.‌ ಇದರಿಂದ ಒಟ್ಟಾರೆ ಇದರ ಉದ್ದೇಶ ಕಾರ್ಕಳ ವಿಕಾಸವಾಗಬಾರದು ಎಂಬುದು ಸ್ಪಷ್ಟವಾಗುತ್ತದೆ ಎಂದರು.

ಫೈಬರ್‌ ಉದಯ ಓರ್ವ ಅವಕಾಶವಾದಿ ಆತ ಟಾರ್ಚರ್‌ ಉದಯ. ಗೋಲ್‌ಮಾಲ್‌ ಉದಯ ನಡೆಸಿರುವ ಕಳಪೆ ಕಾಮಗಾರಿಗಳ ಬಗ್ಗೆ ಎಫ್‌ಐಆರ್‌ ದಾಖಲಿಸುವುದಾದರೆ ನೂರಾರು ಎಫ್‌ಐಆರ್‌ ದಾಖಲಾಗಬಹುದು ಎಂದು ಸುನಿಲ್‌ ಕುಮಾರ್‌ ಹೇಳಿದರು.

ಅಪಪ್ರಚಾರದ ವಿರುದ್ಧವೂ ಕ್ರಮಕೈಗೊಳ್ಳಿ
ಶಿಲ್ಪಿಯ ವಿಚಾರಣೆಯಲ್ಲಿರುವ ತರಾತುರಿಯಂತೆ ಅಪಪ್ರಚಾರ ಮಾಡುವವರ ಬಗ್ಗೆ ಮತ್ತು ಸುಳ್ಳಿನ ಸರಮಾಲೆ ಮಾಡುತ್ತಿರುವವರ ಬಗ್ಗೆಯೂ ಕ್ರಮಕೈಗೊಳ್ಳಬೇಕಿದೆ ಎಂದು ಜಿಲ್ಲಾಡಳಿತ ಹಾಗೂ ಸರಕಾರಕ್ಕೆ ಆಗ್ರಹಿಸಿದ ಅವರು ಪ್ರವಾಸೋದ್ಯಮದ ಕಗ್ಗೋಲೆಯ ಬಗ್ಗೆ ಜನ ಜಾಗೃತರಾಗಬೇಕು ಎಂದರು.

ಜಿ.ಪಂ. ಮಾಜಿ ಸದಸ್ಯ ಸುಮಿತ್‌ ಶೆಟ್ಟಿ ಕೌಡೂರು, ಜನಜಾಗೃತಿ ವೇದಿಕೆ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ, ನೀರೆ ಗ್ರಾ.ಪಂ. ಅ‍ಧ್ಯಕ್ಷ ಸಚ್ಚಿದಾನಂದ ಪ್ರಭು, ತಾ.ಪಂ. ಮಾಜಿ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್‌ ಶೆಟ್ಟಿ ಕುಕ್ಕುಂದೂರು, ಸಂತೋಷ್‌ ಬೈಲೂರು, ಗುರುರಾಜ್‌ ಮಾಡ ಮೊದಲಾದವರಿದ್ದರು.





























































































error: Content is protected !!
Scroll to Top