ಶಿರ್ಲಾಲು ಪ್ರೌಢಶಾಲಾ ರಜತ ಮಹೋತ್ಸವ – ಆಮಂತ್ರಣ ಪತ್ರಿಕೆ ಬಿಡುಗಡೆ

ಕಾರ್ಕಳ : ನಾಲ್ಕೂರು ನರಸಿಂಗರಾವ್‌ ಸ್ಮಾರಕ ಸರಕಾರಿ ಪದವಿ ಪೂರ್ವ ಕಾಲೇಜು ಶಿರ್ಲಾಲು ಪ್ರೌಢಶಾಲಾ ವಿಭಾಗದ ರಜತ ಮಹೋತ್ಸವ ಡಿ. 5,6 ಹಾಗೂ 7ರಂದು ನಡೆಯಲಿದ್ದು, ನ. 11ರಂದು ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜರುಗಿತು. ಪ್ರೌಢಶಾಲಾ ರಚನಾ ಸಮಿತಿ ಸದಸ್ಯ, ಜಿಲ್ಲಾ ಪಂ. ಮಾಜಿ ಸದಸ್ಯ ಗೋಪಾಲ್ ನಾಯಕ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಶಿರ್ಲಾಲು, ಕೆರ್ವಾಶೆ, ಅಂಡಾರು ಹಾಗೂ ಜಾರ್ಕಳ ಮುಂಡ್ಲಿ ಸೇರಿದಂತೆ ನಾಲ್ಕು ಗ್ರಾಮದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಾಲಾ ಸ್ಥಾಪನೆಗಾಗಿ ಪ್ರಾರಂಭದ ದಿನಗಳಲ್ಲಿ ಮಾಡಿದ ಹೋರಾಟ ಪ್ರತಿಫಲವಾಗಿ ಇಂದು ಸುಸಜ್ಜಿತವಾದ ಶಾಲೆಯಿದ್ದು, ಮುಂದೆಯೂ ಈ ಶಾಲೆಯಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯುವಂತಾಗಲಿ ಎಂದು ಅಭಿಪ್ರಾಯಪಟ್ಟರು.

ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಗುಣಪಾಲ ಕಡಂಬ ಮಾತನಾಡಿ, ಶಾಲಾ ಪ್ರಾರಂಭದ ದಿನಗಳು, ಕಾರ್ಯಚಟುವಟಿಕೆಗಳು ಹಾಗೂ ರಜತ ಮಹೋತ್ಸವ ಕಾರ್ಯಕ್ರಮದ ಕುರಿತು ‌ವಿವರಿಸಿದರು.
ವೇದಿಕೆಯಲ್ಲಿ ರಜತ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ  ಶಾಂತಿರಾಜ್ ಜೈನ್, ಕೋಶಾಧಿಕಾರಿ ಸಂದೀಪ್ ಪೂಜಾರಿ,  ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶೀತಲ್ ಕುಮಾರ್ ಜೈನ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ನರಸಿಂಹ ನಾಯಕ್‌ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆಂಗ್ಲ ಭಾಷ ಉಪನ್ಯಾಸಕ ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು. ಪಿಯು ವಿಭಾಗದ ಪ್ರಾಂಶುಪಾಲ ಬೇಬಿ ಕೆ.‌ ಈಶ್ಚರಮಂಗಳ ವಂದಿಸಿದರು.

















































error: Content is protected !!
Scroll to Top